ನೂರನೇ ಪ್ರದರ್ಶನ ಕಂಡ ಕೊಡಗ್‍ರ ಸಿಪಾಯಿ ಕೊಡವ ಚಲನಚಿತ್ರ

ನೂರನೇ ಪ್ರದರ್ಶನ ಕಂಡ ಕೊಡಗ್‍ರ ಸಿಪಾಯಿ ಕೊಡವ ಚಲನಚಿತ್ರ

CI   ¦    Jan 12, 2020 07:32:34 PM (IST)
ನೂರನೇ ಪ್ರದರ್ಶನ ಕಂಡ ಕೊಡಗ್‍ರ ಸಿಪಾಯಿ ಕೊಡವ ಚಲನಚಿತ್ರ

ಮಡಿಕೇರಿ: ಕೂರ್ಗ್ ಕಾಫಿವುಡ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಉಳ್ಳುವಂಗಡ ಕಾವೇರಿ ಉದಯ ರಚಿಸಿ, ಕೊಡವ ಮಕ್ಕಟ ಕೂಟ ಪ್ರಕಟಿಸಿದ ಕೊಡಗ್‍ರ ಸಿಪಾಯಿ ಚಲನಚಿತ್ರದ ನೂರನೇ ಪ್ರದರ್ಶನ ಶನಿವಾರ ಸಂಜೆ ಸೂರ್ಲಬ್ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈಗಾಗಲೇ ಈ ಕೊಡವ ಚಲನಚಿತ್ರ ಜಿಲ್ಲೆಯ ವಿವಿಧ ಶಾಲಾ ಕಾಲೇಜು ಹಾಗೂ ಕೊಡವ ಸಮಾಜದಲ್ಲಿ ಪ್ರದರ್ಶನಗೊಂಡಿತ್ತು. 100 ನೇ ಪದರ್ಶನವಾಗಿ ಸೂರ್ಲಬ್ಬಿ ನಾಡಿನ ಜನತೆಗೆ ಉಚಿತ ಪ್ರದರ್ಶನ ಏರ್ಪಡಿಸಲಾಗಿತ್ತು.

ಪ್ರಾಸ್ತವಿಕವಾಗಿ ಮಾತನಾಡಿದ ಚಿತ್ರ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಕೊಡಗಿನ ಎಲ್ಲ ಸಂಘ ಸಂಸ್ಥೆಗಳು ಸೇರಿದಂತೆ ಕೊಡವ ಸಮಾಜಗಳು ನಮಗೆ ಚಿತ್ರ ಪ್ರದರ್ಶನಕ್ಕೆ ಉಚಿತವಾಗಿ ಸಮಾಜದ ಸಭಾಂಗಣವನ್ನು ಒದಗಿಸಿಕೊಟ್ಟಿದೆ. ಈಗಾಗಲೇ 99 ಪ್ರದರ್ಶನ ಕಂಡ ಚಿತ್ರ ನನ್ನ ತಾಯಿಯ ಊರಿನಲ್ಲೇ ನೂರನೇ ಪ್ರದರ್ಶನ ಕಾಣುತ್ತಿರುವುದು ನನಗೆ ಹೆಮ್ಮೆಯಾಗಿದೆ. ಚಿತ್ರ ಪ್ರದರ್ಶನಕ್ಕೆ ನನಗೆ ಸಹಕರಿಸಿದ ಎಲ್ಲ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಇದರೊಂದಿಗೆ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಅವರ ಸಹಾಯ ಕೂಡ ಈ ನೂರನೇ ಪ್ರದರ್ಶನಕ್ಕೆ ಸಹಕಾರಿಯಾಗಿದೆ ಎಂದು ನೆನಪಿಸಿಕೊಂಡರು. ಮುಂದೆಯೂ ತನಗೆ ಇಂತಹ ಸಹಕಾರವನ್ನು ಕೊಡಗಿನ ಜನತೆ ನೀಡಿದ್ದಲ್ಲಿ ಕೊಡವ ಧಾರವಾಹಿ ಸೇರಿದಂತೆ ಹಲವು ಚಲನಚಿತ್ರ ನಿರ್ಮಾಣ ಮಾಡಲು ತನಗೆ ಆಸೆಯಿದೆ ಎಂದರು.

ಉದ್ಯಮಿ ನಾಪಂಡ ಮುತ್ತಪ್ಪ ಮಾತನಾಡಿ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪನವರು ವರ್ಷಕ್ಕೊಂದು ಕೊಡವ ಚಲನಚಿತ್ರ ಮಾಡುತ್ತಿರುವುದು ಹೆಮ್ಮೆಯ ವಿಷಯ ಹಾಗೂ ಇದು ಭಾಷೆಯ ಬೆಳವಣಿಗೆಗೆ ಪ್ರಯೋಜನಕಾರಿ ಎಂದರು.

ತಾತಂಡ ಪ್ರಭ ನಾಣಯ್ಯ ಮಾತನಾಡಿ ಪ್ರಕಾಶ್‍ರ ಚಿತ್ರ ನೂರನೇ ಪ್ರದರ್ಶನವಾಗಿ ಅವರ ತಾಯಿಯ ಊರಿನಲ್ಲಿ ಹಾಗೂ ಅವರು ಕಲಿತ ಶಾಲೆಯಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇವರು ಮತ್ತಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.

ತಂಬುಕುತ್ತೀರ ಗಪ್ಪು ಸೋಮಯ್ಯ ಉಚಿತವಾಗಿ ಚಿತ್ರ ಪ್ರದರ್ಶನ ಮಾಡಲು ಕಾರಣರಾದ ಪ್ರಕಾಶ್ ಕಾರ್ಯಪ್ಪ ಹಾಗೂ ಬೊಳ್ಳಜಿರ ಅಯ್ಯಪ್ಪ ಅವರಿಗೆ ಧನ್ಯವಾದ ಸಮರ್ಪಿಸಿದರು. ಮತ್ತಷ್ಟು ಉತ್ತಮ ಕಾರ್ಯಗಳು ಇವರಿಂದ ನಡೆಯಲಿ ಎಂದು ಆಶಿಸಿದರು.

ಚಿತ್ರ ಪ್ರದರ್ಶನಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟದ ಧನು ರಂಜನ್, ಬಿದ್ದಂಡ ಉತ್ತಮ್, ಬೊಳ್ಳಜಿರ ಬಿ ಅಯ್ಯಪ್ಪ, ಅಡ್ಡಂಡ ಸೊನು ಬೋಪಯ್ಯ, ಮಂದೇಯಂಡ ರಜಿ ಬೆಳ್ಯಪ್ಪ, ಸರ್ಕಂಡ ಲೋಕೇಶ್, ಹರೀಶ್ ನಾಣಯ್ಯ ಹಾಗೂ ಚಲನಚಿತ್ರ ವಿತರಕ ಬಾಳೆಯಡ ಪ್ರತೀಶ್ ಪೂವಯ್ಯ ಸೇರಿದಂತೆ ಸೂರ್ಲಬ್ಬಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುದಿಯತಂಡ ಲೋಕೇಶ್, ಉಪಾಧ್ಯಕ್ಷ ವಾಸು ದೇವಯ್ಯ, ಕಾರ್ಯದರ್ಶಿ ಮೇದುರ ನಾಣಯ್ಯ, ಗೌರಾವಾಧ್ಯಕ್ಷ ತಂಬುಕುತ್ತೀರ ರಮೇಶ್, ಉಪ ಕಾರ್ಯದರ್ಶಿ ಮೇದುರ ರಜಿ ನಾಣಯ್ಯ, ಮುದಂಡ ಮಧು, ಗೌರವಾಧ್ಯಕ್ಷ ತಂಬುಕುತ್ತೀರ ಸುಬ್ಬಯ್ಯ, ಶಾಲಾ ಉಪಧ್ಯಾಯ ಪ್ರೇಮ್ ಕುಮಾರ್, ನಾಡಿನ ಅಧ್ಯಕ್ಷ ತಿಮ್ಮಯ್ಯ ಹಾಗೂ ಮಾಜಿ ಸೈನಿಕ ತಂಬುಕುತ್ತೀರ ಗಪ್ಪು ಸೋಮಯ್ಯ ವೇದಿಕೆಯಲ್ಲಿ ಇದ್ದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ನಿರೂಪಿಸಿ, ಕಾರ್ಯಕ್ರಮ ವಂದಿಸಿದರು.