ನಮ್ಮ ಹಿರಿಯರು ಈ ಭೂಮಿಯಲ್ಲಿರುವ ಮಹತ್ವ ಅರಿತು ಅದಕ್ಕೆ ಅದರದ್ದೇ ಸ್ಥಾನವನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು. ನಾವು ಬಳಸುವ ಪ್ರತಿಯೊಂದು ಸಾಂಬಾರ ಪದಾರ್ಥವೂ ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂತಹ ಸಾಂಬಾರ ಪದಾರ್ಥಗಳ ಪೈಕಿ ಬೆಳ್ಳುಳ್ಳಿಗೆ ತನ್ನದೇ ಸ್ಥಾನವಿರುವುದನ್ನು ನಾವು ಕಾಣಬಹುದು. `ಆವಿಯಂಸಟೈಮ ಎಂದೆನಿಸಲ್ಪಟ್ಟ ಬೆಳ್ಳುಳ್ಳಿಗೆ ಸದಾ ವಜ್ರದ ಕವಚವಿದೆ. ಬಂಗಾರದ ಬೆಲೆಯಿದೆ. ಉತ್ಕೃಷ್ಟತೆಯಿಂದ ಇದು ಅತ್ಯುತ್ತಮ ಸಾಂಬಾರ ಪದಾರ್ಥ, ಪೋಷಕಾಂಶಗಳನ್ನು ಹೊಂದಿ, ದಿವ್ಯೌಷಧಗಳ ಆಗರವಾಗಿಯೂ ಬಳಕೆಯಾಗುತ್ತದೆ.
ನೂರು ಗ್ರಾಂ ಬೆಳ್ಳುಳ್ಳಿಯಲ್ಲಿ ಸಸಾರಜನಕ 6.3 ಗ್ರಾಂ, ನಿಕೋಟನಿಕ್ ಆಮ್ಲ 0.4 ಮಿ.ಗ್ರಾಂ ಅಸ್ಕಾರ್ಟಿಕ್ ಆಮ್ಲ 13 ಮಿ.ಗ್ರಾಂ, ಮೆಗ್ನೀಷಿಯಂ 36 ಮಿ.ಗ್ರಾಂ, ಕ್ಯಾಲೋರಿ 142, ಸೋಡಿಯಂ 32 ಮಿ.ಗ್ರಾಂ ರಂಜಕ 370ಮಿ.ಗ್ರಾಂ, ಶರ್ಕರ ಪಿಷ್ಟಗಳು, 29 ಗ್ರಾಂ,ಪೊಟ್ಯಾಶಿಯಂ 51 ಮಿ.ಗ್ರಾಂ ಇದೆ.ಆಯುರ್ವೇದದಲ್ಲಿ ಬೆಳ್ಳುಳ್ಳಿ ಜ್ವರರತ್ನದಂತೆ ವರ್ತಿಸಲು ಅಮೃತಬಳ್ಳಿ, ಕಟುಕರೋಹಿಣಿ, ತುಳಸಿ, ಹಿಪ್ಪಲಿ ಮೊದಲಾದವುಗಳಿದ್ದಂತೆ. ಕೆಮ್ಮು-ದಮ್ಮುಗಳಲ್ಲಿ ಮೊಸರಲ್ಲಿ 24 ಗಂಟೆ ಇಟ್ಟು ಸುಲಿದು ಅಂಕುರ ತೆಗೆದು ಹುರಿದು ಅಥವಾ ಸುಟ್ಟು 2-5 ಬೀಜಗಳನ್ನು ಪ್ರತಿದಿನ ಬಳಸಲು ತಿಳಿಸಲಾಗಿದೆ. ಹುಡುಗರ ಕುತ್ತಿಗೆಗೂ ಇದನ್ನು ಕಟ್ಟುವುದಿದೆ ಅಜೀರ್ಣದಲ್ಲಿಯೂ ಬೆಳ್ಳುಳ್ಳಿ(ಶುದ್ದ)ಯನ್ನು ತುಪ್ಪದಲ್ಲಿ ಹುರಿದು 4-5 ತಿನ್ನ ಬಹುದಾಗಿದೆ. ಕಿವಿನೋವಿನಲ್ಲಿ ಎಣ್ಣೆಯಲ್ಲಿ ಬೆಳ್ಳುಳ್ಳಿಯನ್ನು ಕುಟ್ಟಿ ಹಾಕಿ ಕುದಿಸಿ ಆರಿದ ಮೇಲೆ ಹಾಕಲು (ಕಿವಿಗೆ) ತಿಳಿಸಲಾಗಿದೆ. ಹೃದಯ ಬಲಕಾರಿ (Cardiac Stimulant ) ಯಾಗಿ, ಗಡ್ಡೆಯ ಕಷಾಯ ಅಥವಾ 5-10 ಹನಿರಸ ಅಥವಾ 1-2 ಔನ್ಸ್ ಕಷಾಯವನ್ನು ಸೇವಿಸಬಹುದಾಗಿದೆ. ಕಫಹರ (Expectorant) ಬೇಳೆಯ ಕಷಾಯ ಅಥವಾ ರಸ-ರಸವಾದರೆ 10-20 ಹನಿಕಷಾಯ 1-2 ಔನ್ಸ್ ಸೇವಿಸಬಹುದು.
ವಾತರೋಗಿಗಳಿಗೆ ಬೆಳ್ಳುಳ್ಳಿಯನ್ನು ಸರಿಯಾಗಿ ಅರೆದು ತುಪ್ಪದಲ್ಲಿ ಸೇರಿಸಿ ಸೇವಿಸುವುದೊಳಿತು. ಉಬ್ಬಸಕ್ಕೆ ಬೆಳ್ಳುಳ್ಳಿಯ ತೊಳೆಗಳನ್ನು (3-4)ಹಾಲಲ್ಲಿ ಬೇಯಿಸಿ ಸೇವಿಸುತ್ತಾ ಬರಬೇಕು. ಬಾಯಿ ಲಕ್ವಾಕ್ಕೆ ಅರ್ಧ ತೊಲ ಬೆಳ್ಳುಳ್ಳಿ ಅರೆದು ಹಾಲಲ್ಲಿ ಸೇರಿಸಿ, ಸರಿಯಾಗಿ ಕಾಯಿಸಿ ರಾತ್ರಿ ಮಲಗುವಾಗ ಸೇವಿಸಬೇಕಾಗುತ್ತದೆ. ರಕ್ತದೊತ್ತಡ ಇರುವವರಿಗಂತೂ ಬೆಳ್ಳುಳ್ಳಿಯ ನಿತ್ಯ ಸೇವನೆ ಅನಿವಾರ್ಯವೆಂದು ತಿಳಿದುಬಂದಿದೆ.
ಹೊಟ್ಟೆ ಜಂತು ನಾಶಕ್ಕೆ ಒಂದು ಚಮಚ ಜೇನು ಮತ್ತು ಬೆಳ್ಳುಳ್ಳಿಯ ರಸ ಸೇವನೆ ಅತ್ಯುಪಯುಕ್ತವಾಗಿದೆ. ಜೀರ್ಣಶಕ್ತಿ ವೃದ್ದಿಯಲ್ಲೂ ಬಿಸಿಬೂದಿ ಕಾವಿನಲ್ಲಿ ಸುಟ್ಟು ಬೆಳ್ಳುಳ್ಳಿಯ ಸೇವನೆ ಹೊಟ್ಟೆಯುಬ್ಬರ ನಿವಾರಿಸಿ, ಜೀರ್ಣಶಕ್ತಿಯನ್ನೂ ವೃದ್ದಿಸಲು ಸಹಕಾರಿಯಾಗಿದೆ. ಜಂತು ನಿವಾರಕವಾಗಿ ಜೇಡ, ಹಲ್ಲಿ, ಜಿರಳೆ ಕಾಟದಿಂದ ದೂರವಿರಲು ಬೆಳ್ಳುಳ್ಳಿ ಹೊಟ್ಟಿನ ಹೊಗೆ ಹಾಕಬಹುದಾಗಿದೆ. ಚೇಳು ಕಡಿತದಲ್ಲಿ ತಕ್ಷಣ ಜಡೆಹತ್ತಿ ಸೊಪ್ಪು, ಸಾಸಿವೆ ಜತೆ ಬೆಳ್ಳುಳಿಯನ್ನು ಅರೆದು ಕಡಿದ ಜಾಗಕ್ಕೆ ಹಚ್ಚುವುದರಿಂದ ವಿಷ ಇಳಿಯುವುದು. ಕಿವಿನೋವಿನಲ್ಲಿ ಸೈಂಧವ ಲವಣವನ್ನೂ ಬೆಳ್ಳುಳ್ಳಿ ರಸದೊಡನೆ ಸೇರಿಸಿ ಕಿವಿಗೆ ಬಿಡುವುದರಿಂದ ನೋವು ನಿವಾರಣೆಯಾಗುವುದು. ಮುಟ್ಟಿನ ದೋಷದಿಂದಾಗಿ ಸ್ತ್ರೀ ಗರ್ಭಾಶಯದಲ್ಲಿ ಉರಿ, ನೋವು ಇದ್ದಾಗ ಒಂದೂವರೆ ಲೋಟ ನೀರಲ್ಲಿ ಬೆಳ್ಳುಳ್ಳಿಯನ್ನು ಚೆನ್ನಾಗಿ ಬೇಯಿಸಿ ತ್ರಿಕಾಲ ಸೇವಿಸುವುದರಿಂದ ಉರಿಶಮನವಾಗುವುದು. ಬೆಳ್ಳುಳ್ಳಿಯು ಜಂತು ನಿವಾರಕವೂ ಹೌದು. ಚೈತನ್ಯದಾಯಕವೂ ಆಗಿರುತ್ತದೆ. ಕ್ಷಯರೋಗದಿಂದ ಚೇತರಿಸಿಕೊಂಡವರು ಪ್ರತಿನಿತ್ಯ ಬೆಳ್ಳುಳಿ ರಸವನ್ನು ಕನಿಷ್ಟಪಕ್ಷ ಎರಡು ವರ್ಷ ಪರ್ಯಂತವಾದರೂ ಸೇವಿಸುತ್ತಾ ಬರುವುದರಿಂದ ಕ್ಷಯರೋಗ ಪುನರಾವೃತ್ತಿಯಾಗದಂತೆ ತಡೆಯುತ್ತದೆ. ನಾರುವ ಗಾಯಕ್ಕೂ ಬೆಳ್ಳುಳ್ಳಿ ಉಪಯೋಗಿಸುವುದರಿಂದ ಗುಣವಾಗುವುದು ಅಜೀರ್ಣಜನ್ಯ ಹೊಟ್ಟೆಯುಬ್ಬರಕ್ಕೂ ಇದು ಫಲಕಾರಿಯಾಗಿದೆ. ಸಾಮಾನ್ಯ ಗಾಯಗಳಿಗೆ ಅಡುಗೆ ಉಪ್ಪು, ಹೊಂಗೆ ಬೀಜ ಮತ್ತು ಬೆಳ್ಳುಳ್ಳಿಗಳನ್ನು ಅರೆದು ಹಚ್ಚುವುದರಿಂದ ಗುಣಕಾರಿಯಾಗುತ್ತದೆ.