ಬಿಗ್ ಬಾಸ್ ಸೀಸನ್-7 ಆರಂಭಕ್ಕೆ ಕ್ಷಣಗಣನೆ

ಬಿಗ್ ಬಾಸ್ ಸೀಸನ್-7 ಆರಂಭಕ್ಕೆ ಕ್ಷಣಗಣನೆ

LK   ¦    Oct 13, 2019 09:10:46 AM (IST)
   ಬಿಗ್ ಬಾಸ್ ಸೀಸನ್-7 ಆರಂಭಕ್ಕೆ ಕ್ಷಣಗಣನೆ

 ರಾಮನಗರ: ಕಿರುತೆರೆಯ ಪ್ರಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-7 ಪ್ರಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾನುವಾರ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಸಕಲ ರೀತಿಯಲ್ಲಿ ಸಜ್ಜಾಗಿದೆ.

ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಮನರಂಜನಾ ಪಾರ್ಕ್‍ನಲ್ಲಿ ಬಿಗ್ ಬಾಸ್ ಸೀಸನ್-7ರ ರಿಯಾಲಿಟಿ ಶೋ ನಡೆಸಲು ಸುಸಜ್ಜಿತವಾದ ಮನೆಯ ಸೆಟ್ ಅನ್ನು ಸ್ಥಾಪಿಸಲಾಗಿದೆ. ಅ.13ರ ಭಾನುವಾರ ಅದ್ಧೂರಿ ಕಾರ್ಯಕ್ರಮ ವಿಧ್ಯುಕ್ತವಾಗಿ ಚಾಲನೆಗೊಳ್ಳಲಿದ್ದು, ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‍ಬಾಸ್ ಪ್ರಸಾರಗೊಳ್ಳಲಿದೆ. ಹೀಗಾಗಿ ಬಿಗ್ ಬಾಸ್ ಸೀಸನ್-7ರ ರಿಯಾಲಿಟಿ ಶೋ ನಡೆಸಿಕೊಡುವ ನಟ ಕಿಚ್ಚ ಸುದೀಪ್ ಸೇರಿದಂತೆ ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿಕೊಳ್ಳಲು ಬಿಡದಿ ಕಡೆಗೆ ಬರಲಾರಂಭಿಸಿದ್ದಾರೆ.

ಈ ಬಾರಿಯ ರಿಯಾಲಿಟಿ ಶೋ ನಲ್ಲಿ ಒಟ್ಟು 17 ಸ್ಪರ್ಧಿಗಳು ಭಾಗವಹಿಸಲಿದ್ದು, ಮೊದಲಿಗೆ 15 ಸ್ಪರ್ಧಿಗಳು ಮಾತ್ರ ಆಗಮಿಸಲಿದ್ದಾರೆ. ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಉಳಿದ ಇಬ್ಬರು ಬಿಗ್ ಬಾಸ್ ಮನೆ ಸೇರಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿಯ ಸೀಸನ್ ನಲ್ಲಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯರಿಗೂ ಅವಕಾಶ ನೀಡಲಾಗಿತ್ತು, ಆದರೆ ಈ ಬಾರಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಪ್ರವೇಶವಿದ್ದು, ಸಿನಿಮಾ ತಾರೆಯರು, ನಿರ್ದೆಶಕರು, ತಂತ್ರಜ್ಞರು, ಕಿರುತೆರೆ ನಟ-ನಟಿಯರು, ಸಂಗೀತಗಾರರು, ಪತ್ರಿಕಾ ಮತ್ತು ಕ್ರೀಡಾ ಕ್ಷೇತ್ರದಲ್ಲಿನ ಸಾಧಕರು ಬಿಗ್ ಬಾಸ್ ರಿಯಾಲಿಟಿ ಶೋ ನ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ.

ಪರಿಕಲ್ಪನೆ ಸೆಲೆಬ್ರಿಟಿಗಳು, ಲೊಕೇಷನ್, ಮನೆಯ ಇಂಟೀರಿಯರ್, ಟಾಸ್ಕ್ ಹೀಗೆ ಬಿಗ್ ಬಾಸ್ ನಲ್ಲಿ ಹಲವು ಬದಲಾವಣೆಗಳಿವೆ. ಪ್ರತಿದಿನ 1 ತಾಸು ರಿಯಾಲಿಟಿ ಶೋ ಪ್ರಸಾರವಾಗಲಿದ್ದು 100 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಎಲ್ಲಾ ರಾಜಕಾರಣ ಮಸಲತ್ತುಗಳನ್ನು ಗೆಲ್ಲುವವರಿಗೆ 50 ಲಕ್ಷರೂ ಬಹುಮಾನದ ಜೊತೆಗೆ ಒಂದು ಫ್ಲಾಟ್ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಯಾರ್ಯಾರು ಭಾಗವಹಿಸಲಿದ್ದಾರೆ?

ಬಿಗ್ ಬಾಸ್ ಸೀಸನ್-7 ರಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ ಎಂಬುದನ್ನು ಗೌಪ್ಯವಾಗಿ ಇಡಲಾಗಿದೆ. ಶೋ ಲಾಂಚ್ ಆದ ನಂತರವೇ ಯಾರೆಲ್ಲಾ ಸ್ಪರ್ಧಿಯಾಗುತ್ತಾರೆ? ಏನೇನು ವಿಶೇಷತೆಗಳಿರುತ್ತವೆ? ನಟ ಕಿಚ್ಚ ಸುದೀಪ್ ಏನೆಲ್ಲಾ ಟಾಸ್ಕ್ ಕೊಡುತ್ತಾರೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಬಿಗ್ ಬಾಸ್ ಮನೆಯ ಸದಸ್ಯರ ಪಟ್ಟಿ ದೊಡ್ಡದಾಗಿದೆ.

ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆ, ನಟ ಶ್ರೀನಗರ ಕಿಟ್ಟಿ, ಹಾಸ್ಯ ನಟರಾದ ಕುರಿಪ್ರತಾಪ್, ರಾಜು ತಾಳಿಕೋಟೆ, ಶಿವರಾಜ್ ಕೆಆರ್ ಪೇಟೆ, ಪೋಷಕ ನಟ ಜೈಜಗದೀಶ್, ಸರಿಗಮಪ ಖ್ಯಾತಿಯ ಜಾನಪದ ಹಾಡುಗಾರ ಹನುಮಂತಪ್ಪ, ನಟಿಯರಾದ ರಾಗಿಣಿ ದ್ವಿವೇದಿ, ಚೈತ್ರ ವಾಸುದೇವನ್, ದುನಿಯಾ ರಶ್ಮಿ, ಸುಜಾತ, ಶೈನ್ ಶೆಟ್ಟಿ, ಕಿರಣ್ ರಾಜ್, ಭೂಮಿಕಾ ಶೆಟ್ಟಿ, ವಿಜಯಲಕ್ಷ್ಮಿ, ದೀಪಿಕಾದಾಸ್, ವಾಸುಕಿ ವೈಭವ್, ಗುರುಲಿಂಗ ಸ್ವಾಮೀಜಿ, ಪಂಕಜ್ ನಾರಾಯಣ್, ರಂಜನಿರಾಘವ, ಚಂದನ್ ಕುಮಾರ್, ನೇಹಾ ಪಾಟಿಲ್ ಇವೆರಲ್ಲರೂ ಬಿಗ್ ಬಾಸ್ ಮನೆಯಲ್ಲಿ ವಾಸ ಮಾಡಲು ನಿರ್ಧರಿಸಿದ್ದು, ಅಂತಿಮವಾಗಿ 17 ಸ್ಪರ್ಧಿಗಳು ಆಯ್ಕೆಯಾಗಲಿದ್ದಾರೆಂದು ಹೇಳಲಾಗುತ್ತಿದೆ.

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಮನರಂಜನಾ ಪಾರ್ಕ್ ನಲ್ಲಿ ಬಿಗ್ ಬಾಸ್ ಸೀಸನ್-6 ರ ರಿಯಾಲಿಟಿ ಶೋ ಯಶಸ್ವಿಯಾಗಿ ಚಿತ್ರೀಕರಣ ನಡೆದಿತ್ತು. ನಂತರ ಕಳೆದ ಫೆಬ್ರವರಿ 22ರಂದು ಶೋ ಗಾಗಿ ನಿರ್ಮಿಸಿದ್ದ ಬಿಗ್ ಬಾಸ್ ಮನೆ ಶಾರ್ಟ್ ಸರ್ಕೂಟ್‍ನಿಂದ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು. ದುರ್ಘಟನೆಯಲ್ಲಿ ಬಿಗ್ ಬಾಸ್ ಮನೆ, ಪಕ್ಕದಲ್ಲಿಯೇ ಇದ್ದ ಮಾದರಿ ಬಿಗ್ ಬಾಸ್ ಮನೆ ಹಾಗೂ ವ್ಯಾಕ್ಸಿ ಮ್ಯೂಸಿಯಂ ಎಲ್ಲವೂ ಬೆಂಕಿಗೆ ಆಹುತಿಯಾಗಿ ಸುಮಾರು 13 ಕೋಟಿ ರುಪಾಯಿ ನಷ್ಟ ಸಂಭವಿಸಿತ್ತು. ಇದೀಗ ಸೀಸನ್ 7ರ ಶೋ ಗಾಗಿ ಮತ್ತೆ ಬಿಗ್ ಬಾಸ್ ಮನೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ.