ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯ ಪೊಲೀಸ್ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆರೋಪ ನಟ ದಿಲೀಪ್ ಮೇಲಿದ್ದು, ಇದರ ಕುರಿತ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೇರಳದ ಹೈಕೋರ್ಟ್ನಲ್ಲಿ ನಡೆಯುವ ಒಂದು ಗಂಟೆಗೂ ಮುನ್ನವೇ ದಿಲೀಪ್ ಮತ್ತೊಂದು ಅರ್ಜಿಯನ್ನು ದಾಖಲಿಸಿದ್ದಾರೆ.
ಇತ್ತೀಚೆಗೆ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ್ದ ಎಂಬ ಆರೋಪದಲ್ಲಿ ನಟ ದಿಲೀಪ್ ಅಪರಾಧ ವಿಭಾಗದ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಸಂಬಂಧಿಸಿದಂತೆ ದಿಲೀಪ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಗೂ ಮುನ್ನ ದಿಲೀಪ್ ಮತ್ತೊಂದು ಅರ್ಜಿಯನ್ನು ದಾಖಲಿಸಿದ್ದು, ಅದರಲ್ಲಿ ಡಿವೈಎಸ್ಪಿ ಬೈಜು ಪೌಲೋಸ್ ಅವರ ಬಳಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಡಿಯೋ ಇದೆ ಎಂದು ಆರೋಪಿಸಿದ್ದಾರೆ.
ನಟ ದಿಲೀಪ್ ಸಂಚು ರೂಪಿಸಿರುವ ಐವರು ಪೊಲೀಸ್ ಅಧಿಕಾರಿಗಳಲ್ಲಿ ಬೈಜು ಪೌಲೋಸ್ ಕೂಡ ಒಬ್ಬರು. ಇತ್ತೀಚೆಗೆ ವೈರಲ್ ಆಗಿದ್ದ ಆಡಿಯೋ ಕ್ಲಿಪ್ನಲ್ಲಿ ಐವರು ಪೊಲೀಸ್ ಅಧಿಕಾರಿಗಳ ಹತ್ಯೆ ಮಾಡುವ ಸಂಚು ಬಯಲಾಗಿತ್ತು. ಆ ಆಡಿಯೋದಲ್ಲಿದ್ದ ಧ್ವನಿ ದಿಲೀಪ್ ಅವರದ್ದು ಎಂದು ತಿಳಿದುಬಂದಿತ್ತು. ಬಳಿಕ ಬೈಜು ಪೌಲೋಸ್ ಅವರು ದೂರು ಸಹ ದಾಖಲಿಸಿದ್ದರು. ಇನ್ನು ದಿಲೀಪ್ ಆಪ್ತರಲ್ಲಿ ಒಬ್ಬರಾಗಿರುವ ನಿರ್ದೇಶಕ ಬಾಲಚಂದ್ರ ಕುಮಾರ್ ಎಂಬುವರೇ ಆಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಸದ್ಯ ದಿಲೀಪ್ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್ ಹೇಳಿದ್ದು, ಬಾಲಚಂದ್ರಕುಮಾರ್ ಅವರ ಹೇಳಿಕೆಯನ್ನು ಪರಿಶೀಲಿಸುವಂತೆ ಕೋರ್ಟ್ ನಿರ್ದೇಶನ ನೀಡಿದ್ದು, ಅದಕ್ಕೆ ಪೊಲೀಸ್ ಇಲಾಖೆ ಒಪ್ಪಿದೆ ಮತ್ತು ಮುಂದಿನ ಮಂಗಳವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಕೆಲವು ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಎಂಬ ಆರೋಪವನ್ನು ನಟ ದಿಲೀಪ್ ಹೊತ್ತುಕೊಂಡಿದ್ದಾರೆ.