ಹೈದರಾಬಾದ್ ಬಿರಿಯಾನಿ ಅಂದರೆ ಸಾಕು ಬಿರಿಯಾನಿ ಪ್ರಿಯರ ಬಾಯಲ್ಲಿ ನೀರು ಬರುವುದು ಸಹಜ. ಆಂಧ್ರದಲ್ಲಿ ಪ್ರಸಿದ್ದಿ ಪಡೆದಿರುವ ಈ ಬಿರಿಯಾನಿ ತಯಾರಿಸುವುದು ಬಲು ಸುಲಭ. ಈ ಕೆಳಗಿನ ವಿಧಾನದಂತೆ ಅಡುಗೆ ಮಾಡಿದರೆ ನೀವೂ ಕೂಡ ಸೂಪರ್ ಟೇಸ್ಟ್ ನ ಹೈದರಾಬಾದ್ ಬಿರಿಯಾನಿ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು: 1.ಸ್ವಲ್ಪ ಪುದೀನಾ, 2.ಏಲಕ್ಕಿ 3.ಸಾಧಾರಣ ತುಂಡಿನ ಚಿಕನ್ ಮುಕ್ಕಾಲು ಕೆಜಿ, 4. ಕತ್ತರಿಸಿದ ಕೊತ್ತಂಬರಿ ಸೊಪ್ಪು (ಸ್ವಲ್ಪ), 5.ಚಕ್ಕೆ 2 ತುಂಡು, 6.ಜೀರಿಗೆ ಅರ್ಧ ಚಮಚ, 7.ಕೊತ್ತಂಬರಿ ಪುಡಿ ಅರ್ಧಚಮಚ, 8. ಕೆಂಪು ಮೆಣಸಿನ ಪುಡಿ 1 ಚಮಚ, 9. ಚಿಕ್ಕದಾಗಿ ಕತ್ತರಿಸಿದ ಶುಂಠಿ ಪೇಸ್ಟ್ 2 ಚಮಚ, 10. ಬೆಳ್ಳುಳ್ಳಿ ಪೇಸ್ಟ್ 2 ಚಮಚ, 11. ಬಾಸುಮತಿ ಅಕ್ಕಿ 2 ಕಪ್, 12. ಹಸಿಮೆಣಸಿನ ಕಾಯಿ 2 (ಕತ್ತರಿಸಿದ್ದು), 13. ಜಾಯಿಕಾಯಿ ಪುಡಿ ಅರ್ಧ ಚಮಚ, 14. ನಿಂಬೆ ರಸ ಒಂದು ಚಮಚ, 15.ಎಣ್ಣೆಯಲ್ಲಿ ಹುರಿದ ಈರುಳ್ಳಿ 4, 16.ತುಪ್ಪ 2 ಚಮಚ,17. ಕಾಳು ಮೆಣಸು 6-7, 18.ಕೇಸರಿ ಅರ್ಧ ಚಮಚ, 19.ರುಚಿಗೆ ತಕ್ಕ ಉಪ್ಪು, 20.ಅರಿಶಿಣ ಪುಡಿ 1/4 ಚಮಚ.
ತಯಾರಿಸುವ ವಿಧಾನ: 1. ಒಂದು ಪಾತ್ರೆಯಲ್ಲಿ ಶುಚಿ ಮಾಡಿದ ಚಿಕನ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಮೊಸರು, ಹಸಿಮೆಣಸಿನ ಕಾಯಿ, ಜೀರಿಗೆ, ಕಾಳು ಮೆಣಸು, ಕೆಂಪು ಮೆಣಸಿನ ಪುಡಿ, ಅರಶಿಣ, ಸ್ವಲ್ಪ ಉಪ್ಪು, ಜೀರಿಗೆ, ಕೊತ್ತಂಬರಿ ಪುಡಿ, ಗರಂ ಮಸಾಲ(ಚಕ್ಕೆ, ಜಾಜ್ ಕಾಯಿ) ಫ್ರೈ ಮಾಡಿದ ಈರುಳ್ಳಿ (ಸ್ವಲ್ಪ ಈರುಳ್ಳಿ ಫ್ರೈ ತೆಗೆದಿಡಿ) ಮತ್ತು ತುಪ್ಪ, ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 2. ಇನ್ನೊಂದು ಪಾತ್ರೆಯಲ್ಲಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ನೀರನ್ನು ಕುದಿಸಬೇಕು. ನಂತರ ತೊಳೆದ ಅಕ್ಕಿ ಹಾಕಿ ಅರ್ಧದಷ್ಟು ಬೇಯಿಸಬೇಕು. ನಂತರ ಅನ್ನದಿಂದ ನೀರನ್ನು ಸೋಸಬೇಕು. 3. ಈಗ ಬಿರಿಯಾನಿ ಪಾತ್ರೆ ತೆಗೆದುಕೊಂಡು ಚಿಕನ್ ಅನ್ನು ಪಾತ್ರೆಯ ಕೆಳಭಾಗದಲ್ಲಿ ಹಾಕಿ, ನಂತರ ಅರ್ಧ ಬೆಂದ ಅನ್ನವನ್ನು ಹಾಕಿ ಅದರ ಮೇಲೆ ಹುರಿದ ಈರುಳ್ಳಿ, ಪುದೀನಾ ಎಲೆ, ಕೇಸರಿ ಹಾಕಿ ಪಾತ್ರೆಯ ಬಾಯಿಯನ್ನು ಮುಚ್ಚಿ ಅದರಿಂದ ಆವಿ ಹೊರಹೋಗದಂತೆ ಪಾತ್ರೆಯ ಬಾಯಿಯ ಸುತ್ತ ಮೈದಾ ಮಿಶ್ರಣವನ್ನು ಮೆತ್ತಿ 20 ನಿಮಿಷ ಸಾಧಾರಣ ಹುರಿಯಲ್ಲಿ ಬೇಯಿಸಿ, ಬೆಂದ ಬಿರಿಯಾನಿಯನ್ನು ಸೌಟ್ ನಿಂದ ಚಿಕನ್ ಮತ್ತು ಅನ್ನ ಮಿಶ್ರ ಮಾಡಿ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹೈದರಾಬಾದ್ ಚಿಕನ್ ರೆಡಿ.