News Kannada
Thursday, September 29 2022

ಆರೋಗ್ಯ

ಮಧುಮೇಹ ನಿಯಂತ್ರಣಕ್ಕೆ ವ್ಯಾಯಾಮ ಅಗತ್ಯ - 1 min read

Photo Credit :

ಮಧುಮೇಹ ನಿಯಂತ್ರಣಕ್ಕೆ ವ್ಯಾಯಾಮ ಅಗತ್ಯ

ಈಗ ನಮ್ಮಲ್ಲಿ ಶ್ರಮ ವಹಿಸಿ ಮಾಡುವ ಕೆಲಸ ಬೇಡ, ಶ್ರಮ ರಹಿತ, ಹೆಚ್ಚು ಸಂಬಳ ತರುವ ಉದ್ಯೋಗ ಬೇಕೆಂದು ಬಯಸುವವರೇ ಜಾಸ್ತಿ.

ಕಷ್ಟಪಟ್ಟು ದುಡಿಯೋದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮನೆಯಿಂದ ಕಚೇರಿಗೆ ವಾಹನಗಳಲ್ಲಿ ತೆರಳಿ ಕೆಲಸ ನಿರ್ವಹಿಸುತ್ತಾರೆ. ಹೆಚ್ಚಿನವರ ದೇಹಕ್ಕೆ ಶ್ರಮವೇ ಆಗದಂತೆ ನೋಡಿಕೊಳ್ಳುತ್ತಾರೆ. ಕೈಕಾಲು, ದೇಹಕ್ಕೆ ಶ್ರಮವಿಲ್ಲದೆ ಕೇವಲ ಮಿದುಳಿಗಷ್ಟೆ ಕೆಲಸವನ್ನು ನೀಡುತ್ತಿರುವುದರಿಂದ ನಮಗರಿವಿಲ್ಲದಂತೆ ಮಾನಸಿಕ ಆಯಾಸ ಕಾಣಿಸಿಕೊಳ್ಳುತ್ತಿದೆ. ದೇಹ ಸದಾ ಶ್ರಮವನ್ನು ಬಯಸುತ್ತದೆ. ಅದು ಸಾಧ್ಯವಾಗದಿದ್ದಾಗ ನಮಗೆ ಗೊತ್ತಿಲ್ಲದ ಹಾಗೆ ಕಾಯಿಲೆಗಳು ಅಂಟಿಕೊಳ್ಳುತ್ತವೆ. ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋದಾಗ ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ ಎಂದು ಹೇಳುತ್ತಾರೆ. ಆದರೆ ಅದು ಎಲ್ಲರಿಗೂ ಸಾಧ್ಯವಿಲ್ಲ. ಬೆಳಗ್ಗೆ ಎದ್ದು ವ್ಯಾಯಾಮ ಮಾಡುವ ಅಭ್ಯಾಸ ಹೆಚ್ಚಿನವರಿಗೆ ಇಲ್ಲವೇ ಇಲ್ಲ ಎನ್ನಬೇಕು. ತಮಗೆ ಬೊಜ್ಜು, ಇನ್ನಿತರ ಕಾಯಿಲೆ ಬಂದಾಗ ವೈದ್ಯರ ಮಾತಿಗೆ ಕಟ್ಟುಬಿದ್ದು ಕೆಲವರು ವ್ಯಾಯಾಮ ಮಾಡುತ್ತಾರೆ. ನಮ್ಮನ್ನು ಕಾಡುವ ಕೆಲವು ಕಾಯಿಲೆಗಳಿಗೆ ಔಷಧಿ ನೀಡಿ ಮತ್ತೆ ಬಾರದಂತೆ ವಾಸಿ ಮಾಡಬಹುದು. ಆದರೆ ಮಧುಮೇಹ ಹಾಗಲ್ಲ. ಅದು ಒಮ್ಮೆ ಬಂತೆಂದರೆ ಮತ್ತೆ ನಮ್ಮನ್ನು ಬಿಟ್ಟು ದೂರ ಸರಿಯುವುದೇ ಇಲ್ಲ. ಹೀಗಾಗಿ ಅದು ನಮ್ಮ ದೇಹದಲ್ಲಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಅದನ್ನು ನಿಯಂತ್ರಿಸಿಕೊಳ್ಳುವುದಷ್ಟೆ ನಮಗೆ ಇರುವ ಒಂದೇ ಒಂದು ಮಾರ್ಗವಾಗಿರುತ್ತದೆ.

ಮಧುಮೇಹ ಇರುವ ವ್ಯಕ್ತಿಗಳು ಔಷಧಿಯೊಂದಿಗೆ ಕೆಲವೊಂದು ಆಹಾರ ಕ್ರಮಗಳನ್ನು ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ವೈದ್ಯರು ಯಾವುದನ್ನು ತ್ಯಜಿಸಬೇಕೆಂದು ಹೇಳುತ್ತಾರೋ ಅದನ್ನು ತ್ಯಜಿಸುವುದು ಅನಿವಾರ್ಯ. ಅದರ ಜೊತೆಗೆ ವ್ಯಾಯಾಮ ಮಾಡುವುದು ಅಷ್ಟೇ ಅಗತ್ಯ. ಮುಂಜಾನೆ ಸವಿ ನಿದ್ದೆಯನ್ನು ತ್ಯಜಿಸಿ ಹೊರಗೆ ವಾಕಿಂಗ್ ಮಾಡುವುದು ಹೆಚ್ಚಿನವರಿಗೆ ಕಷ್ಟವಾಗಬಹುದು. ಅದರಲ್ಲೂ ಇತ್ತೀಚೆಗೆ ಸರಗಳ್ಳರು, ಪುಂಡರು, ಪೋಕರಿಗಳು ಹೆಚ್ಚಿರುವ ಸಮಯದಲ್ಲಿ ಹೇಗಪ್ಪಾ ಎಂದು ಮಹಿಳೆಯರು ತಲೆಕೆಡಿಸಿಕೊಳ್ಳಬಹುದು. ಇದಕ್ಕೆ ಪರಿಹಾರ ಏನೆಂದರೆ ಹೆಚ್ಚಿನ ಜನ ಓಡಾಡುವ ಪ್ರದೇಶದಲ್ಲೇ ವಾಕಿಂಗ್ ಮಾಡುವುದು, ಚಿನ್ನಾಭರಣಗಳನ್ನು ಧರಿಸದೆ ಮನೆಯಲ್ಲೇ ಇಟ್ಟು ಹೋಗುವುದು ಉತ್ತಮ.

ಮಧುಮೇಹ ಪೀಡಿತರು ವ್ಯಾಯಾಮ ಹೇಗೆ  ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಪಾಲಿಸುವುದು ಒಳ್ಳೆಯದು. ಅವರ ಪ್ರಕಾರ ಪ್ರತಿದಿನ ಕನಿಷ್ಠ ಮೂವತ್ತು ನಿಮಿಷಗಳಾದರೂ ವ್ಯಾಯಾಮ ಮಾಡಲೇ ಬೇಕಂತೆ.  ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ದೈನಂದಿನ ಚಟುವಟಿಕೆಗಳಾದ ನಡಿಗೆ ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುವುದು ಒಳ್ಳೆಯದು. ಒಬ್ಬರೇ ಹೇಗಪ್ಪಾ ಎಂದು ಯೋಚಿಸದೆ ಸ್ನೇಹಿತ(ತೆ)ರ ಜತೆ ಸೇರಿ ಗುಂಪಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ಪ್ರೇರಣೆ ನೀಡುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಇದು ಒಳ್ಳೆಯ ಅನುಭವ ನೀಡುತ್ತದೆ ಜತೆಗೆ ಉತ್ತೇಜನ ನೀಡುತ್ತದೆ. ವಾರಕ್ಕೆ ಕನಿಷ್ಠ ಮೂರು ದಿನವಾದರೂ ಸುಮಾರು 30 ನಿಮಿಷಗಳ ನಡಿಗೆಯನ್ನು ಮಾಡಿ. ಇದಕ್ಕೊಂದು ಗುರಿಯಿರಲಿ. ಮನೆಯಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ  ವ್ಯಾಯಾಮ ಶಾಲೆಗೆ ಸೇರಿಕೊಳ್ಳುವುದು ಒಳ್ಳೆಯದು. ಅಲ್ಲಿ ಮಾಸ್ಟರ್ ಇರುವುದರಿಂದ ಅವರು ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವೊಂದು ಸಮಸ್ಯೆ, ರಗಳೆಗಳನ್ನು ಸಹಿಸಿಕೊಳ್ಳಲೇ ಬೇಕು. ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ಹೇಗಪ್ಪಾ ವ್ಯಾಯಾಮ, ವಾಕಿಂಗ್ ಮಾಡುವುದು ಎಂದು ಯೋಚಿಸುತ್ತಾ ಕೂರದೆ ಅದಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಒಳಿತು. ಆರೋಗ್ಯ ಇದ್ದರೆ ತಾನೆ ಇತರೆ ಎಲ್ಲವನ್ನೂ ಮಾಡಲು ಸಾಧ್ಯ ಎಂಬುವುದನ್ನು ಮರೆಯಬಾರದು.

See also  ಬೇಸಿಗೆಗೆ ತಕ್ಕದಾಗಿ ನೀರು ಸೇವಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು