ನಾವು ಇವತ್ತು ನಮ್ಮ ಮಕ್ಕಳನ್ನು ಸ್ವತಂತ್ರರಾಗಿ ಬದುಕಲು ಬಿಡುತ್ತಿದ್ದೇವಾ? ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರವೇ ಹೆಚ್ಚಾಗಿ ಕೇಳಿ ಬರುತ್ತದೆ. ನಾವೇನು ಆಗಿಲ್ಲವೋ ಅದನ್ನು ಅವರಲ್ಲಿ ಕಾಣಲು ಪ್ರಯತ್ನಿಸುತ್ತೇವೆ. ಹಾಗೆ ಮಾಡಲು ಶತಾಯಗತಾಯ ಪ್ರಯತ್ನಿಸುತ್ತೇವೆ. ಹೀಗಾಗಿ ಮಕ್ಕಳು ಹಿಂದಿನವರಂತೆ ಮಾನಸಿಕವಾಗಿ ಆರೋಗ್ಯವಾಗಿಲ್ಲ. ಸದಾ ಓದಿನ ಗುಂಗು, ಭಯದಲ್ಲೇ ಕಾಲ ಕಳೆಯುತ್ತಿರುತ್ತವೆ.
ಆಗಲೇ ನಮ್ಮಲ್ಲಿ ಹೆಚ್ಚಿನವರಿಗೆ ಆಸೆಗಳು ಹೆಚ್ಚಾಗುತ್ತವೆ. ಕೂಡಿಡುವ ಚಿಂತೆ, ಹೆಂಡತಿ ಮಕ್ಕಳಿಗೆ ಒಡವೆ ಮಾಡಿಸುವ ಚಿಂತೆ. ಹೀಗೆ ಇದು ಮುಂದುವರೆಯುತ್ತದೆ. ಇದು ಪ್ರತಿಯೊಬ್ಬ ಮನುಷ್ಯನ ಸಹಜ ಆಸೆಯೇ. ಹಾಗೆಂದು ನ್ಯಾಯ ಮಾರ್ಗ ಬಿಟ್ಟು ಅನ್ಯಾಯದ ಹಾದಿಯಲ್ಲಿ ಸಾಗಿ ಒಂದಷ್ಟು ಸಂಪಾದನೆ ಮಾಡಿ ನಾನು ಸತ್ತ ಮೇಲೂ ಮಕ್ಕಳು ಮೊಕ್ಕಳು ಸುಖವಾಗಿ ಇರಲಿ ಎಂದು ಬಯಸುವುದು ದಡ್ಡತನವಾಗಿ ಬಿಡುತ್ತದೆ. ಎಲ್ಲವನ್ನೂ ನಾವೇ ಮಾಡಿಡುವ ಹುಚ್ಚುತನ, ಮತ್ತು ತಾನು ಹೇಳಿದಂತೆ ಅವರು ಇರಬೇಕೆನ್ನುವ ಹಠ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮಲ್ಲೊಂದು ಮನೋಭಾವವಿದೆ. ನಾವು ಕಷ್ಟಪಟ್ಟಿದ್ದೇ ಸಾಕು. ನಮ್ಮ ಮಕ್ಕಳು ಕಷ್ಟಪಡಬಾರದು ಎಂಬುದು. ಇದು ಒಂದು ಲೆಕ್ಕದಲ್ಲಿ ನಿಜ ಎನ್ನುವುದಾದರೂ ನಾವು ನಮ್ಮ ಮಕ್ಕಳಿಗೆ ಕಷ್ಟದ ಅರಿವು ಮಾಡದೆ ಹೋದರೆ ಅವರಿಗೆ ನಿಜವಾದ ಬದುಕಿನ ಅರ್ಥವಾಗುವುದು ಹೇಗೆ? ಇಂತಹ ಮನೋಭಾವದಿಂದಲೇ ಮಕ್ಕಳು ಚಿಕ್ಕಪುಟ್ಟ ವಿಚಾರಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಬಂದು ನಿಂತುಬಿಟ್ಟಿವೆ.
ನಮ್ಮ ಮಕ್ಕಳಿಗೆ ಸಂಪಾದನೆಯ ಹಾದಿಯನ್ನು ಹೇಳಿಕೊಡುತ್ತಿದ್ದೇವೆ. ಸಂಪಾದನೆ ಮಾಡಿ ಒಂದಷ್ಟು ಹಣ ಕೂಡಿಟ್ಟುಕೊಂಡರೆ ನೆಮ್ಮದಿಯಾಗಿ ಬದುಕಬಹುದು ಎಂಬುದು ನಮ್ಮ ಕಲ್ಪನೆ. ಹಾಗಾಗಿಯೇ ಏನು ಓದಿದರೆ ಯಾವ ಕೆಲಸ ಸಿಗುತ್ತೆ? ಎಷ್ಟು ಸಂಪಾದಿಸಬಹುದು ಎಂಬ ಲೆಕ್ಕಚಾರದಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ಓದಿಸುತ್ತಿದ್ದೇವೆ. ಓದು ಮುಗಿದ ತಕ್ಷಣ ಅವರು ಸಂಪಾದನೆಯ ದಾರಿ ಹಿಡಿದು ಕೈತುಂಬಾ ಹಣವನ್ನು ಸಂಪಾದಿಸುತ್ತಾರೆ. ಹಣ ಹೆಚ್ಚಾದಂತೆ ಅದನ್ನು ಖರ್ಚು ಮಾಡುವ ಮಾರ್ಗವನ್ನು ಹುಡುಕುತ್ತಾರೆ. ಇವತ್ತು ನಾವು ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದ್ದೇನೆಂದರೆ ನಾವು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸುಸಂಸ್ಕೃತ ಬದುಕಿಗೆ ಬೇಕಾದ ಗುಣಗಳನ್ನು ಕಲಿಸುತ್ತಿದ್ದೇವೆಯೇ? ಬಹಳಷ್ಟು ಹೆತ್ತವರಿಗೆ ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲದಂತೆ ಬದುಕಬೇಕೆಂಬ ಹುಚ್ಚು ಬಯಕೆಯಿದೆ. ಹಾಗಾಗಿ ಅವರು ಮಕ್ಕಳು ಕೇಳಿದ್ದನ್ನೆಲ್ಲಾ ಕೊಡುತ್ತಾ ಹೋಗುತ್ತಾರೆ. ನಾವಂತೂ ಏನೂ ಮಾಡಿಲ್ಲ ಮಕ್ಕಳಾದರೂ ಮಾಡಲಿ ಎಂಬ ಮನೋಭಾವ ಅವರದ್ದಾಗಿರುತ್ತದೆ.
ನಮ್ಮ ಕುಟುಂಬಗಳು ಕಿರಿದಾಗುತ್ತಿವೆ. ಅಕ್ಕ ತಂಗಿ ಅಣ್ಣ ತಮ್ಮ ಹೀಗೆ ಎಲ್ಲರೊಂದಿಗೆ ಆಟವಾಡುತ್ತಾ ಕೂಡಿ ಬೆಳೆಯುತ್ತಿದ್ದ ಕುಟುಂಬ ಚಿಕ್ಕದಾಗುತ್ತಿದೆ. ದೊಡ್ಡ ಕುಟುಂಬದಿಂದ ಹೊರಬಂದು ಬದುಕು ಕಟ್ಟಿಕೊಂಡು ಗಂಡ, ಹೆಂಡತಿ, ಮಗುಗೆ ಸೀಮಿತವಾಗುತ್ತಿದೆ. ಒಂಟಿಯಾಗಿ ಬೆಳೆಯುವ ಮಗುವಿಗೆ ಸಂಬಂಧದ ಅರಿವಿಲ್ಲ. ಅಣ್ಣ, ಅಕ್ಕ, ತಮ್ಮ, ತಂಗಿ ಇದರ ಬಗ್ಗೆ ಗೊತ್ತೇ ಇಲ್ಲ. ಇದು ಇವತ್ತು ನಡೆಯುತ್ತಿರುವ ಹಲವು ಅನಾಚಾರಗಳಿಗೆ ಕಾರಣವಾಗುತ್ತಿದೆ. ನಮ್ಮ ಮಕ್ಕಳನ್ನು ಬೇರೆಯವರೊಂದಿಗೆ ಬೆರೆಯಲು ಬಿಡುತ್ತಿಲ್ಲ ಓದು, ಎಂದು ಒತ್ತಡ ತರುತ್ತಾ ಬಂಧನದಲ್ಲೇ ಸಿಲುಕಿಸುತ್ತಿದ್ದೇವೆ. ನಾವು ಹೇಗೆ ಬದುಕಿದ್ದೇವೆ ಹಾಗೆಯೇ ಅವರು ಕೂಡ ಸ್ವತಂತ್ರರಾಗಿ ಬದುಕಲು ಅವರ ಬದುಕನ್ನು ಅವರೇ ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಆದರೆ ನಾವು ಹಾಗೆ ಬದುಕಲು ಅವಕಾಶವೇ ನೀಡುತ್ತಿಲ್ಲ ಅದೇ ದುರಂತವಾಗಿದೆ. ಇದರ ಪರಿಣಾಮಗಳು ಕಣ್ಣಮುಂದೆ ಇದ್ದರೂ ನಾವು ಕಲಿತುಕೊಳ್ಳುತ್ತಿಲ್ಲ.