ಮಹಿಳೆಯರನ್ನು ಕಾಡುವ ಸಮಸ್ಯೆಗಳಲ್ಲಿ ಫೈಬ್ರೈಡ್ ಒಂದಾಗಿದೆ. ಬಹಳಷ್ಟು ಜನಕ್ಕೆ ಇದು ಗೊತ್ತಾಗದೆ ನಿರ್ಲಕ್ಷ್ಯ ವಹಿಸಿ ಬಳಿಕ ಉಲ್ಭಣಗೊಂಡಾಗ ವೈದ್ಯರ ಬಳಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.
ಗರ್ಭಕೋಶದಲ್ಲಿ ಒಂದು ಅಥವಾ ಅದಕ್ಕಿಂತ ಜಾಸ್ತಿ ಗಂಟುಗಳು ಬೆಳೆಯುವುದನ್ನು ಫೈಬ್ರೈಡ್ ಯುಟೇರಸ್ ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಇರುವವರಲ್ಲಿ ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಬಂಜೆತನ ಕಂಡು ಬರುತ್ತದೆ. ಈ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡರೆ ಕಾಯಿಲೆ ಬಗ್ಗೆ ಮಾಹಿತಿ ತಿಳಿಯುತ್ತದೆ ಅಲ್ಲದೆ ವೈದ್ಯರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.
ಫೈಬ್ರೈಡ್ ಯುಟೇರಸ್ ವಂಶವಾಹಿನಿಯಾಗಿ ಬರುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಹಿಂದಿನ ಕಾಲದ ಮಹಿಳೆಯರಿಗೆ ಹೋಲಿಸಿದರೆ ಈಗಿನವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಇಂದಿನ ಜೀವನಶೈಲಿ ಹಾಗೂ ಹಾರ್ಮೋನ್ ಸಂಬಂಧಿ ಸಮಸ್ಯೆಗಳು(ಈಸ್ಟ್ರೋಜಸ್, ಪ್ರೋ ಜೆಸ್ಟೋಸ್ ಹಾಗೂ ಇನ್ಸುಲಿನ್) ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ನಾವೆಲ್ಲರೂ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಾಗಲೇ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ಪಡೆಯುವುದೇ ಇಲ್ಲ. ಅದರಲ್ಲೂ ಹೆಚ್ಚಿನ ಮಹಿಳೆಯರು ಮುಜುಗರ, ನಾಳೆ ಹೋದರಾಯಿತು ಎಂಬ ನಿರ್ಲಕ್ಷ್ಯವೂ ಕಾಯಿಲೆ ಉಲ್ಭಣಕ್ಕೆ ಕಾರಣವಾಗಿ ಬಿಡುತ್ತದೆ. ಆದ್ದರಿಂದ ಆರಂಭದಲ್ಲಿ ಅತಿಯಾದ ಋತುಸ್ರಾವ, ಕಿಬ್ಬೊಟ್ಟೆ ನೋವು, ಪದೇ ಪದೇ ಮೂತ್ರ ವಿಸರ್ಜನೆ, ಮಲಬದ್ದತೆ, ಮೊದಲಾದವುಗಳು ಕಂಡು ಬಂದಾಗಲೇ ವೈದ್ಯರ ಬಳಿಗೆ ತೆರಳಬೇಕು. ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್, ಎಂಆರ್ಐ, ಎಚ್ಎಸ್ಜಿ, ಹಿಸ್ಟೆರೋಸ್ಕೋಪಿ ಮೊದಲಾದ ಪರೀಕ್ಷೆಗಳನ್ನು ಮಾಡಿ ಫೈಬ್ರೈಡ್ ಯುಟೇರಸ್ ಅನ್ನು ಕಂಡು ಹಿಡಿಯುತ್ತಾರೆ.
ಮೊದಲೆಲ್ಲ ಶಸ್ತ್ರಚಿಕಿತ್ಸೆ ಮೂಲಕ ಫೈಬ್ರೈಡ್ ಗೆಡ್ಡೆಗಳನ್ನು ಹೊರ ತೆಗೆಯಲಾಗುತ್ತಿತ್ತು. ಇದರಿಂದ ಹೆಚ್ಚು ನೋವು, ರಕ್ತಸ್ರಾವ ಆಗುತ್ತಿತ್ತು. ಆದರೆ ಇದೀಗ ಲ್ಯಾಪ್ರೋಸ್ಕೋಪಿ ಮುಖಾಂತರ ಫೈಬ್ರೈಡ್ ಗೆಡ್ಡೆಗಳನ್ನು ಹೊರತೆಗೆಯಲಾಗುತ್ತದೆ. ಇದರಿಂದ ರಕ್ತಸ್ರಾವವೂ ಕಡಿಮೆ. ನೋವು ಕಡಿಮೆ.
ಲ್ಯಾಪ್ರೋಸ್ಕೋಪಿಕ್ ಮಯೋ ಮೆಕ್ಟೊಮಿ ಸುರಕ್ಷಿತ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಎಂದರೆ ತಪ್ಪಾಗುವುದಿಲ್ಲ. ಹೊಟ್ಟೆಯ ಮೇಲ್ಭಾಗದಲ್ಲಿ ಸಣ್ಣದಾಗಿ ರಂಧ್ರದಂತೆ ಮಾಡಿ ಗರ್ಭಕೋಶದಲ್ಲಿನ ಗೆಡ್ಡೆಗಳನ್ನೂ ಹೊರತೆಗೆದು ನಂತರ ಸೂಕ್ತ ರೀತಿಯಲ್ಲಿ ಗರ್ಭಕೋಶವನ್ನು ಪುನರ್ ನಿರ್ಮಿಸಲಾಗುತ್ತದೆ. ಮಾಸರ್ಲೇಶನ್ ಮೂಲಕ ಗರ್ಭ ಕೋಶದ ಗೆಡ್ಡೆಗಳನ್ನೂ ಸಣ್ಣ ಸಣ್ಣ ತುಣುಕುಗಳನ್ನು ಮಾಡಿ ಆ ಸಣ್ಣ ರಂಧ್ರದ ಮೂಲಕ ಹೊರತೆಗೆಯಲಾಗುತ್ತದೆ. ಈ ಚಿಕಿತ್ಸೆಯಿಂದ ಅನೇಕ ಉಪಯೋಗಗಳಿವೆ. ಶಸ್ತ್ರಚಿಕಿತ್ಸೆಯ ನಂತರ ಹೊಟ್ಟೆಯ ಭಾಗದಲ್ಲಿ ಕಲೆಗಳಿರುವುದಿಲ್ಲ. ಕಡಿಮೆ ನೋವಿನಲ್ಲಿ ಶಸ್ತ್ರಚಿಕಿತ್ಸೆ ಮುಗಿಯುತ್ತದೆ. ಸೋಂಕು ಹರಡುವ ಸಾಧ್ಯತೆಗಳು ಕಡಿಮೆ ಅಷ್ಟೇ ಅಲ್ಲದೆ ರಕ್ತ ಸ್ರಾವದ ಪ್ರಮಾಣವೂ ಕಡಿಮೆಯಿರುತ್ತದೆ. ಅಷ್ಟೇ ಅಲ್ಲದೆ ಬಹುಬೇಗ ಗುಣಮುಖರಾಗಲೂ ಇದರಿಂದ ಸಾಧ್ಯವಾಗುತ್ತದೆ.