ನಮ್ಮನ್ನು ಬಾಧಿಸುವ ಕೆಲವು ಕಾಯಿಲೆಗಳಿಗೆ ನೆಲ್ಲಿಕಾಯಿ ರಾಮಬಾಣವಾಗಿದೆ. ಹಿಂದಿನ ಕಾಲದಲ್ಲಿ ಇದರ ಮಹತ್ವ ಅರಿತ ಹಿರಿಯರು ಕಾಡಿನಲ್ಲಿ ಹೇರಳವಾಗಿ ಸಿಗುತ್ತಿದ್ದ ನೆಲ್ಲಿಕಾಯಿಯನ್ನು ತಂದು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಿದ್ದರು. ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.
ಇವತ್ತು ಕಾಡು ನಾಶವಾದ ಕಾರಣ ಬೆಟ್ಟದ ನೆಲ್ಲಿಕಾಯಿ ನಾಶವಾಗುತ್ತಿದೆಯಾದರೂ ಸುಧಾರಿತ ತಳಿಗಳು ಸಿಗುತ್ತಿವೆ. ಅವುಗಳನ್ನು ಬೆಳೆಸಿ ಲಾಭ ಪಡೆಯಬಹುದಾಗಿದೆ. ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಪಿತ್ತವನ್ನೂ ನಿಯಂತ್ರಿಸುತ್ತದೆ. ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಮಲಬದ್ಧತೆ, ಅಲ್ಸರ್, ಕರುಳಿನ ತೊಂದರೆಗೂ ರಾಮಬಾಣವಾಗಿದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದ್ದು, ದೃಷ್ಟಿಯನ್ನು ವೃದ್ಧಿಸುವ ಗುಣ ಹೊಂದಿದೆ.
ನೆಲ್ಲಿಕಾಯಿ ಕೀಳುವಾಗ ಅದು ನೆಲಕ್ಕೆ ಬಿದ್ದು ಹಾಳಾಗದಂತೆ ಸುತ್ತಲೂ ಬಲೆಯನ್ನು ಹರಡಿಕೊಂಡು ನೆಲ್ಲಿಕಾಯಿ ಕೆಡವಿ ನಂತರ ಶುದ್ಧವಾದ ನೀರಿನಲ್ಲಿ ಅದನ್ನು ತೊಳೆದು ಉತ್ತಮವಾದ ಆರಿಸಿದ ತಾಜಾವಾದ ಕಾಯಿಗಳನ್ನು ಯಂತ್ರದ ಮೂಲಕ ಪುಡಿ, ಜ್ಯೂಸ್, ಕ್ಯಾಂಡಿ, ಎಣ್ಣೆ ಹೀಗೆ ನಾಲ್ಕು ವಿಧದ ಉತ್ಪನ್ನಗಳನ್ನು ತಯಾರಿಸಬಹುದಾಗಿದೆ.
ನೆಲ್ಲಿಕಾಯಿಯ ಆಮ್ಲ ಜ್ಯೂಸ್ ರಸವನ್ನು ದಿನವೂ ಆಹಾರ ಕ್ರಮ ಮತ್ತು ವ್ಯಾಯಾಮದ ಜೊತೆಗೆ ನಿಯಮಿತವಾಗಿ ಸೇವಿಸುವುದರೊಂದಿಗೆ ಮಧುಮೇಹ (ಸಕ್ಕರೆ ಕಾಯಿಲೆ) ನಿಯಂತ್ರಣಕ್ಕೆ ಬರುತ್ತದೆ. ಇನ್ಸುಲಿನ ಮಟ್ಟವನ್ನು ನಿಯಮಿತಗೊಳಿಸುವಲ್ಲಿ ಸಹಕರಿಸುತ್ತದೆ. ಇದರಲ್ಲಿರುವ ಮೆಗ್ನಿಷಿಯಂ ಹಾಗೂ ವಿಟಮಿನ್ ಸಿ ಕಣ್ಣಿನ ದೃಷ್ಟಿ, ಜೀರ್ಣಶಕ್ತಿ ಹಾಗೂ ಕಬ್ಭಿಣಾಂಶ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಆಮ್ಲ ಪೌಡರ್, ರಸಂ ಸಾಂಬರ್ನಲ್ಲಿ ಹಾಕಿ ಸೇವಿಸುವುದರಿಂದ ಇಲ್ಲವೇ ಮೊಸರಿನಲ್ಲಿ ಹಾಕಿ ಸೇವಿಸುವುದರಿಂದ ಜೀರ್ಣಶಕ್ತಿ, ಮಲಬದ್ಧತೆ ಕಡಿಮೆಯಾಗುತ್ತದೆ. ಪೌಡರ್ನ್ನು ಸೀಗೆಪುಡಿಯೊಂದಿಗೆ ಬೆರಸಿ ತಲೆಗೆ ಹಚ್ಚುವುದರಿಂದ ಬಾಲ ನರೆ, ತಲೆಹೊಟ್ಟು, ಕೂದಲು ಉದುರುವುದನ್ನು ತಡೆಯುತ್ತದೆ. ಆಮ್ಲ ಎಣ್ಣೆಯೂ ಸಹ ಕೂದಲು ಉದ್ಧವಾಗಿ ಗಾಢ ಕಪ್ಪು ಬಣ್ಣ ಹಾಗೂ ಹೊಳಪು ಹೊಂದಲು ಸಹಾಯ ಮಾಡುತ್ತದೆ.
ಆಮ್ಲ ಕ್ಯಾಂಡಿಯಂತೂ ಬಹುಪಯೋಗಿ. ಮಕ್ಕಳು ಇದನ್ನು ತಿನ್ನುವುದರಿಂದ ಮಕ್ಕಳಿಗೆ ಯಥೇಚ್ಛವಾಗಿ ಸಿ ವಿಟಮಿನ್ ದೊರಕಿ ಬಾಲ್ಯದಲ್ಲೇ ರೋಗ ನಿರೋಧ ಶಕ್ತಿ ಹೆಚ್ಚುಗೊಳಿಸಿ ಅವರನ್ನು ಅನೇಕ ಖಾಯಿಲೆಗಳಿಂದ ದೂರವಿಡಲು ಸಹಾಯ ಮಾಡುತ್ತದೆ.