ಬೇರೆಯವರ ಸಾಧನೆ ಬಗ್ಗೆ ಮಾತನಾಡುತ್ತೇವೆ. ಅವನು ಬುದ್ದಿವಂತ, ಅದೃಷ್ಟವಂತ ಹಾಗಾಗಿ ಆ ಸಾಧನೆ ಮಾಡಲು ಸಾಧ್ಯವಾಯಿತು. ನಮಗೆ ಅದೃಷ್ಟವಿಲ್ಲ. ಹಾಗಾಗಿ ಹೀಗೆ ಇದ್ದೇವೆ ಎಂಬ ನಿರಾಶೆಯ ಮಾತನಾಡುತ್ತಾ ನಮ್ಮ ಶಕ್ತಿಯನ್ನು, ಪ್ರತಿಭೆಯನ್ನು ನಾವೇ ಕೈಯ್ಯಾರೆ ಚಿವುಟಿ ಹಾಕಿಬಿಡುತ್ತೇವೆ.
ಒಂದು ಸೋಲು ನಿರಾಶೆಯನ್ನು ತರಬಹುದು. ಆದರೆ ಅಷ್ಟು ಮಾತ್ರಕ್ಕೆ ನಿರಾಶವಾದಿಗಳಾಗುವುದು ಎಷ್ಟು ಸರಿ? ಇನ್ನೊಬ್ಬರ ಉನ್ನತಿ ಕಂಡು ಹುಲುಬುತ್ತಾ ತನ್ನ ಸಾಮಥ್ರ್ಯಗಳನ್ನು ಗೌಣವಾಗಿಸಿಕೊಳ್ಳುವುದು ಮೂರ್ಖತನವಾಗಿಬಿಡುತ್ತದೆ. ನಾವ್ಯಾಕೆ ನಿರಾಶವಾದಿಗಳಾಗಿ ಬಿಡುತ್ತೇವೆ ಎಂದರೆ ನಮ್ಮ ಒಳ ಪ್ರವೇಶಿಸಿ ನಮ್ಮ ಶಕ್ತಿಯನ್ನು ನೋಡದೇ ಬದಲಾಗಿ ಹೊರಗೆ ಕಾಣುವ ನಮ್ಮ ದೇಹವನ್ನು ಮಾತ್ರ ನೊಡಿಕೊಳ್ಳುತ್ತೇವೆ. ದೇಹದ ಪೋಷಣೆಗೆ ಕಾಳಜಿ ತೋರುತ್ತೇವೆ. ಬುದ್ದಿ, ಮನಸ್ಸಿನ ಶಕ್ತಿ ಪೋಷಣೆಗೆ ಕಾಳಜಿ ವಹಿಸುವುದೇ ಇಲ್ಲ. ನಾವೆಂದರೆ ಬರೀ ಶರೀರವಲ್ಲ ಅದರ ಒಳಗೂ ಅಪಾರವಾದ ಚೈತನ್ಯವಿದೆ ಎಂಬುವುದನ್ನು ಅರಿತಾಗ ನಿರಾಶವಾದಿತನ ದೂರವಾಗುತ್ತದೆ. ಜಗತ್ತಿನಲ್ಲಿ ಪ್ರತಿಯೊಬ್ಬರಲ್ಲೂ ಪ್ರತಿಭೆಯಿದೆ. ಅದಕ್ಕೆ ಮಾರ್ಗದರ್ಶನ ಹಾಗೂ ಶ್ರಮದ ಕೊರತೆಯಿಂದಾಗಿ ಹೆಚ್ಚಿನವರ ಪ್ರತಿಭೆ ಪಲಾಯನಗೊಂಡು ನಿರಾಶವಾದಿಗಳಾಗಿ ಬಿಡುತ್ತಾರೆ.
ಹಾಗೆ ನೋಡಿದರೆ ಬುದ್ದಿಯ ಜೊತೆಗೆ ಮನಸ್ಸು ಮುಖ್ಯವಾಗಿದೆ. ಮನಸ್ಸು ಸರಿಯಾಗಿದ್ದರೆ ನಿರಾಶೆ ಉಂಟಾಗುವುದಿಲ್ಲ. ನಿರಾಶೆಗೆ ಮನಸ್ಸಿನ ದೌರ್ಬಲ್ಯವೇ ಮುಖ್ಯ ಕಾರಣವಾಗಿದೆ. ಬ್ರಹ್ಮಾಂಡದ ಸರ್ವ ಶಕ್ತಿಯೂ ನಮ್ಮ ಮನಸ್ಸಿನಲ್ಲಿದೆ. ಬ್ರಹ್ಮಾಂಡದಲ್ಲಿ ಮನಸ್ಸಿಗಿಂತ ದೊಡ್ಡದಾದುದು ಯಾವುದೂ ಇಲ್ಲ. ಮನಸ್ಸು ಏನನ್ನು ನಿರ್ಧರಿಸುತ್ತದೆಯೋ ಅದನ್ನು ಪೂರೈಸಲು ಸಾಧ್ಯವಾಗುತ್ತದೆ. ಅಂತಹ ಪ್ರಚಂಡ ಶಕ್ತಿ ನಮ್ಮ ಮನಸ್ಸಿನಲ್ಲಿದೆ. ಅದನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ನಮಗಿರಬೇಕಷ್ಟೆ.
ಮನಸ್ಸನ್ನು ಏಕಾಗ್ರತೆಗೆ ತಂದು ಧ್ಯಾನದಿಂದ ಮನಸ್ಸನ್ನು ಸರಿಯಾದ ದಾರಿಯಲ್ಲಿ ರೂಪುಗೊಳಿಸಿದರೆ, ಮನೋಬಲವನ್ನು ಬೆಳೆಸಿಕೊಂಡರೆ ನಾವು ಮಹಾತ್ಮರಾಗಬಹುದು, ಯೋಗಿಯಾಗಬಹುದು, ಪರಮಾತ್ಮನ ಸಾಕ್ಷಾತ್ಕಾರ ಪಡೆಯಬಹುದು, ಸಾಮಾಜಿಕ ಜೀವನದಲ್ಲಿ ಮಹಾವಿಜ್ಞಾನಿಯಾಗಬಹುದು, ದೊಡ್ಡ ಕಲಾವಿದನಾಗಬಹುದು, ಸಾಹಿತಿಯಾಗಬಹುದು, ಹೀಗೆ ತಮ್ಮ ಪ್ರತಿಭೆಗೆ ತಕ್ಕಂತೆ ಮುಂದುವರೆಯಬಹುದು.ಮನುಷ್ಯನ ಜೀವನವೇ ಅಪೂರ್ವವಾದುದು. ಮನುಷ್ಯ ಜನ್ಮ ದೊರೆತಿದ್ದೊಂದು ಸುವರ್ಣಾವಕಾಶ. ಮನುಷ್ಯ ಜೀವನವು ಅದ್ಭುತವಾಗಿದೆ. ಹೊರ ಕಾಣುವ ಶರೀರಕ್ಕಿಂತಲೂ ಒಳಗಿರುವ ಶಕ್ತಿ ಮಹಾನ್ ಶಕ್ತಿಯಾಗಿದೆ. ಆದರೆ ಅದನ್ನು ಅರಿಯದೆ ಎಲ್ಲಾ ಇದ್ದರೂ ಏನೂ ಇಲ್ಲವೆಂದು ತೆಪ್ಪಗಿರುವುದು ನಿರಾಶವಾದಿತನವನ್ನು ಬೆಳೆಸುತ್ತದೆ. ಆದರೆ ಅದಕ್ಕೆ ಅವಕಾಶ ನೀಡದೆ ಸದಾ ಆಶಾವಾದಿತನ ನಮ್ಮಲ್ಲಿ ಮೂಡಬೇಕು. ಅದಕ್ಕೆ ಪೂರಕ ಕಾರ್ಯಗಳನ್ನು ಮಾಡಬೇಕು.
ಪರಮಾತ್ಮನ ಶಕ್ತಿ ಚೈತನ್ಯ ಬೆಳಕು ನನ್ನಲ್ಲಿದೆ. ನಾನು ಏನನ್ನಾದರೂ ಸಾಧಿಸಬಲ್ಲೆ, ಸಾಧಿಸಿಯೇ ತೀರುತ್ತೇನೆ. ಯಾವುದೇ ಸಮಸ್ಯೆ ತಲೆದೋರಿದರೂ ಸಮಸ್ಯೆಗಳನ್ನು ಪರಿಹರಿಸಿಕೊಂಡು ಗೆಲ್ಲಬಲ್ಲೆನೆಂಬ ಸಕಾರಾತ್ಮಕ ನಿಲುವಿನ ಚಿಂತನೆಯೇ ಆಶಾಕಿರಣ. ಜೀವನದಲ್ಲಿ ಆಶಾಭಾವನೆಯಿಲ್ಲದವರು ಮನುಷ್ಯನೇ ಅಲ್ಲ. ಜೀವನದಲ್ಲಿ ಸಾವಿರಾರು ಯಶಸ್ಸಿನ ಬಾಗಿಲುಗಳಿವೆ. ಹಾಗಾಗಿ ಒಂದೇ ಸೋಲಿಗೆ ಯಶಸ್ಸಿನ ಬಾಗಿಲು ಮುಚ್ಚಿತೆಂಬ ನಿರಾಶವಾದಿತನ ಏಕೆ? ಮತ್ತೊಂದು ಮಾರ್ಗವಿದೆ. ಅದನ್ನು ಗುರುತಿಸಿ ಮುನ್ನಡೆಯುವ ಪ್ರಯತ್ನ ನಮ್ಮದಾಗಬೇಕು.
ವಿವೇಕಿಗಳು, ಬುದ್ದಿವಂತರು ತಮ್ಮ ಒಳಗಿನ ಶಕ್ತಿ ಚೈತನ್ಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಆಶಾಜ್ಯೋತಿಯ ಬೆಳಕಲ್ಲಿ ನಡೆಯುತ್ತಾರೆ. ಅಷ್ಟೇ ಅಲ್ಲ ಮಾನವ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ. ಆಧ್ಯಾತ್ಮಿಕ ಜ್ಞಾನಿಗಳು ಹೇಳುತ್ತಾರೆ ಈ ಮಾನವ ಜೀವನ ನಿರಾಶೆಯಿಂದ ನರಳಾಡುವುದಕ್ಕಲ್ಲ. ಅಪಾರವಾದ ಶಕ್ತಿ, ಅನಂತವಾದ ಚೈತನ್ಯ, ಪರಮಾತ್ಮನ ಬೆಳಕು ಎಲ್ಲವನ್ನೂ ಬಳಸಿಕೊಂಡು ಸಾರ್ಥಕ ಜೀವನ ನಡೆಸುವುದರಿಂದ ನಿನಗೂ ನಿನ್ನ ಸುತ್ತಲಿನವರಿಗೂ ಒಳ್ಳೆದಾಗುತ್ತದೆ. ನಿನ್ನಿಂದ ಮತ್ತೊಬ್ಬರಿಗೆ ಒಳ್ಳೆಯದಾದರೆ ಅದಕ್ಕಿಂತ ಇನ್ನೇನು ಬೇಕು? ಮತ್ತೊಬ್ಬರ ಸಂತಸದಲ್ಲಿ ಪಾಲ್ಗೊಳ್ಳುವುದು ಸಹ ನಿರಾಶವಾದಿತನವನ್ನು ದೂರ ಮಾಡಿ ಆಶಾಕಿರಣ ತುಂಬುತ್ತದೆ.