ಮಳವಳ್ಳಿಯಲ್ಲಿ ಆನೆ ಬಲ ಚಿತ್ರದ ಆಡಿಯೋ ಬಿಡುಗಡೆ

ಮಳವಳ್ಳಿಯಲ್ಲಿ ಆನೆ ಬಲ ಚಿತ್ರದ ಆಡಿಯೋ ಬಿಡುಗಡೆ

LK   ¦    Nov 09, 2019 08:09:56 PM (IST)
ಮಳವಳ್ಳಿಯಲ್ಲಿ ಆನೆ ಬಲ ಚಿತ್ರದ ಆಡಿಯೋ ಬಿಡುಗಡೆ

ಮಳವಳ್ಳಿ: ಕನ್ನಡ ಭಾಷೆ ಉಳಿಯಲು ಕನ್ನಡ ಚಲನಚಿತ್ರಗಳು ಪ್ರಮುಖ ಪಾತ್ರ ವಹಿಸಲಿದ್ದು, ಕನ್ನಡ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳಲು ಕನ್ನಡಿಗರು ಸಹಕಾರ ನೀಡಬೇಕೆಂದು ರಾಮಾರೂಢಮಠದ ಮಠಾಧಿಪತಿ ಬಸವನಂದಸ್ವಾಮೀಜಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಆನೆ ಬಲ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾವನ್ನು ನಂಬಿಕೊಂಡು ನೂರಾರು ಮಂದಿ ಜೀವಿಸುತ್ತಿದ್ದಾರೆ, ಪ್ರತಿಯೊಬ್ಬ ಕನ್ನಡಿಗನು ಕೂಡ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಿದರೆ ಮಾತ್ರ ಅವರ ಬದುಕು ಹಸನಾಗುತ್ತದೆ ಎಂದರು.

ಆನೆಬಲ ಸಿನಿಮಾದಲ್ಲಿ ಮಳವಳ್ಳಿ ಪಟ್ಟಣದ ಇತಿಹಾಸ ಪ್ರಸಿದ್ಧಿ ಪಡೆದಿರುವ ಸಿಡಿ ಹಬ್ಬದ ಪೂರ್ಣ ಚಿತ್ರಣವನ್ನು ಹಾಡೊಂದರಲ್ಲಿ ಅಳವಡಿಸಿ ಬಿಡುಗಡೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ, ಮಳವಳ್ಳಿ ಹಬ್ಬವನ್ನು ನಾಡಿನತ್ತ ಪಸರಿಸಿದ ಚಲನಚಿತ್ರದ ತಂಡಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಡಾ. ಕೆ.ಅನ್ನದಾನಿ ಮಾತನಾಡಿ, ಮಳವಳ್ಳಿ ತಾಲೂಕು ತಮ್ಮದೇ ಆದ ಇತಿಹಾಸವನ್ನು ಹೊಂದಿದೆ, ಮಂಟೇಸ್ವಾಮಿ, ಸಿದ್ದಪ್ಪಾಜಿ ಮತ್ತು ಮಹದೇಶ್ವರರು ನಡೆದಾಡಿರುವ ಈ ಮಣ್ಣಿನಲ್ಲಿ ಜಾನಪದ ಶ್ರೇಷ್ಟತೆಯನ್ನು ಪಡೆದುಕೊಂಡಿದೆ. ಇಲ್ಲಿನ ಸಂಸ್ಕೃತಿಯನ್ನು ಹಾಡಿನಲ್ಲಿ ಆಳವಡಿಸಿರುವುದು ಖುಷಿ ತಂದಿದೆ, ಮಳವಳ್ಳಿ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ಮಾಪಕ ವೇಣುಗೋಪಾಲ್, ನಿರ್ದೇಶಕ ರಾಜು ಸೂನಗಹಳ್ಳಿ, ನಟ ಸಾಗರ್, ನಟಿ ರಕ್ಷಿತಾ, ಸಂಗೀತ ನಿರ್ದೇಶಕ ಪೂರ್ಣಚಂದ್ರತೇಜಸ್ವಿ, ಮಧು, ಶಿವರಾಜು, ಸತೀಶ್, ಮಾದೇಶ್, ಸೇರಿದಂತೆ ಇತರರು ಇದ್ದರು.