ಮಾಧ್ಯಮದ ಅನುಚಿತ ವರದಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನವರಸನಾಯಕ ಜಗ್ಗೇಶ್

ಮಾಧ್ಯಮದ ಅನುಚಿತ ವರದಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನವರಸನಾಯಕ ಜಗ್ಗೇಶ್

MS   ¦    Feb 23, 2021 04:56:58 PM (IST)
ಮಾಧ್ಯಮದ ಅನುಚಿತ ವರದಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ನವರಸನಾಯಕ ಜಗ್ಗೇಶ್

ಬೆಂಗಳೂರು: ಮಾಧ್ಯಮ ಅಂದರೆ ತಂದೆ ಸಮಾನದಲ್ಲಿರಬೇಕು. ನಮ್ಮ ತಪ್ಪುಗಳನ್ನು ತಿದ್ದಬೇಕು. ಇಲ್ಲಸಲ್ಲದನ್ನು ಹೇಳಬಾರದು. ನಿನ್ನೆ ನನಗೆ ಯಾರಾದರೂ ಹೊಡೆಯಲು ಬಂದಿದ್ದರಾ? ಕರ್ನಾಟಕದಲ್ಲಿ ಯಾರಿಗಾದರೂ ನನ್ನ ಮೈ ಮುಟ್ಟಲು ಆಗುತ್ತಾ? ಏನು ಮಾತಾಡ್ತೀರಾ ನೀವು ಎಂದು ಖಾಸಗಿ ಪತ್ರಿಕೆ ಹಾಗೂ ಮಾಧ್ಯಮ ಒಂದರ ವರದಿಯ ಮೇಲೆ ಆಕ್ರೋಶಗೊಂಡಿರುವ ನವರಸನಾಯಕ ಜಗ್ಗೇಶ್​ಮಾತನಾಡಿದ್ದಾರೆ.

ದರ್ಶನ್​ ಅಭಿಮಾನಿಗಳ ಜತೆ ನಡೆದ ಘರ್ಷಣೆ ಸಂಬಂಧ ಟ್ವೀಟ್​ ಮೂಲಕ ತಮ್ಮ ಆಕ್ರೋಶವನ್ನು ತೋರಿಸಿ ಕೊಂಡಿರುವ ನವರಸನಾಯಕ ಜಗ್ಗೇಶ್, ಬನ್ನೂರಿನಲ್ಲಿ ದರ್ಶನ್​ ಅಭಿಮಾನಿಗಳ ಜತೆಯಲ್ಲಿ ನಡೆದಂತಹ ಘಟನೆ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ನಾನೇಕೆ ಹಿಂದೆ-ಮುಂದೆ ಮಾತನಾಡಲಿ, ನಾನೊಬ್ಬ ಆರ್​ಎಸ್​ಎಸ್​ ಕಾರ್ಯಕರ್ತನಾಗಿದ್ದು, ನಮ್ಮ ಅಂಶಗಳು ಏನೇನು ಇದೆಯೋ ಅದರ ಬಗ್ಗೆ ಮಾತನಾಡಬೇಕಿರುವುದು ನನ್ನ ಧರ್ಮ. ನಮ್ಮ ಪತ್ರಿಕೆ ಬಗ್ಗೆ ಮಾತನಾಡಿದಾಗ ಸ್ವಾಭಾವಿಕವಾಗಿ ಬೇರೆಯವರ ಮನಸ್ಸಿಗೆ ನೋವಾಗಬಹುದು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ನಾನು ಸಿನಿಮಾ ರಂಗದಲ್ಲಿ ಸುಮಾರು 40 ವರ್ಷ ಕೆಲಸ ಮಾಡಿದ್ದೇನೆ.ಬಹುತೇಕ ಎಲ್ಲ ಮಾಧ್ಯಮ ಮಿತ್ರರಿಗೆ ನಾನೇನು ಎಂದು ಗೊತ್ತಿದೆ. ಆದರೆ, ಒಂದು ವಿಚಾರವನ್ನು ಇಟ್ಟುಕೊಂಡು ನನ್ನ ತೇಜೋವಧೆ ಮಾಡಲಾಗುತ್ತಿದೆ. ನಾನೇನು ದರೋಡೆ ಅಥವಾ ಕಳ್ಳತನ ಮಾಡಿದ್ದೀನಾ? ಅಥವಾ ಯಾರಿಗಾದ್ರೂ ಹೆದರುಕೊಂಡು ಬಚ್ಚಿಟ್ಟುಕೊಂಡಿದ್ದೀನಾ? ನಿನ್ನೆ ನನ್ನ ಬಳಿ ಬಂದ ಹುಡುಗರ ಹತ್ತಿರ ಅವರ ಮುಂದೆಯೇ ಕುಳಿತು ಮಾತನಾಡಿದ್ದೇನೆ. ನಾನೇನು ಓಡಿ ಹೋಗಲಿಲ್ಲ. ನಿನ್ನೆ ರಾತ್ರಿಯು ಸಹ ಅವರೆಲ್ಲ ನನ್ನ ಬಳಿ ಬಂದು ಮಾತನಾಡಿದ್ದಾರೆ ಅಷ್ಟೆ ಹೊರತು ಬೇರೆ ಏನೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದರೊಂದಿಗೆ ಇಂದಿನ ಸಿನಿಮಾ ಸ್ಥಿತಿಗತಿಯ ಬಗ್ಗೆ ನೇರವಾಗಿ ಮಾತನಾಡಿರುವ ನಟ, 'ಇಂದು ಕನ್ನಡ ಸಿನಿಮಾ ಕತೆ ಏನಾಗಿದೆ ಗೊತ್ತಾ ನಿಮಗೆ, ಒಬ್ಬ ನಟನ ಸಿನಿಮಾ ಹಿಟ್​ ಆಯ್ತು ಅಂದ್ರೆ ಇನ್ನೊಬ್ಬ ನಟ ಇನ್ನೊಂದು ಹುನ್ನಾರ ಮಾಡ್ತಾನೆ. ನಾವು ಒಗ್ಗಟ್ಟಾಗಿ ಬೆಳೆಯೋಣ, ನಾವು ಕನ್ನಡದವರು, ನಮ್ಮ ಸಿನಿಮಾ ಎಂಬ ಭಾವನೆ ಯಾರಲ್ಲೂ ಬಂದಿಲ್ಲ. ಎಲ್ಲರೂ ಅವರು ಮಾತ್ರ ಬೆಳೆಯಬೇಕು ಎಂದು ಯೋಚಿಸುತ್ತಿದ್ದಾರೆ. ಹೀಗೆ ಮುಂದುವರೆದಲ್ಲಿ ಸಿನಿಮಾ ಕ್ಷೇತ್ರದಲ್ಲಿಯೂ ರಾಜಕಾರಣ ಹಾಗೂ ರೌಡಿಸಂ ಬರಲು ಹೆಚ್ಚು ಸಮಯವಿಲ್ಲ ಎಂದು ಅವರ ಅಸಮಾಧಾನವನ್ನು ವ್ಯಕ್ತಪಡಿಸಿದರು.