ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಾವೆಷ್ಟು ಕಾಳಜಿಯನ್ನು ವಹಿಸುತ್ತೇವೆಯೋ ಅಷ್ಟೇ ಕಾಳಜಿಯನ್ನು ಅಂತರ್ದೇಹದ(ಮನಸ್ಸಿನ) ಕಡೆಗೆ ನೀಡಬೇಕು.
ಏಕೆಂದರೆ ಕಲುಷಿತ ಮನಸ್ಸು ನಮ್ಮದಾದರೆ ಅದರ ಪರಿಣಾಮ ಶರೀರದ ಮೇಲೆ ನೇರವಾಗಿ ಬೀರುತ್ತದೆ. ಆರೋಗ್ಯಕರ ಮನಸ್ಸನ್ನು ಹೊಂದದೆ ಹೋದರೆ ಸದಾ ವ್ಯಸನಿಯಾಗಿಯೋ ಅಥವಾ ಮಾನಸಿಕ ರೋಗಿಯಾಗಿಯೋ ಬಳಲಬೇಕಾದ ಅಪಾಯವಂತು ಇದ್ದೇ ಇದೆ.
ಮನಸ್ಸಿನಲ್ಲಿ ಕೆಟ್ಟ ಆಲೋಚನೆ, ಅಸೂಯೆ, ಅಹಂಕಾರದಂತಹ ರಜೋ ಗುಣಗಳು ತುಂಬಿದ್ದೇ ಆದರೆ ನಾವು ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲ. ಕಾರಣ ಒಳಗೆ ಕಲ್ಮಶವನ್ನು ತುಂಬಿಕೊಂಡು ಹೊರಗಿನ ಶರೀರವನ್ನು ಎಷ್ಟೇ ಶುಭ್ರಗೊಳಿಸಿದರೂ ಅದರಿಂದ ಯಾವುದೇ ಪ್ರಯೋಜನವಿಲ್ಲ.
ನಾವು ಮಾಡಿದ ತಪ್ಪು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದು ಛೆ! ಎಂಥ ತಪ್ಪು ಮಾಡಿಬಿಟ್ಟೆ? ನನ್ನಿಂದ ಅವನಿಗೆ ಎಂತಹ ಅನ್ಯಾಯವಾಯಿತು ಎಂಬ ಕೊರಗು ನಮ್ಮನ್ನು ಕಾಡತೊಡಗುತ್ತದೆ. ಒಂದು ವೇಳೆ ಇಂತಹ ಗುಣಗಳು ನಮ್ಮಲ್ಲಿ ಕಂಡು ಬಂದರೆ ಮುಂದೆ ಅಂತಹ ತಪ್ಪುಗಳಿಗೆ ನಾವು ಅವಕಾಶ ಕೊಡದೆ ತಿದ್ದಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ನಮ್ಮಲ್ಲಿ ಒಳ್ಳೆತನ ಬೆಳೆಯಲು ಸಹಕಾರಿಯಾಗುತ್ತದೆ.
ನಮ್ಮ ತಪ್ಪುಗಳು ನಮಗೆ ಅರಿವಾದರೆ ಖಂಡಿತಾ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ತಪ್ಪುಗಳನ್ನು ಸತ್ಯ ಮಾಡುವ ಅಥವಾ ನಾವು ಮಾಡಿದ್ದೇ ಸರಿ ಎಂಬ ಮನೋಭಾವ ಬೆಳೆದಿದ್ದೇ ಆದರೆ ಖಂಡಿತಾ ನಾವು ಉದ್ಧಾರವಾಗುವುದಿಲ್ಲ.
ನಮ್ಮಲ್ಲಿ ಎಷ್ಟೇ ಸಂಪತ್ತು, ಅಧಿಕಾರವಿದ್ದರೂ ಮಾನವೀಯ ಗುಣವಿಲ್ಲದಿದ್ದರೆ ಬದುಕೇ ನಗಣ್ಯ. ಆದ್ದರಿಂದ ಮಾನವೀಯ, ಗುಣ, ಸಂಬಂಧಗಳ ಬಗ್ಗೆಯೂ ಗಮನಹರಿಸಬೇಕು. ಮೂರು ದಿನಗಳ ಬದುಕಿನಲ್ಲಿ ಕೇವಲ ನಮಗಾಗಿ ಬದುಕದೆ, ಇನ್ನೊಬ್ಬರ ಬದುಕಿಗಾಗಿ ಒಂದಷ್ಟು ಸಮಯಗಳನ್ನು ಮೀಸಲಿಡುವ, ಕಷ್ಟಸುಖಗಳಲ್ಲಿ ಭಾಗಿಯಾಗುವ ಅಷ್ಟೇ ಅಲ್ಲದೆ ನಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು. ಒಂದು ವೇಳೆ ನಮ್ಮ ತಪ್ಪು ಅರಿವಿಗೆ ಬಂದರೂ ನಾನೇಕೆ ಅವನೊಂದಿಗೆ ಕ್ಷಮೆ ಕೇಳಬೇಕು? ನನ್ನ ಅಂತಸ್ತಿಗೆ ಇದು ಹೊಂದುವಂತದ್ದಲ್ಲ ಎಂಬ ಮನೋಭಾವದಿಂದ ತಪ್ಪನ್ನು ಸಮರ್ಥಿಸಿಕೊಂಡು ಮುನ್ನಡೆದರೆ ನಮಗರಿವಿಲ್ಲದೆಯೇ ಮತ್ತಷ್ಟು ತಪ್ಪನ್ನು ನಾವು ಮಾಡಬೇಕಾಗುತ್ತದೆ. ಇದು ಅರಿವಾಗುವಾಗ ಕಾಲ ಮಿಂಚಿ ಹೋಗಿರುತ್ತದೆ ಅಲ್ಲದೆ ಅದಕ್ಕೆ ತಕ್ಕ ಕಂದಾಯವನ್ನು ಕಟ್ಟಬೇಕಾಗುತ್ತದೆ.
ಆರೋಗ್ಯಕರ ಮನಸ್ಸಿದ್ದರೆ ದೇಹ ಆರೋಗ್ಯದಿಂದ ಇದ್ದು ಲವಲವಿಕೆಯಿಂದ ಕೂಡಿರಲು ಸಾಧ್ಯ. ಇಲ್ಲದಿದ್ದರೆ ದ್ವೇಷ, ಅಸೂಯೆ ತುಂಬಿ ನಿದ್ರಾಹೀನತೆಯಿಂದ ಬಳಲಿ ಆರೋಗ್ಯವೇ ಹಾಳಾಗಿ ಬಿಡುತ್ತದೆ. ನಾವು ಆರೋಗ್ಯವಾಗಿರಬೇಕಾದರೆ ಕೇವಲ ದೇಹದ ಕಾಳಜಿ ಮಾತ್ರವಲ್ಲ ಮಾನಸಿಕ ಕಾಳಜಿಯೂ ಅಗತ್ಯ ಎಂಬುದನ್ನು ಮರೆಯಬಾರದು…