ನಮ್ಮ ಸುತ್ತಮುತ್ತಲಲ್ಲಿ ಸಿಗುವ ಹಣ್ಣು ಹಂಪಲು, ತರಕಾರಿಗಳು ಹಲವು ರೋಗಗಳನ್ನು ತಡೆಗಟ್ಟುವ ರೋಗ ನಿರೋಧಕ ಶಕ್ತಿಯನ್ನು ಹೊಂದಿವೆ. ಹಿಂದಿನ ಕಾಲದವರು ಆರೋಗ್ಯವಾಗಿದ್ದರೆಂದರೆ ಅವರು ಉಪಯೋಗಿಸುತ್ತಿದ್ದ ಆಹಾರ ಪದ್ಧತಿ ಮತ್ತು ಹಿತ್ತಲಲ್ಲೇ ಸಿಗುತ್ತಿದ್ದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು.
ಹಳ್ಳಿಯಲ್ಲಂತೂ ತರಕಾರಿ, ಹಣ್ಣಿನ ಪದಾರ್ಥಗಳನ್ನು ತಾವೇ ಬೆಳೆದು ಉಪಯೋಗಿಸುತ್ತಿದ್ದರು. ಈಗ ಹಾಗಿಲ್ಲ ಬಿಡಿ ಕೈಗೆ ಎಟಕುವ ಪದಾರ್ಥಗಳಿಗಿಂತ ಹೊರಗೆ ಹಣ ನೀಡಿ ತರುವ ಪದಾರ್ಥಗಳ ಬಗ್ಗೆ ನಮಗೆ ವ್ಯಾಮೋಹ ಹೀಗಾಗಿ ಒಂದಲ್ಲ ಒಂದು ಕಾರಣಕ್ಕೆ ನಮ್ಮ ಆರೋಗ್ಯ ಹದಗೆಡುತ್ತಿದೆ ವೈದ್ಯ ಬಳಿ ಹೋಗುವುದು ಅನಿವಾರ್ಯವಾಗುತ್ತಿದೆ.ಇವತ್ತು ನಮ್ಮ ಸುತ್ತ ಮುತ್ತ ಸಿಗುವ ಕೆಲವು ಹಣ್ಣು ತರಕಾರಿಗಳ ಬಗ್ಗೆ ಹಿರಿಯರನ್ನು ಕೇಳಿ ನೋಡಿದರೆ ಅವರು ಅದರ ಗುಣಗಾನ ಮಾಡುತ್ತಾರೆ. ಮೊದಲೆಲ್ಲ ಮಲೆನಾಡು ಪ್ರದೇಶಗಳ ಮನೆಗಳಲ್ಲಿ ಒಂದೋ ಎರಡೋ ಬುಡ ಕಬ್ಬು ನೆಡುತ್ತಿದ್ದರು. ಆಗಾಗ್ಗೆ ಅದನ್ನು ಕಡಿದು ಮನೆಯವರೆಲ್ಲ ಕುಳಿತು ತಿನ್ನುತ್ತಿದ್ದರು. ಕಬ್ಬು ಮಲೆನಾಡು ಹೊರತು ಪಡಿಸಿ ಹೊರಗೆ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ಆದರೆ ಮಲೆನಾಡಿನಲ್ಲಿ ಇದನ್ನು ತಮ್ಮ ಸ್ವಂತ ಬಳಕೆಗಾಗಿ ಬೆಳೆಯುತ್ತಾರೆ. ಮನೆ ಹಿತ್ತಲಲ್ಲಿ ಬೆಳೆಯುವ ಈ ಕಬ್ಬನ್ನು ಸೇವಿಸುವುದರಿಂದ ಆರೋಗ್ಯದ ದೃಷ್ಠಿಯಿಂದ ಹಲವು ರೀತಿಯ ಅನುಕೂಲವಿರುವುದನ್ನು ನಾವು ಕಾಣಬಹುದು.
ಕಬ್ಬಿನ ಜಲ್ಲೆಯನ್ನು ಹಲ್ಲಿನಿಂದ ಕಿತ್ತು ಜಗಿದು ತಿನ್ನುವುದರಿಂದ ಹಲ್ಲಿಗೆ ಅಪಾರ ಶಕ್ತಿ ದೊರೆಯುತ್ತದೆಯಲ್ಲದೆ, ಹಲ್ಲಿನ ನಡುವೆ ಸಿಕ್ಕಿ ಹಾಕಿಕೊಂಡ ಕ್ರಿಮಿಗಳು ಹೊರಬಂದು ಸ್ವಚ್ಛಗೊಳ್ಳುತ್ತದೆ. ಇದರೊಂದಿಗೆ ಹಲ್ಲಿಗೆ ನೈಸರ್ಗಿಕ ಹೊಳಪು ಸಿಗಲು ಸಾಧ್ಯವಾಗುತ್ತದೆ. ಕೆಲವರು ಎಷ್ಟೇ ಹಲ್ಲು ಉಜ್ಜಿದರೂ ಹೊಳಪಿನ ಬದಲು ಹಳದಿಗೆ ತಿರುಗುತ್ತದೆ ಇದನ್ನು ತಡೆಯಲು ಸಾಧ್ಯವಾಗುತ್ತದೆ. ಇನ್ನು ಕಬ್ಬಿನ ಹಾಲನ್ನು ಕುಡಿಯುವುದು ಕೂಡ ಒಳ್ಳೆಯ ಅಭ್ಯಾಸವೇ. ಕಬ್ಬಿನ ಹಾಲಿಗೆ ನಿಂಬೆ, ಪುದೀನ, ಶುಂಠಿಯನ್ನು ಬೆರೆಸಿದರೆ ವಿಶಿಷ್ಟ ಸ್ವಾದದೊಂದಿಗೆ ದೇಹಕ್ಕೆ ಆರೋಗ್ಯಕಾರಿ ಗುಣಗಳು ಸೇರ್ಪಡೆಯಾಗಲು ಸಾಧ್ಯವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಕಬ್ಬಿಣ, ಪೊಟ್ಯಾಷಿಯಂ, ಮೆಗ್ನಿಷಿಯಂ ಅಂಶವಿದ್ದು ವಿಟಮಿನ್ಗಳ ಕೊರತೆಯನ್ನು ನೀಗಿಸುವುದಲ್ಲದೆ ದೇಹಕ್ಕೆ ಶಕ್ತಿ ನೀಡುತ್ತದೆ. ಶೀತ, ಗಂಟಲುನೋವು, ಗಂಟಲು ಕೆರೆತ ಮುಂತಾದ ಸಮಸ್ಯೆಗಳಿದ್ದರೆ ಬೇರೆ ಔಷಧಿಗಳಿಗೆ ಮೊರೆ ಹೋಗುವ ಬದಲು ಕಬ್ಬಿನ ಹಾಲು ಕುಡಿದರೆ ಶಮನವಾಗುತ್ತದೆ.
ಕಬ್ಬು ನೈಸರ್ಗಿಕ ಸಕ್ಕರೆ ಅಂಶ ಹೊಂದಿದ್ದು, ಆರೋಗ್ಯ ವೃದ್ಧಿಗೆ ಕಾರಣವಾಗಿದೆ. ಇದರಲ್ಲಿ ಕಾಮಾಲೆ ರೋಗವನ್ನು ತಡೆಗಟ್ಟುವ ರೋಗ ನಿರೋಧಕ ಶಕ್ತಿಯೂ ಇದರಲ್ಲಿದೆ. ಕಬ್ಬಿನ ರಸ ಸೇವಿಸುವುದರಿಂದ ಕಾಮಾಲೆ ಬರದಂತೆ ತಡೆಯಬಹುದಲ್ಲದೆ, ಕಾಮಾಲೆ ನಿಯಂತ್ರಣಕ್ಕೂ ರಾಮಬಾಣವಾಗಿದೆ. ಸಾಧ್ಯವಾದರೆ ದಿನಕ್ಕೆರಡು ಬಾರಿ ಕಬ್ಬಿನ ಹಾಲನ್ನು ಕುಡಿದರೆ ಆರೋಗ್ಯದಲ್ಲಿ ಚೇತರಿಕೆ ಕಾಣಲು ಸಾಧ್ಯವಾಗುತ್ತದೆ.
ಮೂತ್ರ ಉರಿ, ಗುಪ್ತಕಾಯಿಲೆ, ಎದೆಯುರಿ, ಹೊಟ್ಟೆಯುರಿ ಮೊದಲಾದ ಸಮಸ್ಯೆಗಳನ್ನು ಕೂಡ ಕಬ್ಬಿನ ಹಾಲು ಸೇವನೆಯಿಂದ ತಡೆಗಟ್ಟಲು ಸಹಾಯವಾಗುತ್ತದೆ. ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿಂದ ಬಳಲುವವರು ಕಬ್ಬಿನ ಹಾಲು ಸೇವಿಸುವುದರಿಂದ ಒಳ್ಳೆಯದಾಗುತ್ತದೆ. ಕ್ಯಾನ್ಸರ್ ವಿರುದ್ದ ಹೋರಾಡುವ ಶಕ್ತಿಯೂ ಇದಕ್ಕಿದೆ.
ಕಬ್ಬಿನಿಂದಾಗುವ ಪ್ರಯೋಜನದ ಬಗ್ಗೆ ತಿಳಿದ ಮೇಲೆ ಬಿಸಿಲಿಗೆ ಓಡಾಡುವಾಗ ಏನಾದರು ಕುಡಿಯಬೇಕೆನಿಸಿದಾಗ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳಿಗೆ ಮಾರು ಹೋಗುವ ಬದಲಿಗೆ ಕಬ್ಬಿನ ರಸ ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳುವುದನ್ನು ಮರೆಯದಿರಿ.