ಮಲೆನಾಡಿನ ಹೆಚ್ಚಿನ ಮನೆಗಳ ಹಿತ್ತಲಿನಲ್ಲಿ ಕಸ್ತೂರಿ ಅರಿಶಿನದ ಗಿಡ ಇದ್ದೇ ಇರುತ್ತದೆ. ಇದನ್ನು ಇಲ್ಲಿನವರು ವಾಣಿಜ್ಯ ಉದ್ದೇಶಕ್ಕೆ ಬೆಳೆಯದಿದ್ದರೂ ತಮ್ಮ ಉಪಯೋಗಕ್ಕೆ ಆಗುತ್ತದೆ ಎಂಬ ಕಾರಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ.
ಬಹಳಷ್ಟು ಮನೆ ಮದ್ದುಗಳಲ್ಲಿ ಬಳಕೆಯಾಗುವುದರಿಂದ ಗಿಡದ ಬುಡದಿಂದ ಅಗೆದು ಅರಿಶಿಣ ತಂದು ಉಪಯೋಗಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗೆನೋಡಿದರೆ ದೇಹದ ಆರೋಗ್ಯ ಮತ್ತು ಚರ್ಮದ ರಕ್ಷಣೆ ಹಾಗೂ ಸೌಂದರ್ಯ ಕಾಪಾಡುವುದರಲ್ಲಿ ಇದರ ಮುಂದೆ ಎಲ್ಲ ಸೌಂದರ್ಯ ವರ್ಧಕಗಳು ಗೌಣವಾಗಿ ಬಿಡುತ್ತವೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ವಿವಿಧ ನಮೂನೆಯ ಸೌಂದರ್ಯ ವರ್ಧಕಗಳು ಬಂದಿವೆ. ಮೊದಲೆಲ್ಲ ಸೌಂದರ್ಯ ವರ್ಧಕವಾಗಿ ಮನೆಯ ಸುತ್ತ ಸಿಗುತ್ತಿದ್ದ ಗಿಡಮೂಲಿಕೆಗಳನ್ನೇ ಮಹಿಳೆಯರು ಬಳಸುತ್ತಿದ್ದರು. ಆಗ ಹೆಚ್ಚಾಗಿ ಬಳಕೆಯಾಗುತ್ತಿದ್ದದ್ದೇ ಕಸ್ತೂರಿ ಅರಿಶಿಣವಾಗಿದೆ.
ಮದುವೆ ಶುಭ ಸಮಾರಂಭದಲ್ಲಿ ಅರಿಶಿಣಕ್ಕೆ ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲ ವಧು-ವರರನ್ನು ಇಂದಿಗೂ ಅರಿಶಿಣ ಎಣ್ಣೆ ಹಚ್ಚಿ ಸ್ನಾನ ಮಾಡಿಸುವ ಸಂಪ್ರದಾಯವಿದೆ ಕಾರಣ ವಿವಾಹದ ಸಂದರ್ಭ ಕಾಂತಿಯುತವಾಗಿ ಕಾಣಲಿ ಎಂಬ ಉದ್ದೇಶ ಇದಾಗಿದೆ. ಕಸ್ತೂರಿ ಅರಿಶಿಣವನ್ನು ಉಪಯೋಗಿಸುವುದರ ಮೂಲಕ ಯಾವ ರೀತಿಯ ಉಪಯೋಗ ಪಡೆಯಬಹುದು ಮತ್ತು ಅದು ಸೌಂದರ್ಯ ವರ್ಧಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಯುರ್ವೇದದಲ್ಲಿ ಈ ಹಿಂದೆಯೇ ವಿವರಿಸಲಾಗಿದೆ.
ಕಸ್ತೂರಿ ಅರಿಶಿಣವನ್ನು ವಾರಕ್ಕೆ ನಾಲ್ಕು ಬಾರಿ ಮುಖಕ್ಕೆ ಹಚ್ಚಿದರೆ ಮುಖದ ಕಲೆಗಳನ್ನು ಮಾಯವಾಗುತ್ತವೆ. ಕಸ್ತೂರಿ ಅರಿಶಿನದ ತುಂಡನ್ನು ಹಾಲಿನ ಕೆನೆಯಲ್ಲಿ ತೇಯ್ದು ಮುಖಕ್ಕೆ ಪ್ಯಾಕ್ ಹಾಕಿದ್ದರೆ ಮುಖದಲ್ಲಿನ ಮೊಡವೆ ಕಜ್ಜಿಗಳು ಗುಣವಾಗಿ ಮುಖ ಕಾಂತಿಯುವಾಗುತ್ತದೆ. ಸೂಕ್ಷ್ಮ ಚರ್ಮದವರು ಹಾಲು ಅಥವಾ ಜೇನಿನೊಂದಿಗೆ ಕಸ್ತೂರಿ ಅರಿಶಿನ ಬೆರೆಸಿ ಉಪಯೋಗಿಸಬಹುದು. ಎಣ್ಣೆ ಚರ್ಮದವರು ಪನ್ನಿರೀನೊಂದಿಗೆ ಅಥವಾ ಗುಲಾಬಿ ಎಸಳಿನೊಂದಿಗೆ ಅರೆದು ಉಪಯೋಗಿಸಬಹುದು. ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಮೇಲೆ ಗುರುತುಗಳು, ಕಲೆಗಳು ಮೂಡುವುದು ಸಾಮಾನ್ಯ. ಆಗ ಹಾಲಿನೊಂದಿಗೆ ಕಸ್ತೂರಿ ಅರಿಶಿನ ಅರೆದು ಹೊಟ್ಟೆಗೆ ಹಚ್ಚಿ ಸ್ನಾನದ ಮೊದಲು ತೆಂಗಿನ ಎಣ್ಣೆಯನ್ನು ಹಚ್ಚುತ್ತಿದ್ದರೆ ಈ ಗುರುತುಗಳು ಮಾಯವಾಗುತ್ತವೆ. ಅರಿಶಿಣವನ್ನು ಮುಖ ಕೈ ಕತ್ತು ಮುಂತಾದ ಕಡೆ ಹಚ್ಚುತ್ತಾ ಬಂದರೆ ಅನಗತ್ಯ ಕೂದಲು ಉದುರುತ್ತವೆ. ಗುಲಾಬಿ ದಳಗಳು ಮತ್ತು ಕಸ್ತೂರಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಅತ್ಯುತ್ತಮವಾದ ಸ್ನಾನದ ಪುಡಿಯನ್ನಾಗಿ ಬಳಸಬಹುದು. ಸಾಬೂನಿನ ಬದಲಾಗಿ ಇದನ್ನೇ ಬಳಸಿದರೆ ಅನೇಕ ಬಗೆಯ ಚರ್ಮರೋಗಗಳು ಗುಣವಾಗುತ್ತವೆ. ಜತೆಗೆ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ನಾಶ ಮಾಡದೆ ರಕ್ಷಿಸಿ ಚರ್ಮವನ್ನು ಸುಸ್ಥಿತಿಯಲ್ಲಡುತ್ತದೆ.
ಸೊಳ್ಳೆ ಮುಂತಾದ ಕೀಟಗಳು ಕಚ್ಚಿದಾಗ ಉಂಟಾಗುವ ದದ್ದು ಬಾವುಗಳು ಕಸ್ತೂರಿ ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಬಂಗು, ಚಿಬ್ಬು, ಇತ್ಯಾದಿ ಕಲೆಗಳ ನಿವಾರಣೆಗೆ ಹಾಲಿನ ಕೆನೆ, ಅಥವಾ ನಿಂಬೆ ರಸದಲ್ಲಿ ಕಸ್ತೂರಿ ಅರಿಶಿನವನ್ನು ತೇಯ್ದು ಲೇಪಿಸಿ ಎರಡು ಗಂಟೆಗಳ ಕಾಲ ಬಿಟ್ಟು ಬಿಸಿ ನೀರಿನಿಂದ ಕಡಲೆ ಹಿಟ್ಟು ಬಳಸಿ ತೊಳೆದರೆ ಮಾಯವಾಗುತ್ತದೆ.
ಕಸ್ತೂರಿ ಅರಿಶಿನವನ್ನು ಮನೆ ಬಳಿ ಒಂದಿಷ್ಟು ಜಾಗವಿದ್ದರೆ ಯಾರೂ ಬೇಕಾದರೂ ಬೆಳೆಸಿಕೊಂಡು ಉಪಯೋಗಿಸಿಕೊಳ್ಳಬಹುದಾಗಿದೆ. ಅಂಗಡಿಗಳಲ್ಲಿ ಒಣಗಿಸಿದ ಕಸ್ತೂರಿ ಅರಿಶಿನದ ಕೊಂಬು ಅಥವಾ ಪುಡಿ ಸಿಗುತ್ತದೆಯಾದರೂ ತಾಜಾ ಕಸ್ತೂರಿ ಅರಿಶಿಣವನ್ನು ಬಳಸುವುದು ಉತ್ತಮ.