ಫೆ.28ರಂದು ರಾಜ್ಯಾದ್ಯಂತ ‘ಆನೆಬಲ' ಚಿತ್ರ ತೆರೆಗೆ

ಫೆ.28ರಂದು ರಾಜ್ಯಾದ್ಯಂತ ‘ಆನೆಬಲ' ಚಿತ್ರ ತೆರೆಗೆ

LK   ¦    Feb 18, 2020 07:34:56 PM (IST)
ಫೆ.28ರಂದು ರಾಜ್ಯಾದ್ಯಂತ ‘ಆನೆಬಲ' ಚಿತ್ರ ತೆರೆಗೆ

ಮದ್ದೂರು: ಜಿಲ್ಲೆಯ ಗ್ರಾಮೀಣ ಸೊಗಡಿನ ಕಥಾ ಹಂದರದೊಡನೆ ಸ್ಥಳೀಯ ಕಲಾವಿದರ ಅಭಿನಯದೊಂದಿಗೆ ಫೆ.28ರಂದು ತೆರೆಗೆ ಬರಲಿರುವ 'ಆನೆಬಲ' ಕನ್ನಡ ಚಲನಚಿತ್ರದ ಯಶಸ್ಸಿಗೆ ಜಿಲ್ಲೆಯ ಪ್ರೇಕ್ಷಕರು ಸಹಕರಿಸುವಂತೆ ಚಿತ್ರದ ನಿರ್ದೇಶಕ ಸೂನಗಹಳ್ಳಿ ರಾಜು ಮನವಿ ಮಾಡಿದ್ದಾರೆ.

ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಆನೆಬಲ ಚಲನಚಿತ್ರ ಬಿಡುಗಡೆ ಕುರಿತಾಗಿ ಚಿತ್ರ ತಂಡದೊಂದಿಗೆ ಏರ್ಪಡಿಸಿದ್ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿಭಿನ್ನ ಭಾಷಾ ಶೈಲಿ ಹೊಂದಿರುವ ಜಾನಪದ ಸಂಸ್ಕೃತಿ, ಶೋಭಾನೆ ಪದ ಬಳಕೆ  ಸೇರಿದಂತೆ ಜಿಲ್ಲೆಯ ಗ್ರಾಮೀಣ ಕಲಾವಿದರೇ ಅಭಿನಯಿಸಿರುವ ಚಿತ್ರ ಇದಾಗಿದ್ದು ಇದರೊಟ್ಟಿಗೆ ಚಿತ್ರ ಸಾಹಿತಿ ಯೋಗರಾಜ್‍ಭಟ್, ಗೀತ ರಚನಾಕಾರ ಡಾ. ವಿ. ನಾಗೇಂದ್ರಪ್ರಸಾದ್ ಸದರಿ ಚಿತ್ರಕ್ಕೆ ತಮ್ಮ ಮಹತ್ತರ ಕೊಡುಗೆ ನೀಡಿರುವುದಾಗಿ ಹೇಳಿದರು.

ಎ.ವಿ. ವೇಣುಗೋಪಾಲ್ ನಿರ್ಮಾಪಕರಾಗಿ, ಮನ್‍ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಸಹ ನಿರ್ಮಾಪಕರಾಗಿ ಚಿತ್ರ ಯಶಸ್ವಿಯಾಗಿ ಹೊರ ಬರಲು ಆರ್ಥಿಕ ಸಹಾಯ ಒದಗಿಸಿದ್ದು ಈ ಕಾರಣಕ್ಕಾಗಿಯೇ ಜಿಲ್ಲೆಯ ಜನ ಮೆಚ್ಚಿ ಹರಸಬೇಕೆಂದರು. 120ಕ್ಕೂ ಹೆಚ್ಚು ಕಲಾವಿದರ ಪೈಕಿ ಶೇ.90ರಷ್ಟು ಹೊಸ ಕಲಾವಿದರೇ ಅಭಿನಯಿಸಿದ್ದು ಇದೇ ಪ್ರಥಮ ಬಾರಿಗೆ ಅವರ ಪಾತ್ರಗಳಿಗೆ ಕಲಾವಿದರೇ ಕಂಠದಾನ ಮಾಡಿರುವುದು ಇತಿಹಾಸವೆಂದರು.

ಖ್ಯಾತ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯೊಟ್ಟಿಗೆ ಮೂಲ ಜಾನಪದ ಕಲಾವಿದೆ ಕಂದೇಗಾಲ ಮತ್ತು ತಂಡದವರು ‘ಜಯಮಂಗಳ ನಿಚ್ಚ ಶುಭಮಂಗಳ' ಪದಗಳಿಗೆ ಧನಿಯಾಗಿದ್ದಾರೆ ಎಂದರು.

ಸ್ಥಳೀಯ ಕಲಾವಿದರಾದ ಮಾರಸಿಂಗನಹಳ್ಳಿ ಮಲ್ಲರಾಜು, ಕೀಲಾರ ಉದಯ್, ಬೆಳತ್ತೂರು ಶಂಭೂಗೌಡ ಸೇರಿದಂತೆ ಇತರ ಹಾಸ್ಯ ಕಲಾವಿದರು ಚಿತ್ರದುದ್ದಕ್ಕೂ ಮಂಡ್ಯದ ಗ್ರಾಮೀಣ ಸೊಗಡುಳ್ಳ ಹಾಸ್ಯ ಉಣಬಡಿಸಲಿರುವುದಾಗಿ ವಿವರಿಸಿದರು.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಮತ್ತು ಟ್ರೈಲ್ಲರ್ ಜನಮನ್ನಣೆ ಗಳಿಸಿದ್ದು ಫೆ.28ರ ಶುಕ್ರವಾರ ತೆರೆ ಕಾಣಲಿರುವ ಆನೆಬಲ ಚಿತ್ರವನ್ನು ಜಿಲ್ಲೆಯ ಪ್ರೇಕ್ಷಕರು, ಸಿನಿ ಪ್ರಿಯರು ನೋಡಿ ಪ್ರೋತ್ಸಾಹಿಸುವಂತೆ ಕೋರಿದರು.

'ಮಳವಳ್ಳಿ ಜಾತ್ರೆಯಲ್ಲಿ ತುಂಡು ಹೈಳ್ಕಾ  ದರ್ಬಾರು' ಎಂಬ ಹಾಡು ಹಾಗೂ ಸಿನಿಮಾನದ ಟ್ರೈಲ್ಲರ್‍ನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು. ಮನ್‍ಮುಲ್ ನಿರ್ದೇಶಕಿ ರೂಪ, ನಾಯಕ ನಟ ಸಾಗರ್, ನಾಯಕಿ ರಕ್ಷಿತಾ, ಹಾಸ್ಯ ನಟರಾದ ಹರೀಶ್‍ಶೆಟ್ಟಿ, ಮಲ್ಲರಾಜು, ಚಿರಂಜೀವಿ, ಲಂಕೇಶ್, ಕೆಂಚೇಗೌಡ, ಶಿವಕುಮಾರ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ್ ಹಾಜರಿದ್ದರು.