ಇವತ್ತು ಯೋಗ ತರಗತಿಗಳು ಅಲ್ಲಲ್ಲಿ ನಡೆಯುತ್ತಿವೆ. ಸದಾ ಒಂದಲ್ಲಾ ಒಂದು ರೀತಿಯ ಒತ್ತಡದಲ್ಲಿ ಸಿಲುಕಿರುವವರು ಒಂದಷ್ಟು ಸಮಯವನ್ನು ಯೋಗ ತರಗತಿಯಲ್ಲಿ ಕಳೆಯುತ್ತಾರೆ. ಆ ಮೂಲಕ ಆರೋಗ್ಯ, ಶಾಂತಿ, ನೆಮ್ಮದಿ ಪಡೆಯುವ ಪ್ರಯತ್ನವನ್ನು ಮಾಡುತ್ತಾರೆ.
ಯೋಗ ಪದ್ಧತಿಯ ಬಗ್ಗೆ ಭಗವದ್ಗೀತೆಯಲ್ಲಿಯೇ ಹೇಳಲಾಗಿದೆ. ಯೋಗ ಎಂದರೆ ಇಂದ್ರಿಯ ನಿಗ್ರಹ. ಲಂಗುಲಗಾಮಿಲ್ಲದ ಇಂದ್ರಿಯ ಸುಖವನ್ನರಸುತ್ತಾ ಯೋಗ ಸಾಧನೆ ಮಾಡುತ್ತೇನೆ ಎಂದು ಹೊರಡುವ ಮಂದಿ ಬಹುಬೇಗನೆ ಸೋಲನ್ನನುಭವಿಸಿ ಬಿಡುತ್ತಾರೆ. ಯೋಗ ಅವರಿಗೆ ಸಿದ್ದಿಯಾಗುವುದಿಲ್ಲ. ಹಾಗಾಗಿ ಭಗವದ್ಗೀತೆಯಲ್ಲಿ ಹೇಳಿದಂತೆಯೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
ಯೋಗದಲ್ಲಿ ತೊಡಗುವವರು ಮೊದಲಿಗೆ ವಿವಿಕ್ತವೂ, ಪವಿತ್ರವೂ ಆದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಏಕಾಂಗಿಯಾಗಿದ್ದುಕೊಂಡು, ಊಟ ನಿದ್ರೆಗಳಲ್ಲಿ ಅತಿಯಾದ ಸಂಯಮವನ್ನು ಪಾಲಿಸಬೇಕು. ಅಲ್ಲದೆ ಈ ಬಗ್ಗೆ ಕಟ್ಟು ಕಟ್ಟಳೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಅರೆಮುಚ್ಚಿದ ಕಣ್ಣುಗಳ ದೃಷ್ಟಿಯನ್ನು ಮೂಗಿನ ತುದಿಯ ಮೇಲೆ ಕೇಂದ್ರೀಕರಿಸಬೇಕು.
ಯಾರು ದೇವರನ್ನು ಭಕ್ತಿಯಿಂದ ನೆನೆಯುವರೋ ಅವರು ಬಹುಬೇಗ ಯೋಗಸಿದ್ದಿಯನ್ನು ಪಡೆಯುತ್ತಾರೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಯೋಗ ಸಿದ್ದಿಸಬೇಕಾದರೆ, ಕೇವಲ ನಿಯಮ ಪಾಲನೆಯಲ್ಲಿ ಮಾತ್ರ ತೃಪ್ತಿ ಪಡಬೇಡಿ ನೀವು ಇನ್ನೂ ಮುಂದೆ ಹೋಗಬೇಕು. ನೀವು ಸಮಾಧಿಯಲ್ಲಿದ್ದು ಅನಿರ್ಬಂಧಿತವಾಗಿ ನಿಮ್ಮ ಹೃದಯದಲ್ಲಿ ಭಗವಂತನ ವಿಷ್ಣುರೂಪವನ್ನು ನೆನೆಯುತ್ತಾ ಇದ್ದರೆ ನಿಜವಾಗಿಯೂ ಯೋಗ ಸಿದ್ದಿಯು ಲಭಿಸುತ್ತದೆ.
ಯೋಗ ಎಂದರೆ ಆತ್ಮ ಮತ್ತು ಪರಮಾತ್ಮನ ನಡುವೆ ಸಂಬಂಧ ಕಲ್ಪಿಸುವ ಸಾಧನವಾಗಿದ್ದು, ಈ ಸಾಧನೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಸತ್ಯಯುಗದಲ್ಲಿ, ಸುವರ್ಣಯುಗದಲ್ಲಿ ಸದಾ ವಿಷ್ಣು ಧ್ಯಾನ ಮಾಡಬೇಕೆಂಬುದು ಯೋಗಪದ್ದತಿಯಾಗಿತ್ತು. ತ್ರೇತಾಯುಗದಲ್ಲಿ ಮಹಾಯಜ್ಞ ಯಾಗಾದಿಗಳನ್ನು ಮಾಡಿ ಯೋಗ ಸಾಧನೆ ಮಾಡಬೇಕಾಗಿತ್ತು. ಆ ನಂತರದ ದ್ವಾಪರಯುಗದಲ್ಲಿ ದೇವಸ್ಥಾನದ ಅರ್ಚನೆಯಿಂದ ಯೋಗಸಿದ್ದಿ ಸಾಧ್ಯವಾಗಿತ್ತು. ಈಗಿನ ಯುಗ ಕಲಿಯುಗವಾದುದರಿಂದ ಕಲಹ, ವೈಷಮ್ಯಗಳ ಯುಗ. ಪ್ರತಿಯೊಬ್ಬನಿಗೂ ತನ್ನದೇ ಆದ ಸಿದ್ಧಾಂತವಿದೆ, ತತ್ವವಿದೆ. ಹಾಗಾಗಿ ಇಂದಿಗೆ ಭಗವಂತನ ಪುಣ್ಯನಾಮ ಜಪವೇ ಸೂಕ್ತವಾಗಿದ್ದು, ಆ ಮೂಲಕ ಆತ್ಮ ಸಾಕ್ಷಾತ್ಕಾರವನ್ನು ಪಡೆಯಬಹುದು ಎಂಬುವುದಾಗಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಅವರು ಹೇಳಿದ್ದಾರೆ.
ಭಗವದ್ಗೀತೆಯಲ್ಲಿ ಹೇಳಿರುವ ಯೋಗ ಪದ್ಧತಿಗೂ, ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿರುವ ಖೋಟಾಯೋಗ ಪದ್ಧತಿಗೂ ವ್ಯತ್ಯಾಸವಿದ್ದು, ಯೋಗಿಗಳೆಂದು ಕರೆದುಕೊಂಡು ಕೆಲವರು ಪಾಶ್ಚಾತ್ಯ ದೇಶಗಳಲ್ಲಿ ಚಾಲ್ತಿಗೆ ತಂದಿರುವ ಯೋಗ ಪದ್ಧತಿಗಳು ಅಸಲಿಯಲ್ಲ. ಏಕೆಂದರೆ ಯೋಗವು ಕಷ್ಟವಾದುದು. ಅದರಲ್ಲಿ ಮೊದಲು ಇಂದ್ರಿಯಗಳನ್ನು ನಿಗ್ರಹಿಸಬೇಕು. ಅದು ಯೋಗಿಯ ದೈಹಿಕ ಸುಖ, ಮದ್ಯಪಾನ, ಮಾಂಸ ಭಕ್ಷಣೆ ಮುಂತಾದ ವಿಲಾಸಗಳನ್ನು ತ್ಯಜಿಸಬೇಕು. ನಂತರ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ.
ಸ್ವಾಮಿ ಪ್ರಭುಪಾದರ ಪ್ರಕಾರ ಕಲಿಯುಗದಲ್ಲಿ ಯೋಗ ಪದ್ಧತಿಯನ್ನು ಆಚರಿಸುವುದು ತುಂಬಾ ಕಷ್ಟ. ಯೋಗ ಎಂದರೆ ಪರಮಾತ್ಮನಾದ ವಿಷ್ಣುವನ್ನು ಧ್ಯಾನ ಮಾಡುವುದು. ಆತ ನಮ್ಮ ಹೃದಯದಲ್ಲಿ ನೆಲೆಸಿದ್ದಾನೆ. ಆತನೆಡೆಗೆ ನಮ್ಮ ಗಮನವನ್ನು ಕೇಂದ್ರಿಕರಿಸಬೇಕಾದರೆ ನಮ್ಮ ಇಂದ್ರಿಯಗಳನ್ನು ನಿಗ್ರಹಿಸಬೇಕು. ಇಂದ್ರಿಯಗಳು ರೊಚ್ಚಿಗೆದ್ದ ಕುದುರೆಗಳಂತೆ ಕೆಲಸ ಮಾಡುತ್ತವೆ. ಗಾಡಿಯ ಕುದುರೆಗಳನ್ನು ಹತೋಟಿಯಲ್ಲಿಡಲಾಗದಿದ್ದರೆ ಅಪಾಯ ತಪ್ಪಿದಲ್ಲ. ಆದುದರಿಂದ ಯೋಗ ಪದ್ದತಿಯೆಂದರೆ ಇಂದ್ರಿಯಗಳನ್ನು ನಿಯಂತ್ರಿಸುವುದು. ಈ ಇಂದ್ರಿಯಗಳನ್ನು ಹಾವುಗಳಿಗೆ ಹೋಲಿಸುತ್ತಾರೆ. ಹಾವಿಗೆ ಯಾರು ಮಿತ್ರ, ಯಾರು ಶತ್ರು ಎಂಬುವುದೇ ಗೊತ್ತಾಗುವುದಿಲ್ಲ. ಅದು ಯಾರನ್ನು ಬೇಕಾದರೂ ಕಚ್ಚಬಹುದು. ಹಾಗಾಗಿ ಇಂದ್ರಿಯಗಳನ್ನು ನಿಗ್ರಹಿಸುವ ಹೊರತು ಯೋಗ ಸಿದ್ದಿ ಅಸಾಧ್ಯವಾಗುತ್ತದೆ.