ಅಲೋವೆರಾ ಒಂದು ಔಷಧೀಯ ಸಸ್ಯ. ಕೂದಲಿನಿಂದ ಹಿಡಿದು ಚರ್ಮದ ಯಾವುದೇ ತೊಂದರೆಗಳಿದ್ದರೂ ಅಲೋವೆರಾ ಜೆಲ್ ನಿಂದ ನಿವಾರಣೆಯಾಗುತ್ತದೆ. ಋತುಗಳು ಬದಲಾವಣೆಯಾದಂತೆ ಕೂದಲಿನ, ಚರ್ಮದ ಸಮಸ್ಯೆಗಳು ತಲೆದೋರುತ್ತವೆ. ಚಳಿಗಾಲದಲ್ಲಂತೂ ಒರಟು ಕೂದಲು, ಡ್ಯಾಂಡ್ರಫ್(ಹೊಟ್ಟು) ಸ್ಪ್ಲಿಟ್ ಎಂಡ್ಸ್ ನಂತಹ ಸಮಸ್ಯೆಗಳು ಸಾಮಾನ್ಯ.
ತಲೆಹೊಟ್ಟು ಎಲ್ಲರೂ ಅನುಭವಿಸುವಂತಹ ಸಾಮಾನ್ಯ ಸಮಸ್ಯೆ. ಆದರೆ ಹೆಚ್ಚು ತಲೆಹೊಟ್ಟು ಉಂಟಾದಲ್ಲಿ ಬೇಗನೆ ಕೂದಲುಗಳು ಉದುರುವಂತೆ ಮಾಡುತ್ತದೆ. ಇದನ್ನು ನಿವಾರಿಸಲು ದುಬಾರಿ ತಲೆಹೊಟ್ಟು ನಿವಾರಕಗಳ ಬದಲಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸರಳ ವಿಧಾನಗಳನ್ನು ಜನರು ಹೆಚ್ಚು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನೈಸರ್ಗಿಕವಾದ ಪದ್ಧತಿಯನ್ನೇ ಆಯ್ದುಕೊಳ್ಳುವುದು ತುಂಬಾ ಉತ್ತಮ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಸಾಕಷ್ಟು ವಿಧಾನಗಳು ಚಾಲ್ತಿಯಲ್ಲಿವೆ. ಅದರಲ್ಲೆಲ್ಲಾ ಅಲೋವೆರಾ ಬಳಕೆ ನಿಜಕ್ಕೂ ಅತ್ಯುತ್ತಮ ಪದ್ಧತಿಯೆಂದರೆ ತಪ್ಪಾಗಲಾರದು. ವಿಶೇಷವಾದ ನಿವಾರಕ ಗುಣ ಹೊಂದಿರುವ ಅಲೋವೆರಾ ಬಳಕೆಯಿಂದ ನೆತ್ತಿಯ ಮೇಲ್ಭಾಗದ ಚರ್ಮವನ್ನು ಪೋಷಿಸಿ ಕೂದಲ ಶುಷ್ಕತೆಯನ್ನು ಶಮನಗೊಳಿಸುತ್ತದೆ. ಅಲೋವೆರಾಹೇಗೆ ತಲೆಹೊಟ್ಟನ್ನು ಹೋಗಲಾಡಿಸುತ್ತದೆ ಎಂಬುದರ ಬಗ್ಗೆ ಈಗ ನೋಡೋಣ. ಅಲೋವೆರಾ ಜೆಲ್ನಲ್ಲಿ ವಿಶಿಷ್ಟವಾದ ಪೌಷ್ಠಿಕಾಂಶಗಳು ಹೇರಳವಾಗಿದ್ದು, ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ಹೊರಹಾಕುವ ಗುಣವನ್ನು ಸಹ ಹೊಂದಿದೆ.
ಇದರಿಂದ ತಲೆಯ ಮೇಲ್ಭಾಗದ ಚರ್ಮವನ್ನು ಮೃದುಗೊಳಿಸಿ ತಲೆಹೊಟ್ಟಿಗೆ ಶೀಘ್ರ ಪರಿಹಾರ ನೀಡಲಿದೆ ಹಾಗೂ ಚರ್ಮದ ಉರಿಯುವಿಕೆಯಿಂದ ಉಂಟಾದ ನವೆಯನ್ನು ಉಜ್ಜಿದಾಗ ಉಂಟಾಗುವ ಸೋಂಕನ್ನೂ ಸಹ ನಿವಾರಿಸಲಿದೆ. ಇದರ ಬಳಕೆಯಿಂದ ಕೂದಲ ಬೇರುಗಳು ಸದೃಢಗೊಂಡು ಕೇಶವು ಮಿರಮಿರನೆ ಮಿಂಚುವಂತೆ ಮಾಡುತ್ತದೆ. ತಲೆಹೊಟ್ಟು ಮತ್ತು ತಲೆಯ ಮೇಲ್ಭಾಗದ ಚರ್ಮದ ಸೋಂಕಿನ ಸಮಸ್ಯೆಗಳನ್ನು ಅಲೊವೆರಾದಿಂದ ನಿವಾರಿಸಲು ಸಾಧ್ಯ.