ವಾತಾವರಣದ ವೈಪರೀತ್ಯದಿಂದಾಗಿ ಒಂದಲ್ಲ ಒಂದು ರೀತಿಯ ರೋಗಗಳು ಕಾಡತೊಡಗಿದ್ದು, ಇದೀಗ ಇನ್ಫ್ಲ್ಯೂಯೆಂಜಾ-ಎ, ಹೆಚ್1ಎನ್1, ಹೆಚ್3ಎನ್2, ಇನ್ಫ್ಲ್ಯೂಯೆಂಜಾ-ಬಿ ಎಲ್ಲೆಡೆ ಕಂಡುಬರತೊಡಗಿದೆ.
ಉಸಿರಾಟದ ಸೋಂಕು ನಿಮ್ಮನ್ನು ಬಾಧಿಸುತ್ತಿದ್ದರೆ ಅದು ಇನ್ಫ್ಲ್ಯೂಯೆಂಜಾ (Seasonal Influenza) ಆಗಿರಬಹುದು ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ವೈದ್ಯಕೀಯ ತಪಾಸಣೆ ಮಾಡಿಕೊಳ್ಳುವ ಮೂಲಕ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಇನ್ಫ್ಲ್ಯೂಯೆಂಜಾ ಸಣ್ಣ ಮಕ್ಕಳಲ್ಲಿ ಮತ್ತು ಅರವತ್ತೈದು ವರ್ಷ ಮೀರಿದ ವಯಸ್ಕರನ್ನು ಹೆಚ್ಚಾಗಿ ಬಾಧಿಸುತ್ತದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಆದರೆ ಅಪಾಯ ತಪ್ಪಿದಲ್ಲ. ಈಗಾಗಲೇ ರೋಗ ನಿರೋಧಕ ಶಕ್ತಿ ಕುಗ್ಗಿರುವ ಕ್ಯಾನ್ಸರ್, ಶ್ವಾಸಕೋಶದ ಸೋಂಕು, ಹೃದಯ, ಯಕೃತ್, ಮೂತ್ರಪಿಂಡದ ತೊಂದರೆ ಅನುಭವಿಸುತ್ತಿರುವ, ಮಧುಮೇಹದ ರೋಗಿಗಳಲ್ಲಿ ಸೋಂಕಿನ ಸಂಭಾವ್ಯತೆ ಹೆಚ್ಚಾಗಿರುವುದರಿಂದ ಇನ್ಫ್ಲ್ಯೂಯೆಂಜಾ (Seasonal Influenza) ನಿರೋಧಕ ಲಸಿಕೆಯನ್ನು ಪಡೆಯಬಹುದು.
ಈ ಕುರಿತಂತೆ ಮೈಸೂರು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಸುಮ ಅವರು ಇನ್ಫ್ಲ್ಯೂಯೆಂಜಾ ಕುರಿತಂತೆ ಮಾಹಿತಿ ನೀಡಿದ್ದು ಈ ಸೋಂಕಿನ ಬಗ್ಗೆ ಎಚ್ಚರವಾಗಿರುವಂತೆ ಮನವಿ ಮಾಡಿದ್ದಾರೆ.ಕಡಿಮೆ ಜ್ವರ, ಕೆಮ್ಮು, ಗಂಟಲು ನೋವು ಇರುವ ರೋಗಿಗಳು. ಟ್ಯಾಮಿ ಫ್ಲೂ ಔಷಧಿ ಅಗತ್ಯವಿಲ್ಲ. ಜ್ವರ ಕಡಿಮೆಯಾಗದಿದ್ದಲ್ಲಿ 2 ದಿನಗಳ ನಂತರ ಮತ್ತೆ ವೈದ್ಯಕೀಯ ತಪಾಸಣೆಗೊಳಗಾಗುವುದು. ಹೆಚ್1ಎನ್1 ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ರೋಗಿಯು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯುವುದು. ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯುವುದು. ಅಧಿಕ ಜ್ವರ, ಕೆಮ್ಮು, ಗಂಟಲು ನೋವು ಇರುವ ರೋಗಿಗಳು. ವೈದ್ಯರ ಸಲಹೆ ಮೇರೆಗೆ ಟ್ಯಾಮಿ ಫ್ಲೂ ಔಷಧಿ ತೆಗೆದುಕೊಳ್ಳಬೇಕು. ಹೆಚ್1ಎನ್1 ಪರೀಕ್ಷೆಯ ಅವಶ್ಯಕತೆಯಿರುವುದಿಲ್ಲ. ರೋಗಿಯು ಮನೆಯಲ್ಲಿಯೇ ಉಳಿದು ವಿಶ್ರಾಂತಿ ಪಡೆಯುವುದು. ಸಾರ್ವಜನಿಕ ಸ್ಥಳಗಳಿಂದ ದೂರ ಉಳಿಯುವುದು. ವೈದ್ಯರ ಸಲಹೆ ಮೇರೆಗೆ ಟ್ಯಾಮಿ ಫ್ಲೂ ತೆಗೆದುಕೊಳ್ಳುವುದು. ವರ್ಗ ಎ ಮತ್ತು ಬಿಯ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆ ,ಕಡಿಮೆ ರಕ್ತದ ಒತ್ತಡ, ಎದೆ ನೋವು, ಕಫದಲ್ಲಿ ರಕ್ತ ಉಳ್ಳವರು ಆಹಾರ ಸ್ವೀಕರಿಸದಿರುವ ಸಣ್ಣ ಮಕ್ಕಳು ವೈದ್ಯರ ಸಲಹೆ ಮೇರೆಗೆ ಕೂಡಲೇ ಆಸ್ಪತ್ರೆಗೆ ದಾಖಲಾಗುವುದು. Seasonal Influenza ಪರೀಕ್ಷೆಗೆ ಒಳಪಡಬೇಕು. ಟ್ಯಾಮಿ ಫ್ಲೂ ಚಿಕಿತ್ಸೆ ಪಡೆಯಬೇಕಾಗುತ್ತದೆ.
ಫ್ಲೂ ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ. ಆರೋಗ್ಯವಂತ ವ್ಯಕ್ತಿ ಈ ವಸ್ತುಗಳನ್ನು ಮುಟ್ಟಿದ ಅಥವಾ ಉಪಯೋಗಿಸಿದ ನಂತರ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ. ಇದರ ನಿಯಂತ್ರಣಕ್ಕಾಗಿ ಸಾರ್ವಜನಿಕ ಪ್ರದೇಶದಲ್ಲಿ ಇದ್ದು ಬಂದ ನಂತರ ಸ್ವಚ್ಛವಾಗಿ ಸೋಪಿನಿಂದ ಕೈಗಳನ್ನು ತಿಕ್ಕಿ ತೊಳೆಯುವುದು ಅಥವಾ ಆಲ್ಕೋಹಾಲ್ ಯುಕ್ತ ಸ್ವಚ್ಛಕಾರಕಗಳನ್ನು ಬಳಸಿ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.
ರೋಗಲಕ್ಷಣವುಳ್ಳ ವ್ಯಕ್ತಿಗಳಿಂದ ಮಾರುದ್ದದ್ದಷ್ಟು ದೂರವಿರಿ, ರೋಗಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ. ಚಿಕಿತ್ಸೆಗೆ ಸರ್ಕಾರದ ವತಿಯಿಂದ ಟ್ಯಾಮಿಪ್ಲೂ ಔಷಧಿ ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಲಹೆ ಮೇರೆಗೆ ಪಡೆಯಬಹುದು. ವಾತಾವರಣ ಬದಲಾದಾಗಲೆಲ್ಲ ನಮ್ಮ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ ಹಾಗೆಂದು ನಿರ್ಲಕ್ಷ್ಯ ವಹಿಸುವುದು ತಪ್ಪು. ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆಗೊಳಗಾಗಿ ಔಷಧಿ ಪಡೆಯುವುದು ಉತ್ತಮ. ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದು ಅಪಾಯಕಾರಿ.