ದಿನ ನಿತ್ಯದ ಅಡುಗೆಯಲ್ಲಿ ಆಲೂಗೆಡ್ಡೆ ಹಲವು ರೀತಿಯಲ್ಲಿ ಬಳಕೆಯಾಗುತ್ತದೆ. ಸಾರು, ಪಲ್ಯ, ಬಜ್ಜಿ ಹೀಗೆ ಒಂದೇ ಎರಡೇ ಹಲವಾರು ಖಾದ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಿರುವಾಗ ಆಲೂ ಪಲಾವ್ ಏಕೆ ಮಾಡಬಾರದು ಎಂಬ ಆಲೋಚನೆ ನಿಮ್ಮಲ್ಲಿ ಬಂದಿದ್ದರೆ ಅದನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಆಲೂಪಲಾವ್ ಮಾಡಲು ಬೇಕಾಗುವ ಪದಾರ್ಥಗಳು ಹೀಗಿದೆ.
ಆಲೂಗೆಡ್ಡೆ-ಎರಡು
ಅಕ್ಕಿ- ಒಂದು ಪಾವು
ಹಸಿಮೆಣಸು- ಎಂಟು
ಬೆಳ್ಳುಳ್ಳಿ- ಒಂದು ಗೆಡ್ಡೆ
ಹಸಿಶುಂಠಿ-ಚಿಕ್ಕ ತುಂಡು
ಕೊತ್ತಂಬರಿ-ಅರ್ಧ ಕಟ್ಟು
ಗರಂಮಸಾಲಾ-ಒಂದು ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಎರಡು ಚಮಚ
ತುಪ್ಪ- ಮೂರು ಚಮಚ
ಆಲೂಪಲಾವ್ ಮಾಡುವ ವಿಧಾನ ಹೀಗಿದೆ..
ಮೊದಲಿಗೆ ಆಲೂಗೆಡ್ಡೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಬಳಿಕ ಸಿಪ್ಪೆ ತೆಗೆದು ಉದ್ದಕ್ಕೆ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಬೇಕು. ಮತ್ತೊಂದೆಡೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಶುಂಠಿ ಉಪ್ಪು ಹಾಕಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು.
ಒಂದು ಪಾತ್ರೆಯಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಕಾಯಿಸಿ ಅದಕ್ಕೆ ಆಲೂಗೆಡ್ಡೆ ಮತ್ತು ರುಬ್ಬಿದ ಮಸಾಲೆಯನ್ನು ಹಾಕಿ ಒಂದು ನಿಮಿಷ ಹುರಿಯಬೇಕು. ಎಲ್ಲವೂ ಮಿಶ್ರಣವಾದ ಬಳಿಕ ಇಳಿಸಬೇಕು. ಕುಕ್ಕರ್ ತೆಗೆದುಕೊಂಡು ಅಕ್ಕಿಯನ್ನು ತೊಳೆದು ಹಾಕಿ ಅದಕ್ಕೆ ಹುರಿದ ಆಲೂಗೆಡ್ಡೆ ಮಿಶ್ರಣವನ್ನು ಹಾಕಿ, ಸುಮಾರು ಎರಡು ಮುಕ್ಕಾಲು ಪಾವು ನೀರು ಹಾಕಿ ಮುಚ್ಚಳ ಮುಚ್ಚಿ ಎರಡು ವಿಶಲ್ ಬಂದ ಬಳಿಕ ಇಳಿಸಬೇಕು. ನಂತರ ಚೆನ್ನಾಗಿ ಮಿಶ್ರಣ ಮಾಡಿದರೆ ಆಲೂ ಪಲಾವ್ ರೆಡಿ.