News Kannada
Tuesday, July 05 2022

ಆರೋಗ್ಯ

ದೇಹ ಮಾತ್ರವಲ್ಲ ಮನಸ್ಸು ಸ್ವಚ್ಛವಾಗಿರಲಿ.. - 1 min read

Photo Credit :

ದೇಹ ಮಾತ್ರವಲ್ಲ ಮನಸ್ಸು ಸ್ವಚ್ಛವಾಗಿರಲಿ..

ನಮ್ಮ ಮನೆ ಮತ್ತು ಪರಿಸರ ಸ್ವಚ್ಛವಾಗಿಟ್ಟುಕೊಳ್ಳಲು ನಾವೆಷ್ಟು ಕಾಳಜಿ ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ನಮ್ಮ ಮನಸ್ಸಿನ ಸ್ವಚ್ಛತೆಗೂ ನೀಡಬೇಕು. ಆಗ ಮಾತ್ರ ಮನೆ ಮತ್ತು ಮನಸ್ಸು ಶುದ್ಧವಾಗಿರಲು ಸಾಧ್ಯವಾಗುತ್ತದೆ.

ಹೆಚ್ಚಿನವರು ಆಗಾಗ್ಗೆ ನನ್ನ ಮನಸ್ಸು ಸರಿಯಿಲ್ಲ. ಏನೂ ಕೆಲಸ ಮಾಡಲು ಆಸಕ್ತಿಯಿಲ್ಲ. ಹೀಗೆ ಆಲಸ್ಯ ತುಂಬಿದ ಮಾತನ್ನು ಆಡುತ್ತಿರುತ್ತಾರೆ. ಇದು ದೇಹಕ್ಕೆ ಸಂಬಂಧಿಸಿದ ತೊಂದರೆಯಲ್ಲ. ಮಾನಸಿಕ ತೊಂದರೆ. ದೇಹ ಆರೋಗ್ಯವಾಗಿದ್ದರೂ ಮನಸ್ಸು ಸರಿಯಿಲ್ಲದಿದ್ದರೆ ಆ ಸಂದರ್ಭ ಏನೇ ಕೆಲಸ ಮಾಡಿದರೂ ಅದರಲ್ಲಿ ಪರಿಪೂರ್ಣತೆ  ಕಾಣಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಆರೋಗ್ಯ ದೈನಂದಿನ ಚಟುವಟಿಕೆಗಳಿಗೆ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯಕರ ಮನಸ್ಸು ಕೂಡ ಮುಖ್ಯ. ಮುಂಜಾನೆಯಿಂದಲೇ  ನಾವು ಲವಲವಿಕೆಯಲ್ಲಿದ್ದಿದ್ದೇ ಆದರೆ ಮನಸ್ಸು ಪ್ರಾಂಜಲವಾಗಿದ್ದು, ನಮ್ಮನ್ನು ಒಳ್ಳೆಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತದೆ. ಒಂದು ಆರೋಗ್ಯಕರ ಮನಸ್ಸನ್ನು ನಾವು ನಮ್ಮಿಂದಲೇ ಪಡೆದುಕೊಳ್ಳಬೇಕೇ ವಿನಃ ಮತ್ತೊಬ್ಬರಿಂದಲ್ಲ.

ಮನಸ್ಸು ಚಂಚಲವಾಗುತ್ತಿದೆ. ಎಲ್ಲೋ ಒಂದು ಕಡೆ ಜಾರುತ್ತಿದೆ. ಕಲ್ಮಶ ತುಂಬಿಕೊಳ್ಳುತ್ತಿದೆ. ಹೀಗೆ.. ಮನಸ್ಸಿನ ತುಂಬಾ ಕೊಳೆ ತುಂಬುತ್ತಿರುವುದು ನಮಗೆ ತಿಳಿಯುತ್ತಲೇ ಇರುತ್ತದೆ. ಆದರೆ ಆ ಕೊಳೆಯನ್ನು ತೊಳೆದು ಸ್ವಚ್ಛಗೊಳಿಸದೆ ಮತ್ತಷ್ಟು ಮಲೀನಗೊಳ್ಳುವಂತೆ ಮಾಡುತ್ತೇವೆ. ಇದರ ಪರಿಣಾಮವನ್ನು ಮುಂದೆ ನಾವೇ ಅನುಭವಿಸುತ್ತೇವೆ. ಸ್ವಚ್ಛ ಮನಸ್ಸನ್ನು ಪಡೆಯದೆ ಹೋದರೆ ನಮ್ಮಲ್ಲಿ ಯಾವ ರೀತಿಯ ಐಶ್ವರ್ಯವಿದ್ದರೂ ಅದು ಗೌಣವಾಗಿ ಬಿಡುತ್ತದೆ.

ಹಿಂದಿನ ದಿನಗಳಿಗೆ ಹೋಲಿಸಿದರೆ ಈಗಿನದು ಸವಾಲ್ನ ದಿನಗಳು. ನಾವು ಎಲ್ಲ ರೀತಿಯಲ್ಲಿ (ವೈಜ್ಞಾನಿಕವಾಗಿ ಇತರೆ ಕ್ಷೇತ್ರಗಳಲ್ಲಿ) ಮುಂದುವರೆಯುತ್ತಿದ್ದೇವೆ. ಬಿಡುವಿಲ್ಲದ ದುಡಿಮೆ, ಪೈಪೋಟಿ, ಹೆಚ್ಚು ಸಂಪಾದಿಸುವ, ಕೂಡಿಡುವ, ನೆಲೆ ಭದ್ರಗೊಳಿಸುವ ತವಕ, ಹಠ ಹೀಗೆ ಒತ್ತಡದ ಜೀವನ. ನಮ್ಮ ಕೆಲಸ ಕಾರ್ಯಗಳಿಗೆ ತಕ್ಕಂತೆ ಮನಸ್ಸು ಸಹ ಅದೇ ಪರಿಧಿಯಲ್ಲಿ ಸುತ್ತುತ್ತಿರುತ್ತದೆ. ಒಂದು ರೀತಿಯಲ್ಲಿ ವ್ಯವಹಾರಿಕ ಮನಸ್ಸಾಗಿಯೂ ಮಾರ್ಪಾಡುಗೊಳ್ಳತೊಡಗಿದೆ. ಲಾಭ ನಷ್ಟದ ಲೆಕ್ಕಚಾರದಲ್ಲಿ ಮುಳುಗಿ ಹೋಗಿರುವ ಮನಸ್ಸನ್ನು ಹೊಂದಿರುವ ವ್ಯಕ್ತಿ ಮನಸ್ಸು ಬಿಚ್ಚಿ ಮಾತನಾಡುವುದಾದರೂ ಹೇಗೆ? ಏಕಾಂತದಲ್ಲಿ ಕುಳಿತು ಮನಸ್ಸಿನ ಕಲ್ಮಶವನ್ನು ತೊಳೆದುಕೊಳ್ಳುವ ವ್ಯವಧಾನವಾದರೂ ಎಲ್ಲಿದೆ? ನಮ್ಮ ಮುಂದೆಯೇ ಅಭಿವೃದ್ಧಿ ಹೊಂದುತ್ತಿರುವವರನ್ನು ಕಂಡು ಅಸೂಯೆ ಪಡುತ್ತಾ.. ಮನಸ್ಸಿನ ತುಂಬಾ ನೊಂದುಕೊಂಡು ಅಥವಾ ಕೆಟ್ಟದನ್ನೇ ಆಲೋಚಿಸುತ್ತಾ ಮಾನಸಿಕ ರೋಗಿಗಳಾಗಿ, ಇರುವ ಸುಖವನ್ನೂ ಅನುಭವಿಸಲಾಗದೆ ಪರದಾಡುತ್ತೇವೆ. ನಾವು ನಮ್ಮ ಕಲ್ಮಶ ಮನಸ್ಸಿನಿಂದ ಕೆಟ್ಟು ಇನ್ನೊಬ್ಬರನ್ನೂ ಕೆಡಿಸುತ್ತೇವೆ.

ಮನಸ್ಸು ಸುಮ್ಮನೆ ಕೈಕಟ್ಟಿಕೂರುವಂತಹದಲ್ಲ. ಅದು ಸದಾ ನಮ್ಮನ್ನು ತರಾಟೆಗೆ ಒಳಪಡಿಸುತ್ತಿರುತ್ತದೆ. ಹಾಗೆ ನೋಡಿದರೆ ಈ ದೃಢವಲ್ಲದ ಮನಸ್ಸಿಗೆ ಮೂಲ ಕಾರಣ ಯಾವುದು ಎಂಬುವುದು ಆಳವಾಗಿ ನೋಡಿದರೆ ಅದು ನಮಗೆ ಸ್ಪಷ್ಟವಾಗುತ್ತದೆ. ಯಾವುದೇ ಒಂದು ಆರೋಚನೆ ಅಥವಾ ಆಲೋಚನೆಗಳು, ಒಂದು ಮತ್ತೊಂದರ ಬಗ್ಗೆ ತೋರುವ ಪ್ರತಿಕ್ರಿಯೆಗಳೇ ಈ ಪರಿಸ್ಥಿತಿಗೆ ಕಾರಣಣೆನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆದುದರಿಂದ ನಮ್ಮ ಆಲೋಚನೆಗಳು ಸಾಧ್ಯವಾದಷ್ಟು ಗಟ್ಟಿಯಾಗಿರುವಂತೆ ನೊಡಿಕೊಳ್ಳಬೇಕು. ಮನಸ್ಸು ಚಂಚಲವಾಗುತ್ತಿದೆ ಎಂಬುವುದು ತಿಳಿದಾಗ ಆಧ್ಯಾತ್ಮದ ಕಡೆಗೆ ವಾಲುವುದು ಜ್ಞಾನಿಯ ಲಕ್ಷಣ. ಜಪ, ತಪ ಮುಂತಾದವುಗಳ ಮೂಲಕ ಮನಸ್ಸನ್ನು ಒಂದೆಡೆ ಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಾನೆ.

See also  ಆಹ್ಲಾದಕವಾಗಿರುವುದೇ ಆರೋಗ್ಯ!

ಸದಾ ದೇವರ ಆರಾಧನೆಯ ಮೂಲಕ ಮನಸ್ಸನ್ನು ತಿಳಿಗೊಳಿಸಬಹುದು. ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕವೂ ಮನಸ್ಸನ್ನು ಅನಗತ್ಯ ಚಂಚಲತೆಯಿಂದ ಬಿಡಿಸಿಕೊಳ್ಳಬಹುದು. ಬದುಕಿನ ಪರಮಗುರಿ ಬ್ರಹ್ಮ ಸಾಕ್ಷಾತ್ಕಾರ ಎಂಬ ತಿಳುವಳಿಕೆಯ ಎಚ್ಚರವನ್ನು ನಿರಂತರವಾಗಿ ಉಳಿಸಿಕೊಳ್ಳುವುದರ ಮೂಲಕ ಮನಸ್ಸನ್ನು ಸಮರ್ಥವಾದ ರೀತಿಯಲ್ಲಿ ಸ್ಥಿಮಿತಕ್ಕೆ ತಂದುಕೊಳ್ಳಬಹುದು. ಈ ಬಗೆಯ ಅಭ್ಯಾಸಗಳಿಂದ ಮುಂದುವರೆದು ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

ಮನಸ್ಸನ್ನು ಆರೋಗ್ಯ ಪೂರ್ಣವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಎಂದೂ ಬೇಸರದ ಕೆಲಸವಾಗಲಾರದು. ಮನಸ್ಸನ್ನು ಕ್ರಿಯಾಶೀಲವನ್ನಾಗಿಸಲು ಯಾವ ಬಗೆಯ ಹೊಸ ಹವ್ಯಾಸ ರೂಢಿಸಿಕೊಳ್ಳಬೇಕು ಎಂಬುವುದರ ಆಯ್ಕೆ ಆಯಾಯ ವ್ಯಕ್ತಿಗಳಿಗೆ ಸೇರಿದ್ದಾಗಿದೆ.  ದಾನ ಕರ್ತವ್ಯ ಪರತೆ, ನಿರ್ದಿಷ್ಟವಾದ ವೃತಗಳ ಆಚರಣೆ, ಶಾಸ್ತ್ರ ಶ್ರವಣ, ಸತ್ಕಾರ್ಯ ನಿರ್ವಹಣೆ ಇದೆಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ, ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ನಾವು ಸದಾ ಆರೋಗ್ಯಕರವಾದ ಹಾಗೂ ಸೃಜನಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಅದನ್ನು ಉದಾತ್ತವಾದ ವಿಚಾರಗಳಿಂದ ಹಾಗೂ ಘನವಾದ ಸ್ಪೂರ್ತಿಯಿಂದ ಪೋಷಿಸಬೇಕು. ಹಾಗೆ ಮಾಡದಿದ್ದರೆ ಮನಸ್ಸು ಕೆಳಕ್ಕೆ ಜಾರಿ ಚದುರಿ ಹೋಗುತ್ತದೆ.ಇಂತಹ ಚೂರು, ಚೂರಾದ ಮನಸ್ಸನ್ನು ಒಂದು ನಿಶ್ಚಿತ ನೆಲೆಗೆ ತರುವುದು ಅಸಾಧ್.ಯ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು