ಕೊಚ್ಚಿ: ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಮಲಯಾಳಂ ನಟ ಹರೀಶ್ ಪೆಂಗನ್ ಅವರು ಮಂಗಳವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
49 ವರ್ಷದ ನಟನನ್ನು ಹೊಟ್ಟೆ ನೋವಿನ ಕಾರಣಕ್ಕೆ ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರ ಆರೋಗ್ಯ ಹದಗೆಡುತ್ತ ಹೋಗಿತ್ತು.
ವೈದ್ಯರು ಪಿತ್ತಜನಕಾಂಗದ ಕಸಿ ಮಾಡುವಂತೆ ಸೂಚಿಸಿದ್ದರು ಮತ್ತು ಪೆಂಗನ್ ಅವರ ಅವಳಿ ಸಹೋದರಿ ದಾನಿಯಾಗಲು ಒಪ್ಪಿಕೊಂಡರು. ಆದರೆ ಚಿಕಿತ್ಸೆಗೆ ಅಗತ್ಯ ಹಣವಿಲ್ಲದ ಕಾರಣ ಅವರ ಸ್ನೇಹಿತರು ಹಣ ಸಂಗ್ರಹ ಆರಂಭಿಸಿದ್ದರು. ಈ ವೇಳೆ ಪೆಂಗನ್ ಅವರ ಸ್ಥಿತಿ ಹದಗೆಟ್ಟಿದ್ದು, ಮಂಗಳವಾರ ಮಧ್ಯಾಹ್ನ 3.25ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
‘ಮಹೇಶಂತೆ ಪ್ರತೀಕಾರಂ’, ‘ಶೆಫೀಕ್ಕಿಂತೆ ಸಂತೋಷಂ’, ‘ಹನಿ ಬೀ 2.5’, ‘ವೆಳ್ಳರಿಪಟ್ಟಣಂ’, ‘ಜಾನೆ ಮನ್’, ‘ಜಯ ಜಯ ಜಯ ಜಯ ಹೇ’, ‘ಪ್ರಿಯಾನ್ ಒಟ್ಟತಿಲನು’, ‘ಜೋ ಅಂಡ್ ಜೋ’ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದರು.