ಈಗೀಗ ಮನುಷ್ಯನ ಬದುಕು ಕೃತಕವಾಗುತ್ತಿದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ನಮ್ಮಲ್ಲಿನ ಸ್ವಾಭಾವಿಕತೆ ಸದ್ದಿಲ್ಲದೆ ದೂರ ಸರಿಯುತ್ತಿದೆ.
ಊಟ, ತಿಂಡಿಯಿಂದ ಆರಂಭವಾಗಿ ಕೆಲಸಕಾರ್ಯ, ರಾತ್ರಿ ನಿದ್ದೆ ಮಾಡುವವರೆಗೆ ನಮ್ಮಲ್ಲಿ ಕೃತಕತೆ ಕಾಣುತ್ತಿದೆ ಎಂದರೆ ತಪ್ಪಾಗಲಾರದು. ನಮ್ಮ ಬದುಕಿನ ಹೆಚ್ಚಿನ ಕ್ಷಣಗಳನ್ನು ಮತ್ತೊಬ್ಬರಿಗೆ ಮೀಸಲಿಟ್ಟಿದ್ದೇವೆ. ಹೀಗೆಯೇ ಆಗಬೇಕೆಂಬ ಅಣತಿಯಂತೆ ನಮ್ಮ ಬದುಕನ್ನು ಸಾಗಿಸುತ್ತಿದ್ದೇವೆ. ನಮ್ಮದು ಅಂತ ಹೇಳುವುದಕ್ಕೂ ನಮ್ಮಲ್ಲಿ ಸಮಯ ಇಲ್ಲದಾಗಿದೆ. ಮಾಡುವ ಊಟದಿಂದ ನಿದ್ದೆವರೆಗೂ ಮತ್ಯಾರನ್ನೋ ಅವಲಂಬಿಸಿದ್ದೇವೆ. ಹೀಗಾಗಿ ನಮ್ಮತನ ಮಾಯವಾಗಿ ಮತ್ಯಾರೋ ಕೈಯ್ಯಲ್ಲಿ ಆಡುವ ಬೊಂಬೆಗಳಾಗುತ್ತಿದ್ದೇವೆ.
ಮಾತನಾಡುವಾಗಲೂ ನಮ್ಮಲ್ಲಿ ಗಂಭೀರತೆ ಇಲ್ಲ. ನಮ್ಮ ಮುಂದಿರುವ ವ್ಯಕ್ತಿ ಜತೆ ಮುಖಕೊಟ್ಟು ಮಾತನಾಡುವ ವ್ಯವಧಾನ ನಮಗಿಲ್ಲ. ಆತ ಮಾತನಾಡುತ್ತಿದ್ದರೆ ಅದನ್ನು ಕೇಳುವ ತಾಳ್ಮೆಯಿಲ್ಲ. ಮೊಬೈಲ್ನಲ್ಲಿ ಮೆಸೇಜ್ ಓದುತ್ತಲೋ, ಮತ್ತೇನನ್ನೋ ಮಾಡುತ್ತಿರುತ್ತೇವೆ. ಎದುರಿಗಿನ ವ್ಯಕ್ತಿಯೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡುವ ಸೌಜನ್ಯವೂ ಇಲ್ಲದಾಗಿದೆ.
ಇನ್ನು ಆರೋಗ್ಯಪೂರ್ಣ ಆಹಾರ ನಮಗೆ ಬೇಕಾಗಿಲ್ಲ. ಬದಲಿಗೆ ನೋಡಲು ಸುಂದರ ಮತ್ತು ಬಾಯಿಗೆ ರುಚಿಯಿದ್ದರೆ ಸಾಕು. ಅದನ್ನು ಚಪ್ಪರಿಸಿ ತಿನ್ನುತ್ತೇವೆ. ಕಷ್ಟಪಟ್ಟು ಅಡುಗೆ ಮಾಡಿ ಅದನ್ನು ಸವಿದು ನೆಮ್ಮದಿಯಿಂದ ಕುಳಿತು ಸುಧಾರಿಸಿಕೊಳ್ಳಲು ಪುರುಸೊತ್ತಿಲ್ಲ. ಇನ್ನು ಜಂಜಾಟದ ನಡುವೆ ಸಂಬಂಧಿಕರನ್ನು ಕರೆದು ಊಟ ಹಾಕಿ ಉಪಚರಿಸುವ ಉದಾರತೆ ಅಂತು ಇಲ್ಲವೇ ಇಲ್ಲವಾಗಿದೆ.
ಪೂರ್ವಜರು ಅತಿಥಿ ದೇವೋಭವ ಎಂದು ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕರೆದು ಉಪಚರಿಸಿ ಕಳುಹಿಸುತ್ತಿದ್ದರು. ಅವತ್ತಿನ ದಿನದಲ್ಲಿ ಹಸಿದ ಹೊಟ್ಟೆಗೆ ಅನ್ನ ಹಾಕಿದರೆ ಪುಣ್ಯ ಬರುತ್ತೆ ಎಂದು ನಂಬಿದ್ದರು. ಆದರೆ ಈಗ ಅದು ಸಾಧ್ಯವಿಲ್ಲ ಬಿಡಿ. ಹೆತ್ತವರಿಗೆ ಊಟ ಹಾಕುವುದೇ ದುಸ್ತರ ಎನ್ನುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದೇವೆ. ಬದಲಾದ ಕಾಲದಲ್ಲಿ ಎಲ್ಲವನ್ನು ಹಣದಿಂದಲೇ ಅಳೆಯುವುದರಿಂದಾಗಿ ಹಣದ ಸಂಪಾದನೆಗೆ ಬಿದ್ದ ಜನ ನೈತಿಕತೆಯನ್ನು ಮರೆತು ಅನೈತಿಕ ಹಾದಿ ಹಿಡಿಯುತ್ತಿದ್ದಾರೆೆ. ಮೋಸ, ಸುಲಿಗೆ, ವಂಚನೆ ಹೆಚ್ಚಾಗಿದೆ. ಯಾರನ್ನೂ ನಂಬಲಾರದ ಸ್ಥಿತಿಗೆ ಬಂದು ನಿಂತಿದ್ದೇವೆ. ಇದರಿಂದ ಅತಿಥಿ ದೇವೋಭವ ಹೋಗಿದೆ. ಮನೆಗೆ ಕಾಂಪೌಂಡ್ ನಿಮರ್ಿಸಿ ಸಂಬಂಧಗಳಿಂದ ದೂರವಾಗಿ ನಮ್ಮೊಳಗೆ ಬಂಧಿಯಾಗಿದ್ದೇವೆ. ಮನೆಗೆ ಕರೆದು ಉಪಚರಿಸಲು ಇಷ್ಟವಿಲ್ಲ. ಅಷ್ಟಕ್ಕೂ ಎಲ್ಲರೂ ದುಡಿಮೆಯಲ್ಲೇ ಇರುವುದರಿಂದ ಉಪಚರಿಸಲು ಸಮಯವೂ ಇಲ್ಲವಾಗಿದೆ. ಆದ್ದರಿಂದ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಎಂಬ ನಾಮಫಲಕ ತೂಗು ಹಾಕುತ್ತಿದ್ದೇವೆ.
ಒಟ್ಟಾರೆ ಹೇಳಬೇಕೆಂದರೆ ನಾವು ಬೆಳಿಗ್ಗೆಯಿಂದ ಸಂಜೆವರೆಗೆ ನೂರೆಂಟು ಜವಾಬ್ದಾರಿಗಳನ್ನು ಹೊತ್ತುಕೊಂಡು ನೆಮ್ಮದಿಯಾಗಿ ತಿಂಡಿ, ಊಟ, ನಿದ್ದೆ ಮಾಡದೆ ಒದ್ದಾಡುತ್ತಿದ್ದೇವೆ. ಹಣ ಸಂಪಾದಿಸಿದರೆ ಸಾಕು ಅದರಿಂದ ಎಲ್ಲವನ್ನೂ ಪಡೆದುಕೊಳ್ಳಬಹುದು ಎಂಬ ಕೆಟ್ಟ ಮನೋಭಾವ ನಮ್ಮಲ್ಲಿ ಬಂದು ಬಿಟ್ಟಿದೆ. ಆದ್ದರಿಂದ ಹೇಗಾದರು ಆಗಲಿ ಹಣ ಸಂಪಾದಿಸಲೇ ಬೇಕು ಎಂಬ ಹಠಕ್ಕೆ ಬಿದ್ದಿರುವ ನಾವು ಅದರಲ್ಲಿ ಮಗ್ನರಾಗುತ್ತಿದ್ದೇವೆ. ಪರಿಣಾಮ ನಮ್ಮಲ್ಲಿನ ಸ್ವಾಭಾವಿಕತೆ ಮರೆಯಾಗುತ್ತಿದೆ. ನಾವು ಬೊಂಬೆಗಳಾಗುತ್ತಿದ್ದೇವೆ.