ಆರೋಗ್ಯ ಮತ್ತು ರುಚಿ ವಿಷಯದಲ್ಲಿ ನಿಮ್ಮ ಮಕ್ಕಳಿಗೆ ಪಾಲಕ್ ಅನ್ನ ಯಾವತ್ತಿಗೂ ಚೆನ್ನ. ನೀವು ಮನೆಯಲ್ಲಿ ಸುಲಭವಾಗಿ ಮಾಡುವ ತಿಂಡಿಗಳಲ್ಲಿ ಪಾಲಕ್ಗೂ ಸ್ವಲ್ಪ ಸ್ಥಳ ಮೀಸಲಿಡಿ. ಪೌಷ್ಟಿಕಾಂಶಯುಕ್ತ ಪಾಲಾಕ್ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಯಲ್ಲೂ ಎತ್ತಿದ ಕೈ. ಈ ಪಾಲಾಕನ್ನು ಉಪಯೋಗಿಸಿಕೊಂಡು ಅನೇಕ ಖಾದ್ಯಗಳನ್ನ ಮಾಡಬಹುದು. ವಿಟಮಿನ್ ಮತ್ತು ಕಬ್ಬಿಣಾಂಶ ಹೇರಳವಾಗಿರುವ ಪಾಲಾಕ್ ಸೊಪ್ಪು ಮಕ್ಕಳಿಗೆ ತುಂಬಾ ಅವಶ್ಯಕ. ಹಾಗಾದರೆ ಇನ್ನೇಕೆ ತಡ ? ಬನ್ನಿ ಪಾಲಕ್ ರೈಸ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು: 2 ಕಪ್ ಅನ್ನ * 1 ಕಪ್ ತೊಳೆದು ಕತ್ತರಿಸಿದ ಪಾಲಾಕ್ ಸೊಪ್ಪು * 1 ದೊಡ್ಡ ಈರುಳ್ಳಿ * 3-4 ಹಸಿರು ಮೆಣಸಿನಕಾಯಿ * 1/2 ಚಕ್ಕೆ, 3 ಕರಿಮೆಣಸು * 1 ಚಮಚ ಸಾಸಿವೆ, 1 ಚಮಚ ಜೀರಿಗೆ, ಲವಂಗ * 1/2 ಕಪ್ ಗೋಡಂಬಿ * ಉಪ್ಪು, ಎಣ್ಣೆ, ಒಂದು ನಿಂಬೆಹಣ್ಣು.
ಮಾಡುವ ವಿಧಾನ: 1. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಸಾಸಿವೆ, ಜೀರಿಗೆ, ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಹಾಕಿ ಕೆಲವು ನಿಮಿಷ ಹುರಿಯಬೇಕು. ನಂತರ ಕತ್ತರಿಸಿಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಹುರಿಯಬೇಕು. 2. ಇದಕ್ಕೆ 1/2 ಕಪ್ ನೀರು ಹಾಕಿ ಕುದಿಯುವವರೆಗೂ ಸಣ್ಣ ಉರಿಯಲ್ಲಿಡಬೇಕು. 3. ನಂತರ ಲವಂಗ, ಚಕ್ಕೆ, ಕರಿಮೆಣಸು ಮತ್ತು ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆಗೆ ಹಾಕಿ ಹುರಿಯಬೇಕು. 4. ಪಾಲಾಕ್ ಮಿಶ್ರಣದೊಂದಿಗೆ ರುಬ್ಬಿದ ಮಿಶ್ರಣವನ್ನು ಬೆರೆಸಿ ಅಗತ್ಯವಿದ್ದರೆ ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಿ ತಣ್ಣಗಾಗಲು ಬಿಡಬೇಕು. (ಅನ್ನಕ್ಕೂ ಉಪ್ಪು ಹಾಕಿದ್ದರೆ ಎಚ್ಚರಿಕೆಯಿಂದ ಉಪ್ಪನ್ನು ಬೆರೆಸಿಕೊಳ್ಳಬೇಕು) 5. ಈ ಪಾಲಾಕ್ ಮಸಾಲೆಯೊಂದಿಗೆ ಅನ್ನ ಬೆರೆಸಿ ನಿಂಬೆ ರಸವನ್ನು ಇದರ ಮೇಲೆ ಹಿಂಡಿ ಚೆನ್ನಾಗಿ ಕಲೆಸಬೇಕು. ಈಗ ಟೇಸ್ಟಿ ಪಾಲಾಕ್ ರೈಸ್ ತಿನ್ನಲು ರೆಡಿಯಾಗಿರುತ್ತೆ.