ಇವತ್ತು ಹೆಚ್ಚಿನ ಮಂದಿ ಆತಂಕದಲ್ಲಿಯೇ ದಿನ ಕಳೆಯುತ್ತಾರೆ. ಆಫೀಸ್ ಗೆ ರಜೆ ಹಾಕಿ ಮನೆಯಲ್ಲಿದ್ದರೂ ನೆಮ್ಮದಿಯಿಲ್ಲ. ಪ್ರತಿಕ್ಷಣವೂ ಒತ್ತಡ.. ಆತಂಕ.. ಆಗಾಗ್ಗೆ ಬರುವ ದೂರವಾಣಿ ಕರೆಗಳಿಗೆ ಓಗೊಡಬೇಕು. ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗಾಗಿ ನಮ್ಮದೇ ಸ್ವಾತಂತ್ರ್ಯ ನಮಗೆ ಅರಿವಿಲ್ಲದಂತೆ ಕಳೆದು ಹೋಗುತ್ತಿದೆ. ಬದಲಿಗೆ ಸದ್ದಿಲ್ಲದೆ ಶಾರೀರಿಕ ಕಾಯಿಲೆಗಳು ಕಾಣಲಾರಂಭಿಸುತ್ತಿವೆ.
ಹಣದ ಬೆನ್ನತ್ತಿದ್ದೇವೆ. ಇದ್ದುದರಲ್ಲೇ ನೆಮ್ಮದಿಯಿಂದ ಬದುಕುವ, ಹಾಸಿಗೆಯಿದ್ದಷ್ಟೇ ಕಾಲು ಚಾಚುವ ಹಳೆಯ ಶೈಲಿಯ ಬದುಕಿಗೆ ಹೊಂದಿಕೊಂಡು ಬದುಕಲು ನಾವು ತಯಾರಿಲ್ಲ. ಕೆಲವು ವಸ್ತುಗಳಿಂದ ನಮಗೆ ಉಪಯೋಗವಾಗದಿದ್ದರೂ ಅದು ನಮಗೆ ಬೇಕು. ಏಕೆಂದರೆ ಅದು ಪಕ್ಕದ ಮನೆಯಲ್ಲಿದೆ. ಹೀಗಾಗಿ ನಮ್ಮ ಮನೆಯಲ್ಲಿ ಇಲ್ಲಾಂದ್ರೆ ಹೇಗೆ? ನಮ್ಮ ಅಂತಸ್ತು ಕಡಿಮೆಯಾಗುವುದಿಲ್ಲವೆ? ಹೀಗೆಂಬ ಮನೋಭಾವ. ಅದಕ್ಕಾಗಿ ಸಾಲ ಮಾಡಿಯಾದರೂ ಕೊಂಡುಕೊಳ್ಳಲೇ ಬೇಕು. ಬರುವ ಆದಾಯದಲ್ಲಿ ಅದಕ್ಕೊಂದು ಪಾಲು.. ನಮ್ಮ ಆಸೆಗಳು ಹೆಚ್ಚಾದಷ್ಟೂ ದಿನನಿತ್ಯ ಹಣ ಬರುವ ಮೂಲವನ್ನು ಅರಸುತ್ತಾ ದುಡಿಯುತ್ತೇವೆ. ಸಂಪಾದಿಸುವುದೇ ಬದುಕು. ಇದಕ್ಕಾಗಿ ಈಗ ನಾವು ನಿದ್ದೆ, ಆಹಾರ, ಸಂಬಂಧ ಎಲ್ಲವನ್ನೂ ತ್ಯಜಿಸಲು ಸಿದ್ಧರಾಗಿದ್ದೇವೆ.
ನಾವು ಕಾರ್ಯ ನಿರ್ವಹಿಸುವ ಕ್ಷೇತ್ರವೂ ಅಷ್ಟೆ. ಸದಾ ಮಿಂಚಿನ ಸಂಚಾರದಂತೆ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಐದಂಕಿ ಸಂಬಳಕೊಡುವ ಸಂಸ್ಥೆ ನಮ್ಮಿಂದ ಅದರ ಹತ್ತು ಪಟ್ಟು ಪ್ರಮಾಣದ ದುಡಿಮೆಯನ್ನು ಬಯಸುತ್ತದೆ. ಹಾಗಾಗಿ ಪ್ರತಿಕ್ಷಣವೂ ಅಮೂಲ್ಯವೇ. ಮನಸ್ಸು ಯಾವಾಗ ಗೊಂದಲಕ್ಕೀಡಾಗುತ್ತದೆಯೋ ಅದರ ಪ್ರಭಾವ ಶರೀರದ ಮೇಲಾಗುತ್ತದೆ. ಹೊರ ಪ್ರಪಂಚಕ್ಕೆ ನಾವು ವಿಚಿತ್ರವಾಗಿ ಕಾಣುತ್ತೇವೆ. ಮಕ್ಕಳ, ಹೆಂಡತಿ, ಸಹದ್ಯೋಗಿಗಳ ಮೇಲೆ ಸಿಡುಕುತ್ತೇವೆ. ಅನಾವಶ್ಯಕ ಕೋಪ ಮಾಡಿಕೊಳ್ಳುತ್ತೇವೆ. ನಾವ್ಯಾಕೆ ಹೀಗೆ ಮಾಡಿಕೊಳ್ಳುತ್ತೇವೆ ಎಂಬುವುದು ನಮಗೆ ತಿಳಿಯುವುದಿಲ್ಲ. ಇದ್ದಕ್ಕಿದ್ದಾಗೆ ಉದ್ರೇಕಗೊಳ್ಳುವುದು, ಅಸಹನೆ ಇವೆಲ್ಲವೂ ಒತ್ತಡದ ಪರಿಣಾಮದಿಂದ ಉಂಟಾಗುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ.
ಕೆಲವೊಮ್ಮೆ ಎಲ್ಲ ವಿಚಾರಗಳನ್ನು ತಲೆಯಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ. ಮೆದುಳಿನಲ್ಲಿ ಶೇಖರಣೆಯಾಗುವ ಅಸಂಖ್ಯ ವಿಷಯಗಳನ್ನು ಮೆದುಳು ಹೊರ ಹಾಕಲು ಯತ್ನಿಸುತ್ತದೆ. ಮರೆವು ಎನ್ನುವುದು ಒಂದು ರೀತಿಯ ಮೆದುಳಿನ ಡಿಫೆನ್ಸಿವ್ ಮೆಕಾನಿಸಮ್ನಂತೆ. ಇಲ್ಲಿ ಮರೆವು ಚಿಕ್ಕ ಚಿಕ್ಕ ವಿಷಯಗಳಿಗಾಗಿಯೇ.. ಪುಸ್ತಕ ಒಂದೆಡೆಯಿಟ್ಟು ಮತ್ತೊಂದೆಡೆ ಹುಡುಕುವುದು, ಕೀ ಬಿಟ್ಟು ಆಫೀಸಿಗೆ ತೆರಳುವುದು ಮತ್ತೆ ಹುಡುಕುವುದು ಹೀಗೆ ಏನಾದರೊಂದು ನಡೆಯುತ್ತಲೇ ಇರುತ್ತದೆ. ಈ ಸಂದರ್ಭ ಆತಂಕ, ಕೋಪ, ಭಯ, ಕಳವಳ ಹೀಗೆ ಎಲ್ಲವೂ ಒಮ್ಮೆಗೆ ಉಂಟಾಗುತ್ತದೆ.
ಆಹಾರ ಸೇವಿಸುವುದನ್ನು ಮರೆಯುತ್ತೇವೆ. ಸಮಯಕ್ಕೆ ಸರಿಯಾಗಿ ಹೊಟ್ಟೆ ಆಹಾರವನ್ನು ಹಸಿವಿನ ಮೂಲಕ ನೆನಪಿಸಿದರೂ ಕೆಲಸದ ಒತ್ತಡದಲ್ಲಿ ಅದನ್ನು ಮತ್ತೆ ಮಾಡಿದರಾಯಿತೆಂದು ಮುಂದೂಡುತ್ತೇವೆ. ನಿದ್ದೆ ಕಡಿಮೆ ಮಾಡುವುದರಿಂದಲೂ ಕ್ರಿಯಾಶೀಲತೆ ಕಡಿಮೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸದಾ ಒತ್ತಡದಲ್ಲಿರುವುದರಿಂದ ಎಂಟು ಗಂಟೆ ನಿದ್ದೆ ಮಾಡಿದರೂ ನಿದ್ದೆ ಸಾಕಾಗಿಲ್ಲವೆಂದುಕೊಳ್ಳುತ್ತೇವೆ. ಸುಸ್ತು ಕಾಡುತ್ತದೆ. ಇದಕ್ಕೆ ಕಾರಣ ನಿದ್ದೆಯಲ್ಲೂ ನಮ್ಮ ಮೆದುಳು ಟೆನ್ಷನ್ ಗೆ ಒಳಗಾಗಿರುತ್ತದೆ. ಅದಕ್ಕೆ ರಾತ್ರಿ ನಿದ್ದೆ ಮಾಡಿದರೂ ಹಗಲು ನಿದ್ದೆ ಮಾಡಬೇಕೆನಿಸುತ್ತದೆ. ಒತ್ತಡದಿಂದ ಮುಕ್ತವಾಗಿ ಒಂದಷ್ಟು ರಿಲ್ಯಾಕ್ಸ್ ಬಯಸುವವರು ತಜ್ಞರು ಹೇಳಿರುವ ಕೆಲವು ಸಲಹೆಗಳನ್ನು ಪಾಲಿಸಬಹುದು.
ಸಾಮಾನ್ಯವಾಗಿ ಒತ್ತಡ ಉಂಟು ಮಾಡುವ ಕಾರಣಗಳಲ್ಲಿ ಹೆಚ್ಚಿನವು ಜೀವನ ಶೈಲಿಗೆ ಸಂಬಂಧಿಸಿದ್ದಾಗಿದೆ. ನಾವು ಮಾಡುವ ಕೆಲಸದಲ್ಲಿ ನಮಗೆ ಆನಂದ ಸಿಗುತ್ತಿದೆಯೇ ಎಂದು ಯೋಚಿಸಬೇಕು. ಏಕೆಂದರೆ ಕೆಲವೊಮ್ಮೆ ಇಷ್ಟವಿಲ್ಲದಿದ್ದರೂ ಅನಿವಾರ್ಯ ಪರಿಸ್ಥಿತಿಯಿಂದ ಮಾಡಲೇ ಬೇಕಾಗುತ್ತದೆ. ಮೊದಲು ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು. ಇದರಿಂದ ಮಾಡುವ ಕೆಲಸದಲ್ಲಿ ಸ್ವಲ್ಪ ಆನಂದ ಸಿಕ್ಕಿದರೂ ಅದು ಸಾಕಷ್ಟು ಒತ್ತಡವನ್ನು ಕಡಿಮೆ ಮಾಡುತ್ತದೆ. ನಮಗೆಂದೇ ಒಂದಷ್ಟು ಸಮಯವನ್ನು ಕಾಯ್ದಿರಿಸಿಕೊಳೋಣ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಯೋಚಿಸೋಣ ಆಗ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಏನಾದರೊಂದು ಪರಿಹಾರ ಸಿಕ್ಕೇ ಸಿಗುತ್ತದೆ.
ಕೆಲವು ಸಮಸ್ಯೆಗಳಿಗೆ ಗೆಳೆಯ ಗೆಳತಿಯರೊಂದಿಗೆ ಹೇಳಿಕೊಳ್ಳುವ ಮೂಲಕ ಅವರಿಂದಲೂ ಸಲಹೆ ಪಡೆಯಬಹುದು. ಚರ್ಚಿಸುವಾಗ, ಮಾತನಾಡುವಾಗ ತೀರಾ ಖಾಸಗಿ ವಿಚಾರಗಳು ನಮ್ಮ ಬಳಿಯೇ ಇರಲಿ. ಕೆಲವೊಮ್ಮೆ ಬೇರೆಯವರೊಂದಿಗೆ ಬೆರೆತು ಒಂದಷ್ಟು ಆನಂದವಾಗಿದ್ದರೆ ಮನಸ್ಸು ಉಲ್ಲಾಸದಿಂದ ಕೂಡಿ ಒತ್ತಡ ಕಡಿಮೆಯಾಗುತ್ತದೆ.
ಮಾತನಾಡುವಾಗ ಎಚ್ಚರವಿರಬೇಕು ಮತ್ತೊಬ್ಬರ ಬಗ್ಗೆ ಏನೇನೋ ಮಾತನಾಡಿ ಮನನೋಯಿಸುವ ಅಥವಾ ವಿವಾದಕ್ಕೆ ಗುರಿಯಾಗದಂತೆ ನೋಡಿಕೊಳ್ಳುವ ಜಾಣ್ಮೆ ನಮ್ಮಲಿರಬೇಕು. ಎಲ್ಲರೊಂದಿಗೆ ಹೊಂದಿಕೊಂಡು ಬೆರೆಯುವ ಮನೋಭಾವ ಬೆಳೆಸಿಕೊಳ್ಳಬೇಕು. ಗಾಳಿ ಸುದ್ದಿಯನ್ನು ನಿಜವೆಂಬಂತೆ ಮಾತನಾಡುವುದನ್ನು ಬಿಟ್ಟು ಬಿಡಬೇಕು.
ದುಡಿಮೆಯ ನಡುವೆಯೂ ಒಂದು ದಿನ ವಿಶ್ರಾಂತಿಗೆ ಮೀಸಲಿರಲಿ. ಮನಸ್ಸಿಗೆ ಸಂತೋಷ ನೀಡುವ ಇತರರಿಗೂ ಉಪಯೋಗವಾಗುವ ಹವ್ಯಾಸ ಬೆಳೆಸಿಕೊಳ್ಳೋಣ. ಸಾಹಿತ್ಯ, ಕ್ರೀಡೆ ಮೊದಲಾದವುಗಳತ್ತ ಆಸಕ್ತಿ ವಹಿಸೋಣ. ಕೆಲವು ಬಾರಿ ಮಲಗಿದರೂ ನಿದ್ದೆ ಬರಲ್ಲ. ನಿದ್ದೆಗೆ ಮುನ್ನ ಸ್ನಾನ ಮಾಡಿ ನಂತರ ಮಲಗಿದರೆ ಮೈಮನಸ್ಸು ಹಗುರವಾಗಿ ನಿದ್ದೆ ಬರುತ್ತದೆ.
ಅವತ್ತಿನ ಕೆಲಸವನ್ನು ಅವತ್ತೆ ಮಾಡಿದರೆ ಒಳ್ಳೆಯದು. ಮುಂದೂಡಿದರೆ ಎಲ್ಲವನ್ನೂ ಒಟ್ಟಿಗೆ ಮುಗಿಸಬೇಕಾದ ಅನಿವಾರ್ಯತೆಯಿಂದ ಒತ್ತಡ ಹೆಚ್ಚಾಗುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಅದಕ್ಕೊಂದು ಪೂರ್ವಭಾವಿ ಸಿದ್ಧತೆಯಿದ್ದು ಅವರಂತೆ ಮಾಡಿದರೆ ಒಳ್ಳೆಯಾಗುತ್ತದೆ. ಒಂದೇ ಕಡೆ ಕುಳಿತು ಟಿವಿ ನೋಡುವುದನ್ನು ಕಡಿಮೆ ಮಾಡಿ. ಬದಲಿಗೆ ಪುಸ್ತಕ, ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡರೆ ಉತ್ತಮ.
ಮೋಜು ಮಸ್ತಿ, ಪಾರ್ಟಿಗಳಿಂದ ದೂರವಿದ್ದರೆ ಉತ್ತಮ. ಮದ್ಯ, ಧೂಮಪಾನ, ತಂಬಾಕು ಸೇವನೆಯಂತಹ ದುಶ್ಚಟಗಳು ತಕ್ಷಣಕ್ಕೆ ರಿಲ್ಯಾಕ್ಸ್ ನೀಡಿದರೂ ಅವುಗಳಿಂದ ದೂರವಿದ್ದು ಉತ್ತಮ ಆರೋಗ್ಯದತ್ತ ಗಮನಹರಿಸಬೇಕು. ಆಗ ಮಾತ್ರ ಆರೋಗ್ಯವಂತ ಬದುಕು ಕಂಡುಕೊಳ್ಳಲು ಸಾಧ್ಯ.