ನಾವು ಮಾಡುತ್ತಿರುವ ಸಂಪಾದನೆಯಲ್ಲಿ ದಿನಕಳೆಯುವುದೇ ಕಷ್ಟವಾಗಿರುವಾಗ ಮೋಜು ಮಸ್ತಿಗೆ ಮುಂದಾದರೆ ಏನಾಗಬಹುದು? ಕಷ್ಟ ಪಟ್ಟು ದುಡಿದ ಹಣವನ್ನು ದ್ವಿಗುಣಗೊಳಿಸುವ ಸಲುವಾಗಿ ಸುಲಭ ಮಾರ್ಗದಲ್ಲಿ ಮತ್ತಷ್ಟು ಸಂಪಾದಿಸುವ ಭ್ರಮೆಯಲ್ಲಿ ಜೂಜುಗೆ ಕಟ್ಟಿ ಬರಿ ಕೈಯ್ಯಲ್ಲಿ ಹಿಂತಿರುಗುವವರು ಎಷ್ಟೊಂದು ಜನರಿಲ್ಲ. ಮಾಡಿದ ಸಂಪಾದನೆಯನ್ನು ಹೆಂಡಕ್ಕೆ ಹಾಕಿ ಹೆಂಡತಿ ಮಕ್ಕಳನ್ನು ಉಪವಾಸ ಬೀಳಿಸುವವರೂ ಇದ್ದಾರೆ. ನಾವೆಲ್ಲರೂ ಹಣ ಮತ್ತು ಅದರಿಂದ ಪಡೆಯಬಹುದಾದ ಐಷಾರಾಮಿ ಜೀವನದ ಬಗ್ಗೆ ಚಿಂತಿಸುತ್ತೇವೆಯೇ ಹೊರತು ನಮ್ಮ ಇತಿಮಿತಿಯಲ್ಲಿ ಒಂದೊಳ್ಳೆ ಬದುಕನ್ನು ಕಟ್ಟಿಕೊಳ್ಳಲು ಮುಂದಾಗುವುದೇ ಇಲ್ಲ. ಹೀಗಾಗಿಯೇ ನಾವು ಅನಗತ್ಯ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುತ್ತೇವೆ. ನೆಮ್ಮದಿ ಕಳೆದುಕೊಂಡು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತೇವೆ. ಸದಾ ಭಯ ಆತಂಕದಲ್ಲೇ ದಿನ ಕಳೆಯುತ್ತೇವೆ.
ನಮಗೆ ನಮ್ಮ ಮುಂದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವವರು ಕಾಣುತ್ತಾರೆ. ಅವರ ಏಳಿಗೆ ನಮ್ಮ ಮನಸ್ಸನ್ನು ಕೆಡಿಸುತ್ತದೆ. ಅವನು ಚೆನ್ನಾಗಿರಲಿ ಹಾಗೆಂಬ ಉದಾರ ಭಾವ ನಮ್ಮಲ್ಲಿ ಇಲ್ಲದಿರುವುದರಿಂದಾಗಿ ಆತನ ಏಳಿಗೆ ನಮಗೆ ಸಹಿಸದಾಗುತ್ತದೆ. ನಾವು ನಮ್ಮ ಬಗ್ಗೆ ಚಿಂತಿಸದೆ ಆತನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮ ಕಣ್ಣ ಮುಂದೆಯೇ ಆತ ಏಳಿಗೆಯಾಗಿ ಬಿಟ್ಟನಲ್ಲ ಎಂಬ ಚಿಂತೆ ನಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.
ಮತ್ತೊಬ್ಬರ ಏಳಿಗೆಯನ್ನು ಕಂಡು ಖುಷಿಪಡುವ ಮತ್ತು ಪ್ರೋತ್ಸಾಹಿಸುವ ಉದಾರ ಭಾವ ನಮ್ಮಲ್ಲಿ ಬೆಳೆಸಿಕೊಳ್ಳದೆ ಹೋದರೆ ಖಂಡಿತಾ ಉದ್ದಾರವಾಗಲು ಸಾಧ್ಯವಿಲ್ಲ. ಇನ್ನೊಬ್ಬರ ಯಶಸ್ಸು, ಅಭಿವೃದ್ಧಿಯನ್ನು ದೂರದಿಂದ ನೋಡಿ ಸಂತೋಷ ಪಡುವ ಹತ್ತಿರವಿದ್ದಾಗ ಬೆನ್ನುತಟ್ಟಿ ಇನ್ನಷ್ಟು ಅವರನ್ನು ಹುರಿದುಂಬಿಸುವ ಪ್ರವೃತ್ತಿಯನ್ನು ನಾವು ಬೆಳೆಯಿಸಿಕೊಳ್ಳದೆ ಹೋದರೆ ಖಂಡಿತಾ ನಾವು ಒಳ್ಳೆಯ ಮನುಷ್ಯರಾಗಿ ಬದುಕಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಮಾನಸಿಕವಾಗಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲಾಗುವುದಿಲ್ಲ.
ಮತ್ತೊಬ್ಬನ ಏಳಿಗೆಯನ್ನು ನೋಡಿ ಅವನಂತೆ ಬೆಳೆಯಬೇಕು. ಅವನು ಬದುಕಿನಲ್ಲಿ ಅಭಿವೃದ್ಧಿಯಾಗಬೇಕಾದರೆ ಎಷ್ಟೆಲ್ಲಾ ಶ್ರಮಪಟ್ಟಿದ್ದಾನೆ ಎಂಬುವುದನ್ನು ಅರಿತು ಅದರಂತೆ ಬದುಕಲು ಯತ್ನಿಸಬೇಕು. ಆದರೆ ನಾವು ಯಾವತ್ತೂ ಆ ರೀತಿ ಮಾಡುವುದಿಲ್ಲ. ಯಶಸ್ಸು ಕಂಡ ವ್ಯಕ್ತಿಯನ್ನು ತುಳಿದು ಮೇಲೆ ಬರಲು ಬೇಕಾದ ಕುತಂತ್ರಗಳನ್ನು ಮಾಡುತ್ತೇವೆ. ಇದು ನಮ್ಮಲ್ಲಿರುವ ಕೆಟ್ಟಗುಣ. ಇದನ್ನು ಮನಸ್ಸಿನಿಂದ ತೆಗೆದು ಹಾಕದೆ ಹೋದರೆ ಮುಂದೆ ಬದುಕಿನುದ್ದಕ್ಕೂ ನಮ್ಮ ಅಭಿವೃದ್ಧಿಗೆ ಮಾರಕವಾಗಿರುವುದರಲ್ಲಿ ಸಂಶಯವಿಲ್ಲ. ಇಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಗಳು ಶ್ರಮಪಡಲು ತಯಾರಿರುವುದಿಲ್ಲ. ಆದರೆ ಯಶಸ್ಸನ್ನು ಬಯಸುತ್ತಾರೆ. ಶ್ರಮಪಡದ ಮೇಲೆ ಯಶಸ್ಸು ತಾನೆ ಹೇಗೆ ಸಿಕ್ಕಿಯಾತು? ಆದರೆ ಆ ಯಶಸ್ಸನ್ನು ಪಡೆಯಲು ಅವರು ಅನ್ಯ ಮಾರ್ಗ ಹಿಡಿಯುತ್ತಾರೆ. ಇಂತಹವರು ಮುಂದೊಂದು ದಿನ ಸಮಾಜಕ್ಕೆ ಮಾರಕ ವಾಗುವುದರಲ್ಲಿ ಸಂಶಯವಿಲ್ಲ.
ಇತ್ತೀಚಿಗಿನ ದಿನಗಳಲ್ಲಿ ಇರುವುದರಲ್ಲೇ ತೃಪ್ತಿಪಡುವ ಬದುಕು ಯಾರಿಗೂ ಬೇಕಾಗಿಲ್ಲ. ಮತ್ತೊಬ್ಬರನ್ನು ಕಸಿದು ತಾವು ಬದುಕುವ ಮನೋಸ್ಥಿತಿಯಿಂದಾಗಿ ಮೋಸ, ವಂಚನೆಗಳು ಹೆಚ್ಚಾಗುತ್ತಿವೆ. ಕೇವಲ ತಮ್ಮ ಖರ್ಚು ವೆಚ್ಚಕ್ಕೆ ಆದರೆ ಸಾಕೆಂಬ ಸಮಾಧಾನ ನಮ್ಮಲ್ಲಿಲ್ಲ. ಭವಿಷ್ಯದ ಬಗ್ಗೆಯೂ ಚಿಂತಿಸುವ ಮತ್ತು ಮುಂದಿನ ತಲೆ ಮಾರಿಗೆ ಕೂಡಿಡುವ ಆತುರ. ಇದರಿಂದಾಗಿ ನಮ್ಮನ್ನು ಅತೃಪ್ತಿ ಕಾಡುತ್ತಲೇ ಇರುತ್ತದೆ.
ಬದುಕು ನಶ್ವರ ಇಲ್ಲಿ ಎಷ್ಟೇ ಸಂಪಾದನೆ ಮಾಡಿಟ್ಟರೂ ಒಂದಲ್ಲ ಒಂದು ದಿನ ಎಲ್ಲವನ್ನೂ ಬಿಟ್ಟು ಬರಿಕೈಯ್ಯಲ್ಲಿ ಹೋಗಲೇ ಬೇಕು. ಇದು ನಮ್ಮೆಲ್ಲರಿಗೆ ಗೊತ್ತಿರುವ ವಿಚಾರ. ಆದರೆ ನಾವ್ಯಾರು ಆ ಬಗ್ಗೆ ಆಲೋಚಿಸುವುದೇ ಇಲ್ಲ. ಇಲ್ಲಿಯೇ ಶಾಶ್ವತವಾಗಿರುತ್ತೇವೆ ಎಂಬ ನಂಬಿಕೆಯಲ್ಲೇ ಬದುಕುತ್ತಿದ್ದೇವೆ. ಧರ್ಮದ ಹಾದಿಯಲ್ಲಿ ಕಲ್ಲು ಮುಳ್ಳುಗಳು ಸಹಜ ಅದರ ಮೇಲೆ ಸಾಗುವುದು ಕಷ್ಟವಾಗಬಹುದು. ಆದರೆ ಮುಂದೆ ಒಂದು ನೆಮ್ಮದಿಯ ಮತ್ತು ಸುಖದ ಹಾದಿ ಇದ್ದೇ ಇದೆ ಎಂಬ ಸತ್ಯವನ್ನು ಮರೆಯಬಾರದು. ಅಧರ್ಮದ ಹಾದಿ ಹಣ, ಸಂಪತ್ತು ಎಲ್ಲವನ್ನು ತಕ್ಷಣಕ್ಕೆ ತಂದುಕೊಡಬಹುದು. ಆದರೆ ಮಾಡಿದ ಕರ್ಮಕ್ಕೆ ಮುಂದೆ ಕಂದಾಯ ಕಟ್ಟಲೇ ಬೇಕು. ನಮ್ಮ ಮುಂದೆ ಅಕ್ರಮವಾಗಿ ಸಂಪಾದನೆ ಮಾಡಿ ಸಂಪತ್ತನ್ನು ಕೂಡಿಟ್ಟುಕೊಂಡವರನ್ನು ನೋಡಿದರೆ ಅವರೆಲ್ಲ ಸುಖವಾಗಿ ಇದ್ದಾರಾ ಎಂಬುವುದು ಮನದಟ್ಟಾಗಿ ಬಿಡುತ್ತದೆ. ಆಮೇಲೆ ನಿಮ್ಮನ್ನೇ ನೀವು ಕೇಳಿಕೊಳ್ಳಿ ನೆಮ್ಮದಿಯಿಲ್ಲದ ಸಂಪತ್ತು ತುಂಬಿದ ವೈಭವದ ಬದುಕು ಬೇಕಾ?