ನಮ್ಮಲ್ಲಿ ದೈಹಿಕವಾಗಿ ಹೆಚ್ಚಿನವರು ಆರೋಗ್ಯವಾಗಿದ್ದರೂ ಮಾನಸಿಕವಾಗಿ ಆರೋಗ್ಯವಾಗಿರುವುದಿಲ್ಲ. ಅವರಲ್ಲಿ ಏನೋ ಕೊರಗು, ಚಿಂತೆ ಸದಾ ಕಾಡುತ್ತಿರುತ್ತದೆ. ಹೀಗಾಗಿ ಅವರು ಜನರ ಮಧ್ಯೆ ರೋಗಿಯಂತೆ ಕಂಡು ಬರುತ್ತಾರೆ. ಇದಕ್ಕೆ ಕಾರಣವೂ ಇದೆ. ನಮ್ಮ ಬದುಕು ಪ್ರಾಣಿ ಪಕ್ಷಿಗಳಂತಿಲ್ಲ. ಇವತ್ತು ದುಡಿದು ಇವತ್ತೇ ತಿಂದು ಮಲಗುವ ಸ್ಥಿತಿಯಲ್ಲಿ ನಾವಿಲ್ಲ. ರಾತ್ರಿ ಮಲಗುವಾಗಲೂ ನಾಳೆ ಬೆಳಿಗ್ಗೆ ತಿಂಡಿ ಏನು ಮಾಡುವುದೆಂಬ ಚಿಂತೆ ಕಾಡುತ್ತಿರುತ್ತದೆ.
ಸಾಮಾನ್ಯವಾಗಿ ನಾವ್ಯಾರೂ ಇವತ್ತಿನ ಬಗ್ಗೆ ಚಿಂತಿಸುವುದೇ ಇಲ್ಲ. ಕೂತರೂ ನಿಂತರೂ ನಮಗೆ ನಾಳೆಯದ್ದೇ ಚಿಂತೆ. ರಾತ್ರಿ ಮೃಷ್ಟಾನ್ನ ಉಂಡು ಸುಪ್ಪತ್ತಿಗೆಯಲ್ಲಿ ಮಲಗಿದರೂ ನಾಳೆ ಎಂಬ ಚಿಂತೆ ನಮ್ಮನ್ನು ಸುಖವಾಗಿ, ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲ. ಇನ್ನು ನಾವು ನಮ್ಮದಲ್ಲದ ವಿಚಾರಗಳಿಗೂ ಚಿಂತೆ ಮಾಡುತ್ತಿರುತ್ತೇವೆ. ನಿಜವಾಗಿ ಹೇಳಬೇಕೆಂದರೆ ಇಂತಹ ಚಿಕ್ಕಪುಟ್ಟ ಚಿಂತೆಗಳು ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯ ಎಲ್ಲ ರೀತಿಯ ಪೌಷ್ಠಿಕ ಆಹಾರ ಸೇವಿಸುತ್ತಿದ್ದರೂ ಚಿಂತೆ ಅವನನ್ನು ಆವರಿಸಿತೆಂದರೆ ಆರೋಗ್ಯವಾಗಿ ಇರಲು ಸಾಧ್ಯವಾಗುವುದಿಲ್ಲ.
ಚಿಂತೆ ಬದುಕನ್ನು ಕತ್ತಲಿಗೆ ತಳ್ಳಿಬಿಡುತ್ತದೆ. ಚಿಂತೆ ಕುರಿತಂತೆ ಮಾತೊಂದಿದೆ. ಮನುಷ್ಯ ಸಾಯುತ್ತಾನೆ ಚಿಂತೆ ಸಾಯುವುದಿಲ್ಲ. ನಮ್ಮೆಲ್ಲರಿಗೂ ಕೆಲವು ವಿಚಾರಗಳು ಗೊತ್ತಿದೆ. ಹುಟ್ಟಿದ ಮನುಷ್ಯ ಸಾಯಲೇ ಬೇಕು. ಆದರೆ ಹುಟ್ಟು ಸಾವಿನ ನಡುವೆ ಸಮಸ್ಯೆ, ಕಷ್ಟ, ಸುಖ ಹೀಗೆ ಎಲ್ಲವೂ ಬರುತ್ತದೆ. ಅದನ್ನು ಅರಿತುಕೊಂಡು ಬದುಕುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಕಟ್ಟಿಕೊಳ್ಳಲು ನಮಗೆ ಬೇಕಾಗಿರುವುದು ಚಿಂತೆಯಲ್ಲ ಚಿಂತನೆ ಎಂಬುವುದನ್ನು ಮರೆಯಬಾರದು. ಇಷ್ಟಕ್ಕೂ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬರನ್ನೂ ಚಿಂತೆ ಕಾಡದಿರದು. ಹಾಗೆಂದು ಬರೀ ಚಿಂತೆಯಲ್ಲೇ ಕಾಲ ಕಳೆಯುವಂತಿಲ್ಲ. ಚಿಂತೆ ಮಾಡುತ್ತಾ ಹೋದರೆ ಮನುಷ್ಯ ಚಿತೆಯಾಗಬೇಕಾಗುತ್ತದೆ.
ಸಾಮಾನ್ಯವಾಗಿ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕುಳಿತಾಗ ನಮ್ಮನ್ನು ಚಿಂತೆ ಕಾಡುತ್ತದೆ. ನಮ್ಮೊಂದಿಗಿದ್ದವರು, ನಮಗಿಂತ ಚಿಕ್ಕವರು, ನಮಗಿಂತ ಎತ್ತರಕ್ಕೆ ಬೆಳೆದಿದ್ದಾರೆ. ನಮಗಿಂತಲೂ ಶ್ರೀಮಂತರಾಗಿದ್ದಾರೆ. ನಾನು ಮಾತ್ರ ಹೀಗೆಯೇ ಇದ್ದೇನೆ ಎನ್ನುತ್ತಾ ತಮ್ಮನ್ನೇ ತಾವೇ ಹೀಯಾಳಿಸಿಕೊಳ್ಳುತ್ತಾ ತಮ್ಮ ಶಕ್ತಿ ಸಾಮಥ್ರ್ಯವನ್ನು ಕುಗ್ಗಿಸಿಕೊಳ್ಳುತ್ತಾ ಚಿಂತೆ ಮಾಡುವವರು ಇದ್ದಾರೆ. ಅಂತಹವರು ತಮ್ಮ ವಯಕ್ತಿಕ ಬದುಕಿನಲ್ಲಿ ಸುಖವಾಗಿರಲು ಸಾಧ್ಯವಿಲ್ಲ. ಬಹಳಷ್ಟು ಜನ ಆರೋಗ್ಯವಾಗಿರುವುದೆಂದರೆ ದೈಹಿಕವಾಗಿ ಮಾತ್ರ ಎಂದು ನಂಬಿದ್ದಾರೆ. ಒಬ್ಬ ವ್ಯಕ್ತಿ ಆರೋಗ್ಯವಂತ ಎಂದು ಹೇಳಬೇಕಾದರೆ ಆತ ಮಾನಸಿಕವಾಗಿಯೂ ಸದೃಢನಾಗಿರಬೇಕು ಎಂಬುದನ್ನು ಮರೆಯಬಾರದು.
ಚಿಂತೆ ಬಿಟ್ಟು ಸಂತೋಷವಾಗಿ ಬದುಕಿದರೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಅದು ಹೇಗೆಂದರೆ, ನಮ್ಮ ಬದುಕನ್ನು ಬೇರೆಯವರ ಬದುಕಿನೊಂದಿಗೆ ಸಮೀಕರಿಸಿ ನೋಡುವುದನ್ನು ಬಿಡಬೇಕು. ಅವರಲ್ಲಿರುವ ವಸ್ತು ನಮ್ಮಲ್ಲಿಲ್ಲವಲ್ಲ ಎಂಬ ಕೊರಗು ಬಿಡಬೇಕು.
ನಾಳೆ ಏನಾಗುತ್ತದೆಯೋ ಎಂಬ ಚಿಂತೆ ಬಿಟ್ಟು ಇವತ್ತಿನ ಸಂತೋಷದ ಕ್ಷಣಗಳನ್ನು ಅನುಭವಿಸುವುದನ್ನು ಕಲಿಯಬೇಕು. ಅದಕ್ಕಿಂತ ಹೆಚ್ಚಾಗಿ ಇದ್ದುದರಲ್ಲಿ ತೃಪ್ತಿ ಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ಹೀಗಾದರೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಚಿಂತೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವುದನ್ನು ಬಿಟ್ಟು ಚಿಕ್ಕ ಚಿಕ್ಕ ವಿಷಯಗಳಲ್ಲಿ ಹೆಚ್ಚು ಸಂತೋಷ ಪಡುವುದನ್ನು ಕಲಿಯಬೇಕು. ಸಂತೋಷ ಆರೋಗ್ಯವನ್ನು ವೃದ್ಧಿಸುತ್ತದೆ ಎಂಬುದನ್ನು ಮರೆಯಬಾರದು.