ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 1ರಿಂದ 7ರವರೆಗೆ ಆಚರಿಸಲಾಗುತ್ತಿದೆ. ಆ ಮೂಲಕ ಸ್ತನ್ಯಪಾನದ ಬಗೆಗೆ ಅರಿವು ಮೂಡಿಸಲಾಗುತ್ತಿದೆ. ಹಿಂದಿನಿಂದಲೂ ತಾಯಿಯ ಹಾಲೇ ಮಗುವಿಗೆ ಸರ್ವೋತ್ತಮ ಅಂಥ ಹೇಳುತ್ತಲೇ ಬಂದಿದ್ದೇವೆ. ಆದರೂ ಹಲವು ಕಾರಣಗಳಿಗೆ ಮತ್ತು ಮಕ್ಕಳ ತಾಯಂದಿರಲ್ಲಿರುವ ತಪ್ಪು ಕಲ್ಪನೆಗಳಿಂದಾಗಿ ಮಗುವಿಗೆ ಹಾಲು ನೀಡದೆ ಬಹುಬೇಗ ಹಾಲು ಮರೆಸುವುದು ನಡೆಯುತ್ತಲೇ ಬರುತ್ತಿದೆ.
ಇಷ್ಟಕ್ಕೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ಉಣಿಸಬೇಕು ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ತಿಳಿಯುವ ಅಗತ್ಯತೆಯೂ ಬಂದೊದಗಿದೆ. ಮಗುವಿಗೆ ಹಾಲುಣಿಸಿ ಎಂದು ಜಾಹೀರಾತು, ಪ್ರಕಟಣೆ, ಶಿಬಿರಗಳ ಮೂಲಕ ಹೇಳಿಕೊಡಬೇಕಾದ ಪರಿಸ್ಥಿತಿಗೆ ನಾವು ಬಂದು ನಿಂತಿದ್ದೇವೆ. ಆಧುನಿಕತೆಯ ಭರದಲ್ಲಿ ತಮಗೆ ಗೊತ್ತಿಲ್ಲದ ವಿಚಾರಗಳ ಬಗೆಗಿನ ತಪ್ಪು ಕಲ್ಪನೆಗಳಿಂದಾಗಿ ಪೋಷಕಾಂಶಯುಕ್ತ ಹಾಲನ್ನು ಸೇವಿಸಬೇಕಾದ ಮಕ್ಕಳು ಅದರರಿಂದ ವಂಚಿತರಾಗಿ ಆರೋಗ್ಯ ಕುಂಠಿತಗೊಂಡು ಸಾವಿನಂಚಿಗೆ ತಲುಪುತ್ತಿವೆ. ಹೀಗಾಗಿ ಹಾಲುಣಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ವಿಶ್ವದಾದ್ಯಂತ ಮಾಡಲಾಗುತ್ತಿದೆ.
ವೈದ್ಯಲೋಕದಲ್ಲಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಪೋಷಣೆಯ ಪ್ರಾಥಮಿಕ ಮೂಲವಾಗಿರುವುದರಿಂದ ಹಾಲುಣಿಸುವುದನ್ನು ಮಗುವಿನ ಜೀವನದ ಆರಂಭದ ಅವಧಿ ಎಂದೇ ಹೇಳಲಾಗುತ್ತದೆ.ಏಕೆಂದರೆ ಎದೆಹಾಲು ಮಗುವಿಗೆ ಸುರಕ್ಷಿತ, ಪೋಷಣೆ ಮತ್ತು ಆರೋಗ್ಯದ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದೊಂದು ರೀತಿಯ ನೈಸರ್ಗಿಕ ಆಹಾರವಾಗಿರುವುದರಿಂದ ಮಗುವಿಗೆ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರ ಪ್ರಕಾರ ಮಗುಹುಟ್ಟಿದ ಅರ್ಧ ಗಂಟೆಯೊಳಗೆ ಹಾಲುಕುಡಿಸಬೇಕು. ಒಂದು ವೇಳೆ ಸಿಸೇರಿಯನ್ ಮೂಲಕ ಮಗುಹುಟ್ಟಿದ್ದರೆ ನಾಲ್ಕು ಗಂಟೆ ಅವಧಿಯಲ್ಲಿ ಹಾಲುಣಿಸಬೇಕಂತೆ. ಜೇನುತುಪ್ಪ, ಗ್ಲೂಕೋಸ್, ಸಕ್ಕರೆ ಬೆರೆಸಿದ ನೀರು ನೀಡುವುದನ್ನು ತಪ್ಪಿಸಿ ಹಾಲನ್ನು ನೀಡಬೇಕು.
ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲು ರೋಗನಿರೋಧಕವಾಗಿರುತ್ತದೆ ಮತ್ತು ಇದರಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆ್ಯಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ. ಹೀಗಾಗಿ ಇದನ್ನು COLOSTRUM ಎಂದು ಕರೆಯಲಾಗುತ್ತದೆ. ಇದರಲ್ಲಿ ವಿರೇಚಕ (Laxative) ಗುಣವಿರುವುದರಿಂದ ಮಗುವಿನ ಆರೋಗ್ಯದ ದೃಷ್ಠಿಯಿಂದ ಸರ್ವೋತ್ತಮವಾಗಿರುತ್ತದೆ. ಆದ್ದರಿಂದ ತಪ್ಪದೆ ನೀಡಬೇಕಾಗುತ್ತದೆ.
ಮಗುವಿಗೆ ಆರು ತಿಂಗಳು ತುಂಬುವವರೆಗೂ ವಿಟಮಿನ್, ಖನಿಜಾಂಶ ಅಥವಾ ಔಷಧಿಗಳಂತಹ ಡ್ರಾಪ್ಗಳನ್ನು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಘನ ಅಥವಾ ದ್ರವ ರೂಪದ ಪದಾರ್ಥಗಳನ್ನು ನೀಡಬಾರದು. ಏಕೆಂದರೆ ಈ ರೀತಿಯ ಆಹಾರವನ್ನು ನೀಡುವುದರಿಂದ ಮಗು ಹಾಲು ಸೇವನೆಯನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಣಾಮ ಮಗುವಿನ ಆರೋಗ್ಯ ಕುಂಠಿತವಾಗಿ ಬಿಡುತ್ತದೆ.
ಮಗುವಿಗೆ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಆಗಾಗ್ಗೆ ಹಾಲುಣಿಸಬೇಕು. ಇದನ್ನು ವೈದ್ಯರು ಬೇಡಿಕೆಯ ಸ್ತನ್ಯಪಾನ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಮಗುವಿಗೆ ಹಾಲಿನ ಅವಶ್ಯಕತೆಯಿರುತ್ತದೆ. ಹಾಗಾಗಿ ಮಗುವಿನ ಬೇಡಿಕೆಯನ್ನು ಅರಿತುಕೊಂಡು ಹಾಲನ್ನು ನೀಡಬೇಕಾಗುತ್ತದೆ. ತಾಯಂದಿರು ಹೆಚ್ಚಿನ ಸಮಯದವರೆಗೆ ಹಾಲುಣಿಸುವುದರಿಂದ ಉತ್ತಮ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ. ಮಗುವಿಗೆ ಆರು ತಿಂಗಳ ಕಾಲ ಕಡ್ಡಾಯವಾಗಿ ಹಾಲನ್ನು ಮಾತ್ರ ನೀಡಬೇಕು. ಆ ನಂತರ ವೈದ್ಯರ ಸಲಹೆ ಪಡೆದು ಪೂರಕ ಆಹಾರಗಳನ್ನು ನೀಡಲು ಶುರುಮಾಡಬಹುದು. ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಲು ಅಡ್ಡಿಯಿಲ್ಲ.
ವೈದ್ಯರ ಪ್ರಕಾರ ಮಗು ಆಗಾಗ ಹಾಲನ್ನು ಹೀರಿಕೊಳ್ಳುವುದು, ಸ್ತನದಲ್ಲಿ ಹಾಲು ಸಂಪೂರ್ಣ ಖಾಲಿಯಾದ ಅನುಭವ ಇದೆಲ್ಲವೂ ಯಶಸ್ವಿ ಹಾಲುಣಿಸುವಿಕೆಯ ಅಂಶಗಳಂತೆ. ಇನ್ನು ಅನಾರೋಗ್ಯದಿಂದ ಬಳಲುವ ಅಥವಾ ಔಷಧಿ ಸೇವಿಸುವ ತಾಯಂದಿರು ವೈದ್ಯರು ಹಾಲು ನೀಡಬಾರದು ಎಂದು ಹೇಳುವ ತನಕ ಹಾಲುಣಿಸುವುದನ್ನು ನಿಲ್ಲಿಸಬಾರದು. ಒಂದು ವೇಳೆ ತಾತ್ಕಾಲಿಕವಾಗಿ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಮತ್ತೆ ವೈದ್ಯರ ಸಲಹೆ ಮೇರೆಗೆ ಹಾಲುಣಿಸುವುದನ್ನು ಮುಂದುವರೆಸಬಹುದು. ಎದೆಹಾಲು ಕುಡಿಸುವುದರಿಂದ ಮಗುವಿನ ಮೆದಳಿನ ಬೆಳವಣಿಗೆ ಮತ್ತು ದೀರ್ಘಾವಧಿಯ ಆರೋಗ್ಯ ಹೊಂದಲು ಸಹಾಯವಾಗುತ್ತದೆ. ಜತೆಗೆ ಸೋಂಕು ತಗಲುವ ಅಪಾಯ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲದೆ ತಾಯಿಯಂದಿರ ಗರ್ಭಕೋಶದ ಪ್ರತ್ಯಾಕರ್ಷಣೆಗೂ ಸಹಕಾರಿಯಾಗುತ್ತದೆ.
ಇದೆಲ್ಲದಕ್ಕಿಂತ ಹೆಚ್ಚಾಗಿ ಕೃತಕ ಹಾಲುಣಿಸುವಿಕೆಗೆ ಗುಡ್ಬೈ ಹೇಳಿ ಮಗುವಿಗೆ ಎದೆಹಾಲುಣಿಸಿ. ಇದರಿಂದ ತಾಯಿ ಮಗುವಿನ ಸಂಪರ್ಕ ಮತ್ತು ಬಾಂಧವ್ಯ ವೃದ್ಧಿಯಾಗುತ್ತದೆ ಎಂಬುದನ್ನು ಮಾತ್ರ ಮರೆಯದಿರಿ.