ಡಿಜಿಟಲ್ ನೆಟ್ವರ್ಕ್ ಲೋಕಕ್ಕೆ ರವಿಚಂದ್ರನ್ ಹೆಜ್ಜೆ

ಡಿಜಿಟಲ್ ನೆಟ್ವರ್ಕ್ ಲೋಕಕ್ಕೆ ರವಿಚಂದ್ರನ್ ಹೆಜ್ಜೆ

Jayashree Aryapu   ¦    Apr 06, 2021 05:55:32 PM (IST)
ಡಿಜಿಟಲ್ ನೆಟ್ವರ್ಕ್ ಲೋಕಕ್ಕೆ ರವಿಚಂದ್ರನ್ ಹೆಜ್ಜೆ

ಬೆಂಗಳೂರು: ಪ್ರೇಮಲೋಕದ ದೊರೆ ಎಂದೇ ಪ್ರಸಿದ್ಧ ಪಡೆದ ರವಿಚಂದ್ರನ್ ಇದೀಗ ಡಿಜಿಟಲ್ ಲೋಕಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಹೌದು!, ಕ್ರೇಜಿ ಸ್ಟಾರ್ ಇನ್ಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಕಾಣಸಿಗಲಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ರವಿಚಂದ್ರನ್ ಅವರು ಇಲ್ಲಿಯವರೆಗೆ ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್‍ಗಳಿಂದ ದೂರ ಇದ್ದರು. ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ರವಿಚಂದ್ರನ್ ಬಣ್ಣದ ಲೋಕದ ಕೆಲಸದಲ್ಲಿಯೇ ಮುಳುಗಿ ಹೋಗಿದ್ದರು.

ಇದೀಗ ಯುಗಾದಿ ಹಬ್ಬದ ದಿನದಂದು ಅಧಿಕೃತವಾಗಿ ಟ್ವಿಟರ್, ಇನ್‍ಸ್ಟಾಗ್ರಾಂ ಹಾಗೂ ಫೇಸ್‍ಬುಕ್ ತೆರೆಯುವ ಮೂಲಕ ಡಿಜಿಟಲ್ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾಗಳಿಗೆ ಲಗ್ಗೆ ಇಡುತ್ತಿರುವ ಕುರಿತು 10 ಸೆಕೆಂಡ್ ನ ಟೀಸರ್ ರೂಪದ ವಿಡಿಯೋ ರಿಲೀಸ್ ಮಾಡಿ, ಫಿಲ್ಮ್​ ಸ್ಟೈಲ್​ನಲ್ಲಿ ಸೂಚನೆ ನೀಡಿದ್ದಾರೆ.

ಕ್ರೇಜಿಸ್ಟಾರ್ ಅವರ ಡಿಜಿಟಲ್ ಲೋಕದ ಆಗಮನಕ್ಕೆ ಕನ್ನಡ ಚಿತ್ರರಂಗ ಸ್ವಾಗತ ಕೋರಿದೆ. ನಿರ್ದೇಶಕ ರಘುರಾಮ್ ಹಾಗೂ ನಟ ರವಿಶಂಕರ್ ಸೇರಿದಂತೆ ಚಂದನವನದ ನಟಿಯರು ರವಿಚಂದ್ರನ್ ಅವರ ಆಗಮನಕ್ಕೆ ಶುಭ ಕೋರಿದ್ದಾರೆ. ಅದೇ ರೀತಿ ಸಾಕಷ್ಟು ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.

ಇನ್ನು ಮುಂದೆ ರವಿಚಂದ್ರನ್ ತಮ್ಮ ಸಿನಿಮಾದ ಬಗ್ಗೆ ನೇರವಾಗಿ ಅಭಿಮಾನಿಗಳಿಗೆ ಮಾಹಿತಿ ನೀಡಲಿದ್ದಾರೆ ಅನ್ನುವುದು ಅಭಿಮಾನಿಗಳಿಗೆ ಸಂತಸದ ವಿಷಯ.