ಸಾವು ಕ್ರೂರ ಪ್ರಾಣಿಗಳಿಂದ ಮಾತ್ರ ಬರುತ್ತದೆ. ಹೀಗಾಗಿಯೇ ಆನೆ, ಹುಲಿ, ಚಿರತೆಗಳಿಂದ ನಾವು ದೂರ ಇರುತ್ತಿದ್ದೆವು. ಈಗ ಹಾಗಿಲ್ಲ ಸೊಳ್ಳೆಗೆ ಹೆದರಬೇಕಾದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಹೆಚ್ಚುತ್ತಿರುವ ಡೆಂಗ್ಯೂ ಜ್ವರವನ್ನು ಗಮನಿಸಿದರೆ ಆತಂಕವಾಗುತ್ತದೆ. ಅಯ್ಯೋ ಸೊಳ್ಳೆನಾ ಎಂದು ಲಘುವಾಗಿ ಮಾತಾಡುತ್ತಿದ್ದವರು ಅದು ತರುವ ರೋಗಕ್ಕೆ ಹೆದರುವಂತಾಗಿದೆ.
ಒಂದು ಸೊಳ್ಳೆ ನಮ್ಮ ಪ್ರಾಣವನ್ನೇ ತೆಗೆಯುವ ಸ್ಥಿತಿಗೆ ಬಂದು ತಲುಪಿರುವಾಗ ನಾವು ಎಚ್ಚೆತ್ತುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಮಾನಸಿಕವಾಗಿ ನಾವು ಒಂದಿಷ್ಟು ಆರೋಗ್ಯವಾಗಿರ ಬೇಕಾದರೆ ನಾವು ವಾಸಿಸುವ ಮನೆ, ಕೆಲಸವಾಡುವ ಕಚೇರಿ, ಬೆರೆಯುವ ಜನ ಎಲ್ಲ ಕಡೆಯೂ ಆರೋಗ್ಯಕರ ವಾತಾವರಣ ಇರಬೇಕು ಆಗ ಮಾತ್ರ ನಾವು ಸಂತೋಷವಾಗಿರಲು ಸಾಧ್ಯವಾಗುತ್ತದೆ.
ದುರ್ಜನರ ಸಂಗ ಬಿಡು, ಸಜ್ಜನರ ಸಹವಾಸ ಮಾಡು ಹೀಗೊಂದು ಹಿತೋಕ್ತಿಯಿದೆ. ಇದು ಎಷ್ಟೊಂದು ಮಹತ್ವ ಪಡೆದಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ನಾವು ಸಜ್ಜನರ ಸಂಗದಿಂದ ಪಡೆದದ್ದು, ದುರ್ಜನರಿಂದ ಕಳೆದುಕೊಂಡಿದ್ದು ಒಂದು ಕ್ಷಣ ಯೋಚಿಸಿದಾಗ ಗೊತ್ತಾಗಿ ಬಿಡುತ್ತದೆ. ಕೆಲವೊಮ್ಮೆ ತಿಳಿದೋ ತಿಳಿಯದೆಯೋ ದುರ್ಜನರ ಸಹವಾಸ ಮಾಡಿರುತ್ತೇವೆ. ಅವರೊಂದಿಗೆ ಸೇರಿ ದುಶ್ಚಟಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ರೋಗಗ್ರಸ್ತರಾಗಿ, ನಾವು ಹಾಳಾಗಿದ್ದಲ್ಲದೆ, ನಮ್ಮದೇ ಕುಟುಂಬದ ಆರೋಗ್ಯವನ್ನು ಹಾಳು ಮಾಡಿಬಿಡುತ್ತೇವೆ.
ಕುಟುಂಬ ವ್ಯವಸ್ಥೆಯಲ್ಲಿ ಮನುಷ್ಯ ಬದುಕುತ್ತಿರುವುದರಿಂದ ಕುಟುಂಬದ ಒಬ್ಬ ಸದಸ್ಯನಿಗೆ ಕಾಯಿಲೆ ಬಂದರೂ ಅದರ ಪರಿಣಾಮ ಇತರರ ಮೇಲೆಯೂ ಬೀರುತ್ತದೆ. ಹೀಗಿರುವಾಗ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಕುಟುಂಬದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕಾದರೆ ದುಶ್ಚಟಗಳನ್ನು ತೊರೆಯುವುದು ಮಾತ್ರವಲ್ಲದೆ, ದುಷ್ಟರ ಸಂಘ ತೊರೆಯುವುದು ಕೂಡ ಅಷ್ಟೇ ಒಳ್ಳೆಯದು.
ಕೆಟ್ಟವರ ಸಹವಾಸದಲ್ಲಿದ್ದವರು ಪರಿಶುದ್ಧರಾಗಿರಲು ಸಾಧ್ಯವಿಲ್ಲ. ದಾನ ಶೂರ ಕರ್ಣನೇ ದುರ್ಜನರ ಸಹವಾಸದಿಂದ ಹಾಳಾದನು. ದೈಹಿಕ ಬಲ ಮತ್ತು ಬುದ್ದಿಬಲ ಇದ್ದರೂ ಏನು ಪ್ರಯೋಜನವಾಯಿತು? ದುರ್ಯೋದನ, ದುಶ್ಯಾಸನ, ಶಕುನಿಯರ ಸಹವಾಸದಲ್ಲಿ ಬೆರೆತು ದುಷ್ಟ ಚತುಷ್ಟಯ ಎಂದು ಕುಖ್ಯಾತಿ ಪಡೆದನು. ದುಷ್ಟರ ಸಹವಾಸದಿಂದ ಸಜ್ಜನರು ಹೇಗೆ ಹಾಳಾಗುತ್ತಾರೆ ಎಂಬುದಕ್ಕೆ ಕರ್ಣ ಒಳ್ಳೆಯ ಉದಾಹರಣೆಯಾಗುತ್ತಾನೆ. ದುಷ್ಟರ ಸಂಗದಿಂದ ಸಜ್ಜನರ ಮೇಲೆ ಪರಿಣಾಮ ಬೀರುತ್ತದೆ. ಅವರ ಸಂಗದಿಂದಾಗಿ ಸದ್ಗುಣಗಳು ನಾಶವಾಗಿ ದುರ್ಗುಣಗಳು ಹುಟ್ಟುತ್ತವೆ. ಅದು ವ್ಯಕ್ತಿಯ ಆರೋಗ್ಯವನ್ನು ಕೆಡಿಸುವುದಲ್ಲಿ ಕುಟುಂಬದ ನೆಮ್ಮದಿಯನ್ನು ಕಿತ್ತುಬಿಡುತ್ತದೆ.
ಸರ್ಪ ಒಮ್ಮೆ ಕಚ್ಚಿ ತೃಪ್ತಿಪಟ್ಟುಕೊಳ್ಳುತ್ತದೆ. ಆದರೆ ದುರ್ಜನರು ಆಹೋರಾತ್ರಿ ಮಾತು ಕೃತಿಯಿಂದ ಚುಚ್ಚಿ ನೋವು ನೀಡುತ್ತಾರೆ. ವಿಶ್ರಾಂತಿಯಿಲ್ಲದೆ, ವಿರಾಮವಿಲ್ಲದೆ, ತೊಂದರೆ ನೀಡುತ್ತಾರೆ. ನಾವು ನೆಮ್ಮದಿಯಿಂದ ಬದುಕಬೇಕಾದರೆ ದುರ್ಜನರಿಂದ ದೂರ ಇರುವುದನ್ನು ಕಲಿಯಬೇಕು. ಭಜ ಸಾಧು ಸಮಾಗಮಂ ಅಂದರೆ ಸಜ್ಜನರ ಸಹವಾಸದಲಿರು ಎಂದರ್ಥ. ನಾವು ದುಷ್ಟರಿಂದ ದೂರವಿದ್ದರೆ ಸಾಲದು, ಸಜ್ಜನರ ಸಂಗ ಮಾಡಬೇಕು. ಸತ್ಸಂಗದಲ್ಲಿರಬೇಕು ಎಂದು ವೇದವ್ಯಾಸರು ಹೇಳಿದ್ದಾರೆ. ಪರೋಪಕಾರವೇ ಪುಣ್ಯ. ಪರಪೀಡನೆಯೇ ಪಾಪ ಎಂಬುದನ್ನು ಮರೆಯಬಾರದು.
ದುಷ್ಟ ಜನರ ಸಂಗವನ್ನು ತ್ಯಜಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ನಮ್ಮಲ್ಲಿ ಒಳ್ಳೆತನ ಬೆಳೆಸಿಕೊಳ್ಳುವುದು, ಜತೆಗೆ ಇಂದ್ರಿಯಗಳನ್ನು ಹಿತಮಿತವಾಗಿ ಬಳಸಿ ಜೀವನ ನರಕದೃಶ್ಯವಾಗದಂತೆ ನೋಡಿಕೊಳ್ಳಬೇಕು. ಬಾಹ್ಯದಿಂದ ದೃಷ್ಟಿಯನ್ನು ಕಿತ್ತು ಅಂತರ್ಮುಖ ಮಾಡಿಕೊಳ್ಳಬೇಕು. ಇದಕ್ಕಿಂತ ಮಿಗಿಲಾದ ಸಾಧನೆ ಬೇರೊಂದಿಲ್ಲ. ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ದೇಹಕ್ಕೆ ಬಾಧಿಸುವ ಕಾಯಿಲೆಗಳಿಗೆ ವೈದ್ಯರು ಔಷಧಿ ನೀಡಬಹುದು. ಆದರೆ ನಾವೇ ನಮ್ಮಿಂದಲೇ ತಂದುಕೊಳ್ಳುವ ಔಷಧಿ ನೀಡಲಾಗದೆ ಕಾಯಿಲೆಗಳಿಗೆ ನಾವೇ ಚಿಕಿತ್ಸೆ ಕಂಡುಕೊಳ್ಳಬೇಕು.
ದುಶ್ಚಟ, ದುಷ್ಟರ ಸಹವಾಸ ತ್ಯಜಿಸಿ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳುವುದರ ಮೂಲಕ ಬದುಕನ್ನು ಕಂಡು ಕೊಳ್ಳಬೇಕು. ಇದರಿಂದ ಕೇವಲ ನಮ್ಮ ಆರೋಗ್ಯ ಮಾತ್ರವಲ್ಲದೆ ಸಮಾಜದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.