News Kannada
Wednesday, July 06 2022

ಆರೋಗ್ಯ

ನಿಯಮಿತ ನಿದ್ದೆ ತರುತ್ತೆ ಆರೋಗ್ಯ… - 1 min read

Photo Credit :

ನಿಯಮಿತ ನಿದ್ದೆ ತರುತ್ತೆ ಆರೋಗ್ಯ...

ನಾವು ಸೇವಿಸುವ ಆಹಾರದೊಂದಿಗೆ ನಿಯಮಿತ ನಿದ್ದೆಯೂ ಅವಶ್ಯಕವಾಗಿರುತ್ತದೆ. ಒಂದು ವೇಳೆ ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ.

ಇಂದಿನ ದಿನಗಳಲ್ಲಿ ವಿಶ್ರಾಂತಿಯಿಲ್ಲದೆ ನಿದ್ದೆಗೆಟ್ಟು ದುಡಿಯುವುದರಿಂದಾಗಿ ನಮ್ಮ ಆರೋಗ್ಯದಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಮಾಮೂಲಿಯಾಗಿದೆ. ಸಾಮಾನ್ಯವಾಗಿ ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ.

ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದ ದೊರೆಯುತ್ತದೆ.

ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ನಿದ್ದೆಯ ಅಭಾವವಾದರೆ ಮನುಷ್ಯರಲ್ಲಿ ಸಿಡುಕು ಸ್ವಭಾವ ಮೂಡಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು,  ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್ಸೋಮ್ನಿಯಾ(ಅನಿದ್ದೆ) ರೋಗದ ಲಕ್ಷಣಗಳಾಗಿವೆ.

ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ.  ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ  ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಶವಾಸನವನ್ನು ಮಾಡುವ ಮೂಲಕ ಅನಿದ್ದೆಯನ್ನು ದೂರಮಾಡಬಹುದಾಗಿದ್ದು, ಶವಾಸನ ಮಾಡುವಾಗ ಬೆನ್ನನ್ನು ನೆಲಕ್ಕೆ ಮಾಡಿ ನೀಳವಾಗಿ ಮಲಗಬೇಕು. ಅಂಗೈಗಳನ್ನು ಮೇಲಕ್ಕೆ ಕಾಣುವಂತೆ ಹಿಡಿದಿರಬೇಕು. ಎರಡು ಕಾಲುಗಳ ಮಧ್ಯೆ ಸುಮಾರು ಎರಡು ಅಡಿಗಳ ಅಂತರವಿರಬೇಕು.  ಕಣ್ಣುಗಳನ್ನು ಮುಚ್ಚಿಕೊಂಡು ಶರೀರವನ್ನು ಸಂಪೂರ್ಣವಾಗಿ ಸಡಿಲಗೊಳಿಸಬೇಕು. ಶವಾಸನ ಮಾಡುವಾಗ ಶರೀರದ ಯಾವ ಭಾಗದಲ್ಲಿಯೂ ಕೂಡ ಬಿಗಿತವನ್ನು ಸಾಧಿಸಬಾರದು. ಆ ನಂತರ ಧ್ಯಾನವನ್ನು ಉಸಿರಾಟದತ್ತ ಹರಿಸಬೇಕು.

ಶ್ವಾಸ-ಉಚ್ಛಾಸವನ್ನು ಒಂದೇ ಎಂದು ಪರಿಗಣಿಸಿ ಒಂದು… ಎರಡು… ಹೀಗೆ ಎಣಿಸುತ್ತಾ ಹೋಗಬೇಕು. ಎಷ್ಟು ಸಾಧ್ಯವೋ ಅಷ್ಟು ಎಣಿಸುತ್ತಿರಬೇಕು. ಎಣಿಸುವ ಸಂಖ್ಯೆಯನ್ನು ಮರೆಯಬಾರದು. ಒಂದು ವೇಳೆ ಎಣಿಸುವ ಸಂಖ್ಯೆಯನ್ನು ಮರೆತರೂ ಶರೀರವನ್ನು ಕದಲಿಸಬಾರದು. ಹೀಗೆ ಮಾಡುವುದರಿಂದ ಮನಸ್ಸು ಹಾಗೂ ಶರೀರ ಹಗುರವಾಗುತ್ತದೆ. ಅನಿದ್ದೆಯಿಂದ ಬಳಲುವವರಿಗೆ ಶವಾಸನವು ತುಂಬಾ ಉಪಯುಕ್ತವಾಗಿದ್ದು ಭಯ ಚಿಂತೆ, ಶೋಕ, ಕಾಮ ಮುಂತಾದವುಗಳಿಂದ ಬಳಲುವವರು ಶವಾಸನ ಮಾಡುವುದರಿಂದ ಖಂಡಿತವಾಗಿಯೂ ಪರಿಹಾರ ದೊರೆಯುತ್ತದೆ ಎಂಬುದು ಶವಾಸನ ಮಾಡಿ ಪರಿಹಾರ ಕಂಡುಕೊಂಡವರ ಅಭಿಪ್ರಾಯವಾಗಿದೆ.

ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗುವುದರಿಂದ, ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಇನ್ನು ಮಲಗುವ ಹಾಸಿಗೆಯು ಅತಿಗಟ್ಟಿಯಾಗಿಯೂ, ಮೆತ್ತಗಾಗಿಯೂ ಇರಬಾರದು. ಮಲಗುವ ಕೋಣೆ ಶಾಂತವಾಗಿದ್ದು, ಗಾಳಿ ಬೆಳಕಾಡುವಂತಿರಬೇಕು. ಮಲಗುವ ಮುನ್ನ ಸ್ನಾನ ಅಥವಾ ಕೈಕಾಲು ತೊಳೆದು ಮಲಗಬೇಕು.

See also  ಬೇಸಿಗೆಯಲ್ಲಿ ಮುಜುಗರ ತರುವ ಮೈ ದುರ್ವಾಸನೆ..!

ತಜ್ಞರ ಅಭಿಪ್ರಾಯದಂತೆ ಆರೋಗ್ಯವಂತ ಮನುಷ್ಯನಿಗೆ  6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.  ಅದರಂತೆ ಒಂದು ತಿಂಗಳ ಮಗುವಿಗೆ  21ಗಂಟೆ, ಆರು ತಿಂಗಳ ಮಗುವಿಗೆ 18ಗಂಟೆ, ಒಂದು ವರ್ಷದ ಮಗುವಿಗೆ 12ಗಂಟೆ, ನಾಲ್ಕು ವರ್ಷದ ಮಗುವಿಗೆ 11ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10ಗಂಟೆ, 16ವರ್ಷದವರಿಗೆ 8ಗಂಟೆ, 30ವರ್ಷ ಮೇಲ್ಪಟ್ಟವರಿಗೆ 6ರಿಂದ 8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ. ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡಿ. ಸಮಯ ಸಿಕ್ಕಾಗಲೆಲ್ಲಾ ನಿದ್ದೆಗೆ ಜಾರುವುದು ಆರೋಗ್ಯಕರ ಲಕ್ಷಣವಲ್ಲ ಎಂಬುದನ್ನು ಮರೆಯಬೇಡಿ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು