ಬರದ ಹಿನ್ನಲೆಯಲ್ಲಿ ಈ ಬಾರಿ ಬೇಸಿಗೆ ಬರುತ್ತಿದ್ದಂತೆಯೇ ನೀರಿಗೆ ತೊಂದರೆಯುಂಟಾಗಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರನ್ನು ಸೇವಿಸುವ ಪರಿಸ್ಥಿತಿ ಬಂದೊದಗಿದೆ. ಹೊಳೆ, ಕೆರೆಗಳಿಂದ ನೀರನ್ನು ತಂದು ಬಹುತೇಕ ಮಂದಿ ಸೇವಿಸುತ್ತಿರುವುದರಿಂದ ಅದರಲ್ಲಿರುವ ಬ್ಯಾಕ್ಟಿರಿಯಾಗಳಿಂದ ಈಗಾಗಲೇ ಹಲವೆಡೆ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳತೊಡಗಿವೆ. ಕೊಳಚೆ, ತ್ಯಾಜ್ಯ ನೀರನ್ನು ಕೆಲವೆಡೆ ನದಿಗೆ ಬಿಡುತ್ತಿದ್ದು, ಅದನ್ನು ಶುದ್ದೀಕರಿಸದೆ ಕುಡಿಯುತ್ತಿರುವುದರಿಂದ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ.
ಬಹಳಷ್ಟು ಕಡೆಗಳಲ್ಲಿ ಶುಚಿತ್ವದ ಕೊರತೆಯಿಂದಾಗಿ ಸಾರ್ವಜನಿಕ ನೀರಿನ ಟ್ಯಾಂಕ್, ಬೋರ್ವೆಲ್, ಬಾವಿಗಳ ಬಳಿ ಕೊಳಚೆ ನೀರುಗಳು ನಿಲ್ಲುತ್ತಿದ್ದು ಇಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟಿರಿಯಾಗಳು ಕಾಯಿಲೆಗಳನ್ನು ಹರಡುತ್ತಿವೆ. ಕೆರೆ, ಬಾವಿ, ನದಿಗಳಿಂದ ತಂದ ನೀರನ್ನು ಚೆನ್ನಾಗಿ ಕುದಿಸಿ ಉಪಯೋಗಿಸದೆ ಕೆಲವರು ನೇರವಾಗಿ ಕುಡಿಯುತ್ತಿರುವುದರಿಂದಲೂ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಕಲುಷಿತ ನೀರಿನಿಂದಾಗಿ ಇದೀಗ ಅಲ್ಲಲ್ಲಿ ಕಾಲರಾ, ಕರಳುಬೇನೆ(ವಾಂತಿ ಬೇಧಿ), ಟೈಫಾಯ್ಡ್ (ವಿಷಮಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮೊದಲಾದ ರೋಗಗಳು ಹರಡುತ್ತಿದ್ದು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಹೆಚ್ಚಿನ ಕಾಯಿಲೆಗಳು ಸೋಂಕುಗಳಾಗಿದ್ದು, ಅವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದಾಗಿ ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಅಗತ್ಯವಾಗಿದೆ.
ಸಾಮಾನ್ಯವಾಗಿ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕರ್ ಸುತ್ತಮುತ್ತ ಬಳಸಿದ ನೀರು ನಿಲ್ಲುವುದರಿಂದ, ಕೆರೆ ಬಳಿ ಮಲ ವಿಸರ್ಜನೆ ಮಾಡುವುದು, ದನಕರುಗಳನ್ನು ತೊಳೆಯುವುದು, ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವುದು, ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್ನಿಂದ ಸರಬರಾಜಾಗುವ ಪೈಪುಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸದಿರುವುದರಿಂದ, ನೀರು ಪೂರೈಕೆ ನಲ್ಲಿಗಳು ತಗ್ಗಿನಲ್ಲಿದ್ದಾಗ ಅದರಲ್ಲಿ ನೀರು ನಿಂತು ಕಲುಷಿತಗೊಂಡು ನೀರು ಪೂರೈಕೆ ಪೈಪುಗಳಲ್ಲಿ ಪುನಃ ಸೇರುವುದು. ಮನೆಯಲ್ಲಿ ಸಂಗ್ರಹಿಸಿದ ನೀರು ಕಲುಷಿತಗೊಳ್ಳುವುದರಿಂದಲೂ ವಿವಿಧ ಕಾಯಿಲೆಗಳು ಬರುವ ಸಾಧ್ಯತೆಯಿದೆ.ಸಾಂಕ್ರಾಮಿಕ ಕಾಯಿಲೆ ಯಾರೋ ಒಬ್ಬರಿಗೆ ಬಂದು ಹೋಗುವಂತಹದಲ್ಲ ಆದ್ದರಿಂದ ಪ್ರತಿಯೊಬ್ಬರೂ ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಗ್ರಾಮದಲ್ಲಿ ಅಥವಾ ಬಡಾವಣೆಗಳಲ್ಲಿ ಒಬ್ಬರಿಗೆ ಯಾವುದಾದರೂ ರೋಗ ಕಾಣಿಸಿಕೊಂಡರೆ ಅದು ಇತರರಿಗೂ ಹರಡುವ ಸಾಧ್ಯತೆಯಿರುವುದರಿಂದ ಎಲ್ಲರೂ ಇದರತ್ತ ಗಮನಹರಿಸಿ ಕಾಯಿಲೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
ತಮ್ಮ ಮನೆ ಮತ್ತು ಬೀದಿಯಲ್ಲಿ ಶುಚಿತ್ವಕ್ಕೆ ಮೊದಲು ಆದ್ಯತೆ ನೀಡಬೇಕಾಗಿದೆ. ಕುಡಿಯುವ ನೀರಿನ ಸ್ಥಳಗಳಲ್ಲಿ ತ್ಯಾಜ್ಯ, ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಡೆಗಟ್ಟಬೇಕು, ಕುಡಿಯುವ ನೀರಿನ ಸ್ಥಳಗಳಲ್ಲಿ ದನಕರುಗಳನ್ನು, ಬಟ್ಟೆ ಪಾತ್ರೆ ತೊಳೆಯುವುದನ್ನು ತಡೆಗಟ್ಟಬೇಕು. ಒಂದು ವೇಳೆ ತೊಳೆದರೂ ಅದರ ತ್ಯಾಜ್ಯ ನೀರು ಕುಡಿಯುವ ನೀರಿನೊಂದಿಗೆ ಸೇರ್ಪಡೆಗೊಳ್ಳದಂತೆ ನೋಡಿಕೊಳ್ಳಬೇಕು. ನೀರಿನ ಪೈಪುಗಳು ಸೋರಿಕೆಯಿದ್ದಲ್ಲಿ ಕೂಡಲೇ ದುರಸ್ತಿಪಡಿಸಬೇಕು. ಮನೆಯಲ್ಲಿರುವ ಮತ್ತು ಬೀದಿಗಳ ಟ್ಯಾಂಕ್ ಗಳನ್ನು ನಿಯಮಿತವಾಗಿ ಪ್ರತಿ ಹತ್ತು ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಸಾರ್ವಜನಿಕವಾಗಿ ಸರಬರಾಜು ಮಾಡುವ ನೀರನ್ನು ಕ್ಲೋರಿನ್ ನಿಂದ ಶುದ್ಧಗೊಳಿಸುವುದು. ನೀರು ಪೂರೈಕೆ ಮಾಡುವ ನಲ್ಲಿಗಳು ಎತ್ತರದ ಸ್ಥಳದಲ್ಲಿ ಇರುವಂತೆ ಹಾಗೂ ಮುಚ್ಚಳವಿರುವ ನಲ್ಲಿಗಳನ್ನು ಉಪಯೋಗಿಸುವಂತೆ ಕ್ರಮ ಕೈಗೊಳ್ಳುವುದು, ಇನ್ನು ಮನೆಯಲ್ಲಿ ಸಂಗ್ರಹಿಸಿದ ನೀರು ಮಕ್ಕಳ ಕೈಗೆ ಮತ್ತು ಸಾಕು ಪ್ರಾಣಿಗಳಿಗೆ ಎಟುಕದಂತೆ ಎತ್ತರದಲ್ಲಿರಿಸುವುದು, ನೀರು ತೆಗೆದುಕೊಳ್ಳಲು ಹಿಡಿಕೆ ಇರುವ ಬಟ್ಟಲನ್ನು ಉಪಯೋಗಿಸುವುದು ಅಗತ್ಯವಾಗಿದೆ.
ಇನ್ನು ಸ್ಥಳೀಯ ಗ್ರಾಪಂ, ಪಪಂ, ನಗರಸಭೆ, ಪಾಲಿಕೆಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಕುಡಿಯುವ ನೀರಿನ ಮೂಲಗಳನ್ನು ನಿಯಮಿತವಾಗಿ ಕ್ಲೋರಿನೇಷನ್ ಮಾಡಿಸಿ, ಶುದ್ಧವಾದ ನೀರನ್ನು ಪೂರೈಸುವುದು. ಕಾಲಕಾಲಕ್ಕೆ (ಹತ್ತು ದಿನಗಳಿಗೊಮ್ಮೆ) ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವುದು. ಪಂಚಾಯತ್ ಅನುದಾನದಲ್ಲಿ ಕನಿಷ್ಠ 25 ಕೆ.ಜಿ. ಬ್ಲೀಚಿಂಗ್ ಪುಡಿ ದಾಸ್ತಾನು ಯಾವಾಗಲೂ ಇಟ್ಟುಕೊಳ್ಳುವುದು. ನೀರಿನ ಪೂರೈಕೆ ಪೈಪು ಸೋರಿಕೆಯಿದ್ದಲ್ಲಿ ಪಂಚಾಯಿತಿ ವತಿಯಿಂದ ದುರಸ್ತಿಗೊಳಿಸುವುದು. ಬೋರ್ವೆಲ್ ಸುತ್ತಮುತ್ತಲಿನ 100 ಮೀಟರ್ ಆಸುಪಾಸಿನಲ್ಲಿ ತಿಪ್ಪೆಗುಂಡಿ, ಗೊಬ್ಬರದ ಗುಂಡಿ ಇದ್ದಲ್ಲಿ ಸ್ಥಳಾಂತರಿಸುವುದು, ಚರಂಡಿಯ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು. ಕುಡಿಯುವ ನೀರಿನ ಮಾದರಿಗಳನ್ನು ಶುದ್ಧೀಕರಿಸಿದ ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸುವುದು, ಅಶುದ್ಧ ಎಂದು ಕಂಡು ಬಂದ ನೀರಿನ ಮೂಲಗಳಿಗೆ ಕ್ಲೋರಿನೇಷನ್ ಮಾಡಿಸಿ 15 ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸುವುದು ಅಗತ್ಯವಾಗಿ ಮಾಡಬೇಕಾಗಿದೆ.
ರೋಗ ಹರಡಲು ಕಾರಣವಾದ ನೀರಿನ ಮೂಲವನ್ನು ಮೊದಲ ಪ್ರಕರಣದ ಆಧಾರದ ಮೇಲೆ ಪತ್ತೆ ಹಚ್ಚುವುದು. ಪಂಚಾಯತ್ ವತಿಯಿಂದ ಸುರಕ್ಷಿತ ಕುಡಿಯುವ ನೀರನ್ನು ತಕ್ಷಣ ಒದಗಿಸುವ ಕ್ರಮ ಕೈಗೊಳ್ಳುವುದು. ಕುದಿಸಿ ಆರಿಸಿದ ನೀರನ್ನು ಮತ್ತು ಬಿಸಿಯಾದ ಆಹಾರ ಸೇವಿಸಲು ಸಾರ್ವಜನಿಕರಿಗೆ ಮಾಹಿತಿ ನೀಡುವುದು. ಗ್ರಾಮದಲ್ಲಿನ ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಕ್ಲೋರಿನೇಷನ್ ಮಾಡುವುದು ( ರೆಸಿಡ್ಯುಯಲ್ ಕ್ಲೋರಿನೇಷನ್). ಶುದ್ಧ ಆಹಾರ ತಯಾರಿಕೆ ಮತ್ತು ವೈಯಕ್ತಿಕ ಸ್ವಚ್ಛತಾ ಕ್ರಮಗಳನ್ನು ಪ್ರೋತ್ಸಾಹಿಸಲು ಮಾಹಿತಿ ಶಿಕ್ಷಣ ಚಟುವಟಿಕೆಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ಇದು ಕೇವಲ ಪಂಚಾಯಿತಿಗಳ ಜವಬ್ದಾರಿಯಾಗಿರದೆ ಪ್ರತಿಯೊಬ್ಬರೂ ಆರೋಗ್ಯದ ದೃಷ್ಠಿಯಿಂದ ತಮ್ಮ ವ್ಯಾಪ್ತಿಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ ಕಾಯಿಲೆ ಬರದಂತೆ ತಡೆಯಲು ಮುಂದಾಗಬೇಕಾಗಿದೆ.