News Kannada
Friday, July 01 2022

ಆರೋಗ್ಯ

ಉತ್ತಮ ಆರೋಗ್ಯಕ್ಕಾಗಿ ಆಹಾರವನ್ನು ಚೆನ್ನಾಗಿ ಅಗಿಯಿರಿ…. - 1 min read

Photo Credit :

ಉತ್ತಮ ಆರೋಗ್ಯಕ್ಕಾಗಿ ಆಹಾರವನ್ನು ಚೆನ್ನಾಗಿ ಅಗಿಯಿರಿ....

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸತ್ವಯುತ ಆಹಾರ ಸೇವನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಆಹಾರ ಸೇವನೆಯ ವಿಧಾನ ಕೂಡಾ ಹೌದು. ಆದರೆ ಆಧುನೀಕರಣದ ಭರಾಟೆಯಲ್ಲಿ ಎಲ್ಲ ರಂಗಗಳಲ್ಲೂ ಬದಲಾವಣೆ ಆಗುತ್ತಿರುವ ಹಾಗೇ ಈಗ ಬೇಗ ಬೇಗನೇ ಊಟ ಮಾಡುವುದೂ ಒಂದು ಫ್ಯಾಷನ್ ಆಗಿ ಮಾರ್ಪಾಟಾಗಿ ಬಿಟ್ಟಿದೆ. ಈ ಅಭ್ಯಾಸಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನವೂ ಬೆಳೆದು ನಿಂತಿದೆ. ಹೊಟ್ಟೆ ಹಸಿವಾದ ತಕ್ಷಣ ಹಸಿವನ್ನು ಇಂಗಿಸುವ ಸಿದ್ಧ ಆಹಾರಗಳು ಎಗ್ಗಿಲ್ಲದೇ ಎಲ್ಲಡೆ ಧಾರಾಳವಾಗಿ ಸಿಗುತ್ತಿವೆ.

ಶಾಲಾ  ಕಾಲೇಜುಗಳಿಗೆ  ತಡವಾಯಿತೆಂದು ಗಬಗಬನೆ ಎರಡೇ ನಿಮಿಷದಲ್ಲಿ ಬ್ರೇಕ್‌ಫಾಸ್ಟ್, ಲಂಚ್ ಮುಗಿಸುವ ವಿದ್ಯಾರ್ಥಿಗಳು, ಕಚೇರಿಗಳ ನಿತ್ಯ ಕರ್ತವ್ಯಕ್ಕೆ ಹಾಜರಾಗಬೇಕಾದ ಮಹಿಳೆಯರು, ಪುರುಷರು ಲಗುಬಗನೆ ತಿಂದು ಹೋಗುವವರು ಒಂದೆಡೆಯಾದರೆ ಸಾಕಷ್ಟು  ಪುರುಸೊತ್ತಿದ್ದರೂ ಟಿ.ವಿ ನೋಡುತ್ತಾ ಇಲ್ಲವೇ ವೃತ್ತಪತ್ರಿಕೆ ಓದುತ್ತಾ, ವ್ಯಾಟ್ಸ್‌ಅಪ್, ಫೇಸ್‌ಬುಕ್ ನೋಡುತ್ತಾ ಬಾಯಿ ಆಹಾರವನ್ನು ತುರುಕಲು ಇರುವ ಮಾರ್ಗವಷ್ಟೇ ಎಂದುಕೊಂಡು ಗಪಗಪನೇ ತುರುಕುವ ಮಂದಿ ಇನ್ನೊಂದೆಡೆ. ಇದರಿಂದಲೆ ಹಲವು ರೀತಿಯ ಜೀರ್ಣ ಸಮಸ್ಯೆಗಳಿಂದ ಬಳಲಿ ನಂತರ ಆಸ್ಪತ್ರೆ, ಡಾಕ್ಟರುಗಳ ಮೊರೆ ಹೋಗಿ ಹಣ ತೆತ್ತು ಆರೋಗ್ಯ ಸುಧಾರಿಸಿಕೊಳ್ಳತ್ತಿರುವವರೇ ಹೆಚ್ಚು. ಕೇವಲ ಆಹಾರ ಅಗಿಯುವಿಕೆ ನಮ್ಮ ಆರೋಗ್ಯವನ್ನು ಹೇಗೆ ಉತ್ತಮಪಡಿಸುವದೆಂದು ನೋಡೋಣ.

ಸುಲಲಿತ ಜೀರ್ಣಕ್ರಿಯೆ ಹಾಗೂ ಆಹಾರದ ಪೋಷಕಾಂಶಗಳ ಹೀರುವಿಕೆ ಆಹಾರ ಅಗಿಯುವಿಕೆಯಿಂದಲೇ ಪ್ರಾರಂಭ. ಹಾಗಾಗಿ ಚೆನ್ನಾಗಿ ಅಗಿಯುವಿಕೆ ಆಹಾರ ಜೀರ್ಣಕ್ರಿಯೆಯಲ್ಲಿ ಮೊದಲ ಅಂಶ ಹಾಗೂ ನಮ್ಮ ಆರೋಗ್ಯ ನಿರ್ಧರಿಸುವ ಅಂಶವೂ ಆಗಿದೆ.

ಹೆಚ್ಚು ಪೋಷಕಾಂಶ ಹೀರುವಿಕೆ ಹಾಗೂ ಶಕ್ತಿಯ ಪ್ರಮಾಣ ಉಳಿತಾಯ- ಅಗಿಯುವಿಕೆ ಆಹಾರದ ದೊಡ್ಡ ತುಣುಕುಗಳನ್ನು ಸಣ್ಣ ಸಣ್ಣ ಕಣಗಳಾಗಿ ವಿಭಜಿಸುತ್ತದೆ. ಇದರಿಂದ ಜೀರ್ಣಕ್ರಿಯೆಯ ಕಿಣ್ವಗಳು ಮತ್ತು ಜಠರಾಮ್ಲದ ಕಾರ್ಯನಿರ್ವಹಣೆ ಸುಲಭವಾಗಿ ಆಗಿ ಜೀರ್ಣಕ್ರಿಯೆ ಚುರುಕಾಗುತ್ತದೆ ಮತ್ತು ಕಡಿಮೆ ಶಕ್ತಿ ವ್ಯಯವಾಗುತ್ತದೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಶಕ್ತಿ ವ್ಯಯವಾಗುವ ಕ್ರಿಯೆಯಾದ  ಜೀರ್ಣಕ್ರಿಯೆಗೆ ನಾವು ಅಗಿದು ಅಗಿದು ತಿಂದು ಸಹಾಯ ಮಾಡಿದಾಗ ಶಕ್ತಿಯ ವ್ಯಯವನ್ನು ಉಳಿಸಬಹುದಲ್ಲವೇ? ಇದಲ್ಲದೆ ಅಗಿಯುವಿಕೆಯು ಸಾಲಾಗಿ, ಸಲೀಸಾಗಿ ಗ್ರಂಥಿಗಳಿಂದ ಆಮ್ಲ ಹಾಗೂ ಕಿಣ್ವಗಳ ಉತ್ಪಾದನೆಯನ್ನು ಪ್ರಚೋದಿಸುತ್ತವೆ.

ಶರೀರದ ಸಮತೂಕ ಕಾಯ್ದುಕೊಳ್ಳುವಿಕೆ- ಸಾಮಾನ್ಯವಾಗಿ ಆಹಾರ ಸೇವನೆಯ ಹೊತ್ತಿನಲ್ಲಿ ನಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎನ್ನುವ ಸಂದೇಶ ರವಾನೆಯಾಗಲು ಕನಿಷ್ಟ 20 ನಿಮಿಷಗಳಾದರೂ ಬೇಕು. ಆದರೆ ಚೆನ್ನಾಗಿ ಅಗಿದು ತಿನ್ನುವುದರಿಂದ ಮೆದುಳಿಗೆ ಬೇಗನೇ ಹೆಚ್ಚು ಸಂದೇಶಗಳು ರವಾನೆಯಾಗಿ ಕಡಿಮೆ ತಿನ್ನುವ ಹಾಗೆ ಪ್ರಚೋದನೆಯಾಗುತ್ತದೆ. ಹಾಗಾಗಿ ನಿಧಾನವಾಗಿ ಅಗಿದು ತಿಂದಾಗ ಮಾಮೂಲಿ ಸೇವನೆಗಿಂತ ಶೇಕಡಾ 10 ರಷ್ಟು ಕಡಿಮೆ ಆಹಾರ ಸೇವನೆ ಬೇಕಾಗುವುದು ಸಾಬೀತಾಗಿದೆ. ಆದ್ದರಿಂದ ಅನವಶ್ಯಕ ಆಹಾರ ಸೇವನೆಯಿಂದ ಆಹಾರ ಉಳಿತಾಯದ ಜೊತೆಗೆ ಅತಿ ಆಹಾರ ಸೇವನೆಯಿಂದ ಉಂಟಾಗುವ ಬೊಜ್ಜು, ಸಿಹಿಮೂತ್ರ ರೋಗ ಇನ್ನಿತರ ಅನೇಕ ರೋಗಗಳು ಬರದಂತೆ ತಡೆಯುತ್ತವೆ.

See also  ಆಹಾರ ಸೇವನೆಗೂ ಇರಲಿ ಮಾರ್ಗಸೂಚಿ

ಆಹಾರ ಅಗಿಯದೇ ಇದ್ದರೆ ದೊಡ್ಡ ತುಣುಕುಗಳನ್ನು ನುಂಗಿದಾಗ ದೊಡ್ಡ ಕರುಳಿನಲ್ಲಿ ಉಂಟಾಗುವ ಬ್ಯಾಕ್ಟೀರಿಯಾಗಳ ಹೆಚ್ಚಿದ ಚಟುವಟಿಕೆಯಿಂದ ಅಜೀರ್ಣ, ಗ್ಯಾಸ್ ಸಮಸ್ಯೆ, ಹೊಟ್ಟೆಯುಬ್ಬರ, ಬೇಧಿ, ಹೊಟ್ಟೆನೋವು, ಮಲಬದ್ಧತೆ ಮುಂತಾದ ಸಮಸೈಗಳು  ಹೆಚ್ಚಾಗುತ್ತದೆ. ಮಲಬದ್ಧತೆಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು