News Kannada
Sunday, August 14 2022

ಆರೋಗ್ಯ

ನಮ್ಮ ಸ್ವಭಾವ ಹೇಗಿದ್ದರೆ ಚೆಂದ? - 1 min read

ನಮ್ಮ ಸ್ವಭಾವ ಹೇಗಿದ್ದರೆ ಚೆಂದ?

ನಾವ್ಯಾರು ಕೂಡ ತಕ್ಷಣಕ್ಕೆ ಒಬ್ಬರನ್ನು ಮೆಚ್ಚಿಕೊಳ್ಳುವುದಿಲ್ಲ. ಗೆಳೆತನ ಬೆಳೆಸುವುದಿಲ್ಲ. ಅವರ ಜೊತೆಗೆ ಒಡನಾಟ ಬೆಳೆದ ನಂತರ ಅವರ ಗುಣ ನಡತೆ, ಸ್ವಭಾವ ನೋಡಿ ಅದು ಇಷ್ಟವಾದರೆ ಮಾತ್ರ ಮುಂದುವರೆಯುತ್ತೇವೆ.

ಬೇರೆ ಯಾರಿಗೋ ಇಷ್ಟವಾದವರೆಲ್ಲ ನಮಗೆ ಇಷ್ಟವಾಗಬೇಕೆಂದೇನೂ ಇಲ್ಲ. ನಾವೆಲ್ಲರೂ ಅಷ್ಟೆ ಒಬ್ಬ ವ್ಯಕ್ತಿಯನ್ನು ಆತನ ಸ್ವಭಾವದಿಂದಲೇ ಒಳ್ಳೆಯವನೋ ಅಥವಾ ಕೆಟ್ಟವನೋ ಎಂಬುದನ್ನು ಸುಲಭವಾಗಿ ಅಳೆದು ಬಿಡುತ್ತೇವೆ. ಒಬ್ಬನ ಸ್ವಭಾವ ಮತ್ತೊಬ್ಬನಿಗೆ ಇಷ್ಟವಾಗಬಹುದು ಅಥವಾ ಇಷ್ಟವಾಗದಿರಲೂಬಹುದು. ಇಷ್ಟಕ್ಕೂ ಮನುಷ್ಯನ ಸ್ವಭಾವ ಸತ್ವ, ರಜ, ತಮ ಎಂಬ ಮೂರು ಗುಣಗಳಿಂದ ಉಂಟಾಗಿದ್ದು ಇದರಲ್ಲಿ ಯಾವುದೇ ಒಂದು ಅಥವಾ ಎರಡು ಗುಣಗಳ ಪ್ರಾಧಾನ್ಯದಿಂದ ಒಬ್ಬ ವ್ಯಕ್ತಿಯ ಸ್ವಭಾವ ಹೊರಕ್ಕೆ ಗೋಚರಿಸುತ್ತಿರುತ್ತದೆ.

ಆಧ್ಯಾತ್ಮಿಕ ಚಿಂತಕರು ಮನುಷ್ಯರ ಸ್ವಭಾವದ ಹಿಂದಿರುವ ಮೂರು ಗುಣಗಳ ಬಗ್ಗೆ ಮನದಟ್ಟಾಗುವ ಹಾಗೆ ವಿವರಿಸಿದ್ದಾರೆ. ಅವರ ಪ್ರಕಾರ ಕ್ರಿಯಾತ್ಮಕವಾದ ವಿಕ್ಷೇಪ ಶಕ್ತಿಯು ರಜೋಗುಣಕ್ಕೆ ಸಂಬಂಧಪಟ್ಟಿದ್ದೆಂದೂ ಇದರಿಂದ ಪುರಾತನವಾದ ಪ್ರವೃತ್ತಿಗಳು ಹರಡಿಕೊಂಡಿವೆಯಂತೆ.  ಮನಸ್ಸಿಗೆ ಸೇರಿದ ರಾಗ ಹಾಗೂ ದುಃಖಾದಿಗಳೂ ಈ ವಿಕ್ಷೇಪ ಶಕ್ತಿಯಿಂದಲೇ ಸದಾ ಉಂಟಾಗುತ್ತಿರುತ್ತವೆ ಎನ್ನಲಾಗಿದೆ. ಕಾಮ, ಕ್ರೋಧ, ಲೋಭ, ಅಸೂಯೆ, ಅಹಂಕಾರ, ಈರ್ಷ್ಯೆ ಇತ್ಯಾದಿ ಯಾವ ಪುರುಷ ಪ್ರವೃತ್ತಿಯಿಂದ ಉಂಟಾಗಿರುವುದೋ ಅದು ರಜೋಗುಣಕ್ಕೆ  ಸಂಬಂಧಪಟ್ಟದ್ದಾಗಿದ್ದು ಆದುದರಿಂದ ಈ ರಜೋ ಗುಣವು ಬಂಧನಕ್ಕೆ ಕಾರಣವಾಗಿದೆಯಂತೆ.

ತಮೋಗುಣದ ಆವೃತ್ತಿ ಎಂಬ ಶಕ್ತಿಯು ಇದೇ ಮನುಷ್ಯನ ಸಂಸಾರಕ್ಕೂ ಮತ್ತು ವಿಕ್ಷೇಪ ಶಕ್ತಿಯ ಕಾರ್ಯೋನ್ಮುಖಕ್ಕೂ ಕಾರಣವಾಗಿದೆ. ವಸ್ತುವಿನ ಸ್ವರೂಪವನ್ನು ಸರಿಯಾಗಿ ತಿಳಿಯದಿರುವುದು (ಅಭಾವನೆ) ವಸ್ತುವು ಇರುವುದೇ ಒಂದಾದರೆ ಅದನ್ನು ಬೇರೊಂದಾಗಿ ಅರಿಯುವುದು (ವಿಪರೀತ ಭಾವನೆ) ಅವಸ್ತುವು ಆ ವಿಧವಾಗಿ ಇಲ್ಲವೆಂಬ  ಭಾವನೆಯನ್ನು ತಾಳುವುದು (ಅಸಂಭಾವನೆ) ಮತ್ತು ಸಂದೇಹಗಳ ಸಂಬಂಧದಿಂದ ಕೂಡಿರುವ ಮನುಷ್ಯನನ್ನು ವಿಕ್ಷೇಪ ಶಕ್ತಿಯು ನಿರಂತರವಾಗಿ ಬಾಧಿಸುತ್ತದೆ.

ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದುದು. ಆದರೂ ರಜಸ್ತಮೋ ಗುಣಗಳ ಸಂಸರ್ಗದಿಂದ ಅದು ಸಂಸಾರಕ್ಕೆ ಕಾರಣವಾಗುತ್ತದೆ. ಆದರೆ ಸತ್ವ ಗುಣದಲ್ಲಿ ಆತ್ಮ ಸ್ವರೂಪವೂ ಪ್ರತಿಬಿಂಬಿಸಿ ಸೂರ್ಯನಂತೆ ಜಡ ಜಗತ್ತನ್ನು ಪ್ರಕಾಶಪಡಿಸುತ್ತದೆ. ಅಮಾನ್ವಿತವೇ, ಯಮ ನಿಯಮಗಳೇ ಮೊದಲಾದವುಗಳು ಶ್ರದ್ಧೆ, ಭಕ್ತಿ ಮುಮುಕ್ಷುತ್ವ, ದೈವಿ ಸಂಪತ್ತು ಹಾಗೂ ಅಸುರ ಸಂಪತ್ತಿನ ತ್ಯಾಗ ಇವು ಮಿಶ್ರ ಸತ್ವದ ಲಕ್ಷಣಗಳು, ಪ್ರಸನ್ನತೆ, ಆತ್ಮಾನುಭವ, ಪರಮಶಾಂತಿ, ತೃಪ್ತಿ ಆಹ್ಲಾದ, ಯಾವಾಗಲೂ ಆನಂದವನ್ನು ಹೊಂದಿಸುವ ಪರಮಾತ್ಮ ನಿಷ್ಠೆ ಇವು ವಿಶುದ್ಧ ಸತ್ವದ  ಲಕ್ಷಣಗಳಾಗಿವೆ.

ಯಾವ ಮನಸ್ಸು ರಜೋಗುಣ ಹಾಗೂ ತಮೋಗುಣಗಳ ಪ್ರಾಬಲ್ಯಕ್ಕೆ ವಶವಾಗಿದೆಯೋ ಅದು ರಜೋಗುಣದ ವಿಕ್ಷೇಪ ಶಕ್ತಿಯ ಮತ್ತು ತಮೋಗುಣದ ಅಚ್ಚಾದನ ಶಕ್ತಿಯ ಪರಿಣಾಮವಾಗಿ ಯಾವುದೇ ಬಗೆಯ ನಿಯಂತ್ರಣಕ್ಕೆ ಒಳಗಾಗುವುದು ಕಷ್ಟವೇ ಎನ್ನಬೇಕು. ಆದುದರಿಂದ ಸತ್ವ ಗುಣ (ಒಳ್ಳೆಯ ಗುಣ) ಪ್ರಧಾನವಾಗುವಂತೆ ನಮ್ಮ ಮನಃ ಪ್ರಕೃತಿಯೊಳಗಣ ಗುಣಗಳ ಸಮತೋಲನವನ್ನು ನಾವು ಮಾಡಿಕೊಳ್ಳಬೇಕು.

See also  ಬದುಕಿನ ಸುತ್ತ ಸುತ್ತಿಕೊಳ್ಳುತ್ತಿರುವ ಕೃತಕತೆ..!

ಹಾಗೆ ನೋಡಿದರೆ ಮನುಷ್ಯ ಸ್ವಭಾವದ ಹಿಂದಿನ ಮೂರು ಗುಣಗಳಾದ ಸತ್ವ, ರಜ ತಮ ಇವುಗಳಲ್ಲಿ ಮೊದಲನೆಯದು ಅಂದರೆ ಸತ್ವ, ರಜ ತಮ ಇವುಗಳಲ್ಲಿ ಮೊದಲನೆಯದು ಅಂದರೆ ಸತ್ವ ಇದು ಪರಿಶುದ್ಧತೆ, ದೀಪ್ತಿ ಮತ್ತು ಆನಂದಕ್ಕೆ, ಎರಡನೆಯದಾದ ರಜ ದುಃಖದಾಯಕವಾದ ಕ್ಷಣಿಕ ಸುಖಗಳಿಗೆ, ಮೊದಲನೆಯದು ತಮ್ಮ ಜ್ಞಾನ ಹಾಗೂ ವಿಶೇಷವಾದ ಬಂಧನಕ್ಕೆ ಎಳೆಯುವಂತದಾಗಿವೆ ಎನ್ನಲಾಗಿದೆ. ಯಾವುದನ್ನು ಜ್ಞಾನಿಗಳು ಹೊಗಳುತ್ತಾರೆಯೋ ಅವು ಸಾತ್ವಿಕವೆಂದೂ, ಯಾವುದನ್ನು ತೆಗೆಳುತ್ತಾರೆಯೋ ಅವು ತಾಮಸಿಕ, ಯಾವುದರ ಬಗ್ಗೆ ಉದಾಸೀನರಾಗುತ್ತಾರೆನೋ ಅವು ರಾಜಸಿಕವಾಗಿವೆ.

ಶಂಕರಾಚಾರ್ಯರ ಪ್ರಕಾರ ತಮೋಗುಣವು ಸತ್ವ ರಜಸ್ಸುಗಳಿಮದಲೂ, ರಜೋ ಗುಣವು ಸತ್ವ ಗುಣದಿಂದಲೂ ನಾಶ ಹೊಂದುತ್ತದೆ. ಆದ ಕಾರಣ ಶುದ್ಧ ಸತ್ವವನ್ನು ಅವಲಂಬಿಸಿಕೊಂಡು ನಿನ್ನಲ್ಲಿ ಉಂಟಾಗಿರುವ ಅಭ್ಯಾಸವನ್ನು (ಅನಾತ್ಮವಾದ ದೇಹೇಂದ್ರಿಯಗಳೇ, ನಾನು ನನ್ನದು ಎಂಬ ಭಾವನೆಯನು) ಹೋಗಲಾಡಿಸಿಕೋ… ನಾವು ಸದಾ ಜ್ಞಾಪಕದಲ್ಲಿರಿಸಿಕೊಳ್ಳಬೇಕಾದ ವಿಷಯವೇನೆಂದರೆ; ಎಲ್ಲಿಯವರೆಗೆ ನಮ್ಮ ಸ್ವಭಾವದಲ್ಲಿ ರಜಸ್ಸು ಮತ್ತು ತಮಸ್ಸುಗಳು ಆಧಿಪತ್ಯವನ್ನು ಸ್ಥಾಪಿಸಿರುತ್ತವೋ ಅಲ್ಲಿಯವರೆಗೆ ನಾವು ಎಷ್ಟೇ ಪ್ರಯತ್ನಪಟ್ಟರೂ ಸಮಾಜದಲ್ಲಿ ಒಳ್ಳೆಯವರಾಗಿ ಗುರುತಿಸಿಕೊಳ್ಳುವುದು ದುಸ್ತರವೇ.

ನಾವು ಮತ್ತೊಬ್ಬರಿಗೆ ಇಷ್ಟವಾಗಿ ಬದುಕಲು ಅಲ್ಲದಿದ್ದರೂ ನಮಗಾಗಿಯಾದರೂ ನಮ್ಮ ಸ್ವಭಾವದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಿದೆ. ಆರೋಗ್ಯವಂತರಾಗಿ ಬದುಕುವುದರಲ್ಲಿ ಇದು ಕೂಡ ಮುಖ್ಯವೇ..

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು