ಬೆಂಗಳೂರು: ವರನಟ ಡಾ.ರಾಜಕುಮಾರ್ ಸಾಧನಾ-ಸಂಪತ್ತನ್ನು ಮನದುಂಬಿಸಿಕೊಡುವ ಮಂಜುನಾಥ್ ಹಾಲುವಾಗಿಲು ರವರ 'ರಾಜಕುಮಾರ್ - ಪಂಚಪದಿ' ಕೃತಿಯನ್ನು ನಗರದಲ್ಲಿ ಶನಿವಾರ ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ರವರು ಜಲಕಂಠೇಶ್ವರ ಸನ್ನಿಧಿಯಲ್ಲಿ ಲೋಕಾರ್ಪಣೆಗೊಳಿಸಿದರು.
ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಗಿರುವ ಅಣ್ಣಾವ್ರು ನಟಿಸಿರುವ 209 ಚಿತ್ರಗಳ ಕಥಾಸಾರಾಂಶವನ್ನು ಅವರ ನಾಮಧೇಯಕ್ಕೆ ಹೊಂದಿಸಿ ಪಂಚಪದಿ ಪದ್ಯರೂಪದಲ್ಲಿ ಹೊರಬಂದಿರುವ ಈ ಪುಸ್ತಕ ಹೊಸರೀತಿಯ ಪ್ರಯೋಗ. ಡಾ.ರಾಜಕುಮಾರ್ ರಂಗಭೂಮಿ ನಂತರ ಚಲನಚಿತ್ರ ನಟನೆಯ ಆರಂಭದ ದಿನಗಳಲ್ಲಿ ಆಗಿನ ಮದ್ರಾಸ್ ನಲ್ಲಿ ಚಿತ್ರೀಕರಣದ ನಂತರ ಹೆಚ್ಚಾಗಿ ಆಶ್ರಯ ಪಡೆದಿದ್ದು, ಈ ಕೊಳದ ಮಠದ ಆವರಣದಲ್ಲಿಯೇ ಎಂಬುದನ್ನು ಕೊಳದ ಮಠದ ಶಾಂತವೀರ ಮಹಾಸ್ವಾಮೀಜಿ ರವರು ಸ್ಮರಿಸಿಕೊಂಡರು.
ಏಕಕಾಲದಲ್ಲಿ ನಾಡಿನಾದ್ಯಂತ ನಾನಾ ಕ್ಷೇತ್ರದ 100 ಗಣ್ಯರು ಈ ಕೃತಿ ಬಿಡುಗಡೆಗೊಳಿಸಿ ವಿಶ್ವದಾಖಲೆಯಾಗಿ ಮಾಡಿದರು. ಸ್ನೇಹ ಬುಕ್ ಹೌಸ್ನ ಪರಶಿವಪ್ಪ ಈ ಹೊತ್ತಿಗೆ ಪ್ರಕಟಿಸಿದ್ದಾರೆ. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನದ ಅಧ್ಯಕ್ಷ ಡಾ.ಗುಣವಂತ ಮಂಜು ಹಾಗೂ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಉಪಸ್ಥಿತರಿದ್ದರು.