ಮಹಾರಾಷ್ಟ್ರ ರಾಜ್ಯದ ಜೀವನಾಡಿ ಹಾಗೂ ದೇಶದ ಹಣಕಾಸಿನ ಹೃದಯದಂತಿರುವ ಮುಂಬೈ ಕೇವಲ ವ್ಯಾವಹಾರಿಕ ದ್ರಷ್ಟಿಯಿಂದ ಮಾತ್ರವಲ್ಲದೆ ಆಹಾರ ಶೈಲಿಯಲ್ಲೂ ಮುಂಚೂಣಿಯಲ್ಲಿದೆ. ಜನನಿಬಿಡ ರಸ್ತೆಯಲ್ಲಿ ಧಾವಂತದ ಬೆನ್ನು ಹತ್ತಿ ಹೊರಟಿರುವ ಸಮಯದ ಅಭಾವವಿರುವ ಜನರ ಹೊಟ್ಟೆಯನ್ನು ತಕ್ಷಣಕ್ಕೆ ತಂಪು ಮಾಡುವುದೇ ಈ ಬಾಂಬೆ ಬ್ರೆಡ್ ಸ್ಯಾಂಡ್ ವಿಚ್. ತಯಾರಿಸಲು ಸುಲಭ ಹಾಗೂ ತಿನ್ನಲು ರುಚಿಕರವಾಗಿರುವ ಈ ಸ್ಯಾಂಡ್ ವಿಚ್ ರುಚಿಯನ್ನು ನೀವೂ ಒಮ್ಮೆ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
ಸ್ಲೈಸ್ ಬ್ರೆಡ್ 6
ಬೇಯಿಸಿ ಹುಡಿ ಮಾಡಿದ ಅಲೂಗಡ್ಡೆ 1
ವ್ರತ್ತಾಕಾರದಲ್ಲಿ ಕತ್ತರಿಸಿದ ಟೊಮಾಟೊ 1
ಮುಳ್ಳು ಸೌತೆ 1
ನೀರುಳ್ಳಿ ತಲಾ 1
ಗರಂ ಮಸಾಲಾ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಹಸಿರು ಚಟ್ನಿ ತಯಾರಿಸಲು:
ಪುದಿನಾ
ಕೊತ್ತಂಬರಿ ಸೊಪ್ಪು
ಎರಡು ಎಸಳು ಬೆಳ್ಳುಳ್ಳಿ
ಹಸಿ ಮೆಣಸಿನಕಾಯಿ 4
ಅರ್ಧ ನಿಂಬೆ ರಸ
ಮಾಡುವ ವಿಧಾನ:
ಬ್ರೆಡ್ ಸ್ಲೈಸ್ ಮೇಲೆ ಹಸಿರು ಚಟ್ನಿ ಸವರಿ. ಇದರ ಮೇಲೆ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಹಸಿ ತರಕಾರಿ, ಗರಂ ಮಸಾಲ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಇನ್ನೊಂದು ಸ್ಲೈಸ್ ಬ್ರೆಡ್ ಮೇಲೆ ಹಸಿರು ಚಟ್ನಿ ಹಚ್ಚಿ ಈ ಬ್ರೆಡ್ ಮೇಲೆ ಇಡಿ. ನಿಮ್ಮ ಧಿಡೀರ್ ಬ್ರೇಕ್ ಫಾಸ್ಟ್ ಬಾಂಬೆ ಬ್ರೆಡ್ ಸ್ಯಾಂಡ್ ವಿಚ್ ತಯಾರ್. ಇನ್ನೂ ಹೆಚ್ಚಿನ ಸ್ವಾದಕ್ಕಾಗಿ ಸಣ್ಣ ಉರಿಯಲ್ಲಿ ಬ್ರೆಡ್ ಅನ್ನು ಸ್ವಲ್ಪ ಎಣ್ಣೆಯೊಂದಿಗೆ ಹುರಿಯಿರಿ. ತಿನ್ನಲು ಇನ್ನೂ ಮಜವಾಗಿರುತ್ತದೆ.