ಸಾಮಾನ್ಯವಾಗಿ ನಾವೆಲ್ಲರೂ ಬಾಳೆಹಣ್ಣನ್ನು ತಿಂದು ತೆಪ್ಪಗಾಗಿ ಬಿಡುತ್ತೇವೆ. ಆದರೆ ಈ ಬಾಳೆಹಣ್ಣಿನಿಂದ ಹಲವು ರೀತಿಯ ತಿಂಡಿಗಳನ್ನು ಮಾಡಬಹುದಾಗಿದ್ದು, ಅವುಗಳೆಲ್ಲವೂ ರುಚಿಯಾಗಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಳೆಹಣ್ಣಿನಲ್ಲಿ ನಾವು ತಯಾರಿಸಬಹುದಾದ ತಿಂಡಿಯಲ್ಲಿ ಹಲ್ವಾವೂ ಒಂದಾಗಿದೆ. ಹಾಗಾದರೆ ಈ ಹಲ್ವಾವನ್ನು ಹೇಗೆ ತಯಾರಿಸುವುದು ಮತ್ತು ಅದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದರ ಬಗ್ಗೆ ವಿವರ ಇಲ್ಲಿದೆ.
ಬನಾನ ಹಲ್ವಾಕ್ಕೆ ಬೇಕಾಗುವ ಪದಾರ್ಥಗಳು
ಚೆನ್ನಾಗಿ ಮಾಗಿದ ಬಾಳೆಹಣ್ಣು- ಹತ್ತು
ಸಕ್ಕರೆ- ಅರ್ಧ ಬಟ್ಟಲು
ಗೋಧಿಹಿಟ್ಟು- ಅರ್ಧ ಬಟ್ಟಲು
ಚಿರೋಟಿ ರವೆ- ಎರಡು ಟೇಬಲ್ ಚಮಚೆ
ತುಪ್ಪ- ಅರ್ಧ ಬಟ್ಟಲು
ಏಲಕ್ಕಿ ಪುಡಿ- ಸ್ವಲ್ಪ
ಬನಾನ ಹಲ್ವ ಮಾಡುವ ವಿಧಾನ ಹೀಗಿದೆ..
ಮೊದಲಿಗೆ ಬಾಳೆಹಣ್ಣಿನ ಸಿಪ್ಪೆ ತೆಗೆದು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಕಿವುಚಿಕೊಳ್ಳಬೇಕು. ಇನ್ನೊಂದೆಡೆ ಗೋಧಿ ಹಿಟ್ಟು ಹಾಗೂ ಚಿರೋಟಿ ರವೆಯನ್ನು ಪ್ರತ್ಯೇಕವಾಗಿ ಕಂದು ಬಣ್ಣ ಬರುವ ತನಕ ಹುರಿದಿಟ್ಟುಕೊಳ್ಳಬೇಕು.
ಕಿವುಚಿದ ಬಾಳೆಹಣ್ಣನ್ನು ಪಾತ್ರೆಗೆ ಹಾಕಿ ಒಲೆಯ ಮೇಲಿಟ್ಟು ಚೆನ್ನಾಗಿ ಮಗುಚಬೇಕು. ಹೀಗೆ ಮಾಡುವುದರಿಂದ ಬಾಳೆಹಣ್ಣಿನ ಹಸಿವಾಸನೆ ಹೋಗುತ್ತದೆ. ಆ ನಂತರ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಗುಚುತ್ತಾ ಕಲೆಸಬೇಕು. ಅದಕ್ಕೆ ಹುರಿದಿಟ್ಟುಕೊಂಡಿದ್ದ ರವೆ ಮತ್ತು ಗೋಧಿ ಹಿಟ್ಟನ್ನು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ತುಪ್ಪ ಹಾಕಿ ಮತ್ತೆ ತಳ ಹಿಡಿಯದಂತೆ ಕಲೆಸಬೇಕು. ಹೀಗೆ ಮಾಡುವುದರಿಂದ ತಳಬಿಟ್ಟು ತುಪ್ಪ ಮೇಲೆ ಬರುತ್ತದೆ. ಆಗ ಒಲೆ ಉರಿಯನ್ನು ಆರಿಸಿ ಏಲಕ್ಕಿ ಪುಡಿಯನ್ನು ಹಾಕಿ ತಿರುಗಿಸಿ ಆ ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿಡಬೇಕು. ಅದು ತಣ್ಣಗಾದ ಬಳಿಕ ತಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದು.