News Kannada
Friday, January 27 2023

ಆರೋಗ್ಯ

ಬದುಕಿನ ಎರಡು ಆನಂದಗಳು ಗೊತ್ತಾ?

Photo Credit :

ಬದುಕಿನ ಎರಡು ಆನಂದಗಳು ಗೊತ್ತಾ?

ನಮ್ಮಲ್ಲಿ ಎಷ್ಟು ಜನರು ಆನಂದವಾಗಿದ್ದಾರೆ? ಈ ಪ್ರಶ್ನೆಗಳನ್ನು ಹಿಡಿದು ಹೊರಟರೆ ಉತ್ತರಗಳೇ ಸಿಗಲಾರವು. ಕಾರಣವಿಷ್ಟೆ ಒಂದಲ್ಲ ಒಂದು ಕಾರಣಕ್ಕೆ ನಾವು ಆನಂದವನ್ನು ಚಿವುಟಿ ಹಾಕಿ ಸದಾ ಸಮಸ್ಯೆಗಳನ್ನು ಎಳೆದುಕೊಂಡು ಒತ್ತಡದಿಂದ ಬದುಕುತ್ತೇವೆ. ಹಣ, ಸಂಪತ್ತು, ಅಧಿಕಾರಗಳು ಆನಂದವನ್ನು ತಂದುಕೊಡಬಹುದೆಂಬ ಭ್ರಮೆಯಲ್ಲಿ ಆನಂದದಿಂದ ಕಳೆಯಬಹುದಾದ ಕ್ಷಣಗಳನ್ನೆಲ್ಲ ಬದಿಗೆ ತಳ್ಳಿಹಾಕುತ್ತಿದ್ದೇವೆ. ಬಹಳಷ್ಟು ಜನಕ್ಕೆ ಚಿಕ್ಕ ಚಿಕ್ಕ ವಿಚಾರಗಳು ಕೂಡ ದೊಡ್ಡದಾದ ಆನಂದವನ್ನು ನೀಡುತ್ತದೆ ಎಂಬ ಜ್ಞಾನವೇ ಇಲ್ಲದಾಗಿದೆ.  

ಒಬ್ಬ ವ್ಯಕ್ತಿ ಏನನ್ನಾದರೂ ಬಯಸಿದರೆ, ಆತನಿಗೆ ಅದರ ಬಗ್ಗೆ ಆಸಕ್ತಿ ಹುಟ್ಟಿದೆ ಎಂದರ್ಥ. ಅದಕ್ಕಾಗಿ ಆತ ಏನು ಮಾಡಲು ಕೂಡ ಹಿಂಜರಿಯುವುದಿಲ್ಲ ಅದನ್ನೇ ಪಡೆದೇ ತೀರಬೇಕೆನ್ನುವ ಹಠಕ್ಕೆ ಬೀಳುತ್ತಾನೆ. ಇದನ್ನು ವಿಷಯಾಪೇಕ್ಷೆ ಎಂದು ಕರೆಯುತ್ತಾರೆ. ಈ ವಿಷಯಾಪೇಕ್ಷೆ ಎನ್ನುವುದು ಮನುಷ್ಯನ  ರಕ್ತ ಮಾಂಸ ಮಜ್ಜೆಯಲ್ಲಿ ಬೇರು ಬಿಟ್ಟಿದೆ. ಹೀಗಾಗಿ ಮನುಷ್ಯ ಸದಾ ವಿಷಯಾಪೇಕ್ಷೆಯಲ್ಲಿರುತ್ತಾನೆ. ಹಾಗೆಂದು ವಿಷಯಾಪೇಕ್ಷೆಗೆ ಒಳಗಾಗುವುದು ಕೆಟ್ಟದಲ್ಲ. ಬದಲಿಗೆ ನಾವು ಯಾವ ವಿಷಯಗಳಲ್ಲಿ ಅಪೇಕ್ಷೆಗೆ ಒಳಗಾಗುತ್ತೇವೆ ಎಂಬುವುದು ಮುಖ್ಯವಾಗುತ್ತದೆ.

ಹಾಗೆ ನೋಡಿದರೆ ಸುಖಾಪೇಕ್ಷೆ ಹಾಗೂ ವಿಷಯಾಪೇಕ್ಷೆಗಳು ಮನುಷ್ಯನ ಮೂಲಭೂತ ಜೀವಶಕ್ತಿಯಾಗಿದೆ. ಅಷ್ಟೇ ಅಲ್ಲ ಮನುಷ್ಯ ಬದುಕುತ್ತಿರುವುದೇ ಈ ಅಪೇಕ್ಷೆಯ ಪ್ರೇರಣೆಯಿಂದ. ಕೆಲವೊಮ್ಮೆ ಮನುಷ್ಯನ ಸಂಕಲ್ಪ ಶಕ್ತಿಯನ್ನು ವಿಷಯಾಪೇಕ್ಷೆಗಳು ಮೊಟಕುಗೊಳಿಸಿಬಿಡುತ್ತವೆ. ಈ ಸಂದರ್ಭ ಅನಾಹುತಗಳು ಸಂಭವಿಸುತ್ತದೆ. ಇದರಿಂದ ಅನುಭವಿಸಬೇಕಾದ ಆನಂದವನ್ನು ಕಳೆದುಕೊಂಡು ನೋವುಗಳನ್ನು ಅನುಭವಿಸಬೇಕಾಗುತ್ತದೆ.

ಆತ್ಮಜ್ಞಾನಿಗಳು, ಮನುಷ್ಯನ ಮನೋಮಟ್ಟವನ್ನು ಅರಿತವರಾದ ಆಧ್ಯಾತ್ಮಿಕ ಚಿಂತಕರು ಹೇಳುವುದಿಷ್ಟೆ. ಸುಖಾನ್ವೇಷಿಯಾಗು, ಆದರೆ ಆ ನಿನ್ನ ಸುಖಾಪೇಕ್ಷೆ ನಿನ್ನ ಮಾನಸಿಕ ಮತ್ತು ಶಾರೀರಿಕ ಸೌಖ್ಯವನ್ನು ಹಾಳುಮಾಡುವಂತಿರಬಾರದು ಅಥವಾ ನಿನ್ನ ಊಧ್ರ್ವ ಗಮನಾಭಿಲಾಷೆಯನ್ನು ಕುಂಠಿತಗೊಳಿಸುವಂತಿರಬಾರದು. ಮಾನಸಿಕವಾದ ಸಂತೋಷಗಳ ಅನ್ವೇಷಣೆಯ ಮೂಲಕ ಆತ್ಮಾನಂದವನ್ನು ಪಡೆದುಕೊಳ್ಳಲು ಬೇಕಾದ ಶಕ್ತಿ, ಸಾಮರ್ಥ್ಯವನ್ನು ಗಳಿಸಿಕೋ…ನಿನ್ನ ಸುಖಾಪೇಕ್ಷೆಯು ಆತ್ಮ ಹಾನಿಗೆ ದಾರಿಯಾಗಬಾರದು. ನೈತಿಕ ನಿಯಮಗಳಾಗಲೀ, ಇನ್ನಿತರ ನಿಯಮಗಳಾಗಲೀ ಇವುಗಳೆಲ್ಲವೂ ಅಡ್ಡದಾರಿ ಹಿಡಿದು ಸುಖಾಪೇಕ್ಷೆಯ ಬೆನ್ನತ್ತಿ ಹೋಗುವ ಮನುಷ್ಯನನ್ನು ಕಾಪಾಡುವ ಸಲುವಾಗಿಯೇ ಮಾಡಲ್ಪಟ್ಟವುಗಳಾಗಿವೆ. ನಮ್ಮಲ್ಲಿ ಮೂಡುವಂತಹ ವಿಷಯಾಪೇಕ್ಷೆಯಾಗಲೀ, ಸೆಳೆಯುವಂತಹ ಸುಖಾಪೇಕ್ಷೆಯಾಗಲೀ ಇವುಗಳನ್ನು ಅನುಕೂಲವಾಗುವಂತಹ ಚೌಕಟ್ಟಿನಲ್ಲಿ ಪಳಗಿಸಿ ಬೇರೊಂದು ಸ್ಥಿತಿಗೆ ಸಿದ್ಧಗೊಳಿಸುವ ತಂತ್ರ ನಮ್ಮಲ್ಲಿ ಬೆಳೆಸಿ ಕೊಳ್ಳುವುದನ್ನು ಮರೆಯಬಾರದು.

ಎರಡು ರೀತಿಯ ಆನಂದಗಳಿವೆ. ಒಂದು ಲೋಕದ ಸುಖ-ಸಂತೋಷಗಳ ಮೂಲಕ ಪಡೆಯುವ ವಿಷಯಾನಂದ. ಇನ್ನೊಂದು ಭಗವಂತನಿಗೆ ಮೊರೆಹೋಗುವ ಮೂಲಕ ಒದಗುವ ಭಜನಾನಂದ. ಮನುಷ್ಯನೊಬ್ಬ ಬೇಕೇ ಬೇಕು ಎಂದಾದರೆ ವಿಷಯಾನಂದದ ಹಿಂದೆ ಹೋಗಬಹುದು. ಆದರೆ ಅದು ಭಜನಾಂದಕ್ಕೆ ಎಂದೂ ಪ್ರತಿಕೂಲವಾಗಬಾರದು. ಇದು ಒಂದು ಬಗೆಯ ವಿವೇಚನೆ ಮತ್ತು ವಿಷಯಾನಂದದಲ್ಲಿ ಮಾಡಿಕೊಳ್ಳುವ ಆಯ್ಕೆ ಮೇಲೆ ಅವಲಂಬಿಸಿದೆ.

ಯಾವಾಗ ಒಬ್ಬ ಮನುಷ್ಯ ತಾನು ಕೇವಲ ಮನೋಬುದ್ದಿ ಅಹಂಕಾರಗಳಿಂದ ಕೂಡಿದ ದೇಹವಲ್ಲ. ನಾನು ನಿತ್ಯ ಶುದ್ಧವಾದ ಆತ್ಮಸ್ವರೂಪನೇ ಎಂದು ಅನುಭವಿಸಿ ತಿಳಿಯುತ್ತಾನೆಯೋ ಆಗ ಅವನ ಭಾವ-ರಾಗಗಳು ಸ್ತಬ್ಧವಾಗುತ್ತವೆ. ಏಕೆಂದರೆ ಈ ಭಾವ-ರಾಗಗಳು ವಾಸ್ತವವಾಗಿ ನೋಡಿದರೆ ತಪ್ಪುದಾರಿಗೆ ಬಿದ್ದ ನಮ್ಮ ಅಪೇಕ್ಷೆಗಳಲ್ಲದೆ ಬೇರೆ ಯಾವುದೂ ಅಲ್ಲ. ನಿಜ ಹೇಳಬೇಕೆಂದರೆ ಆಸೆಗಳು ನಮ್ಮ ಉದ್ದೇಶಕ್ಕೆ ಅನುಸಾರವಾಗಿ ಶತ್ರುಗಳೂ ಆಗಬಹುದು. ಮಿತ್ರರೂ ಆಗಬಹುದು.

See also  ಚಳಿಗಾಲದಲ್ಲಿ ಮುಜುಗರ ತರುವ ಚರ್ಮದ ಬಿರುಕು...!

ಯಾವಾಗ ನಮ್ಮ ಆಸಕ್ತಿಗಳು ಸತ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ನಮ್ಮ ಬಿಡುಗಡೆಯ ಹಾಗೂ ಆನಂದದ ಸಾಧನಗಳಾಗುತ್ತವೆ. ಯಾವಾಗ ಅವು ಮಿಥ್ಯದೆಡೆಗೆ ಉದ್ದೇಶಿತವಾಗುತ್ತವೆಯೋ ಆಗ ಅವು ಬಂಧನದ ಹಾಗೂ ದುಃಖದ ಸಾಧನಗಳಾಗುತ್ತವೆ. ಆನಂದ ಎನ್ನುವುದು ಕೇವಲ ಸುಖ ಅಲ್ಲ. ಅದು ಸುಖ, ದುಃಖಗಳಾಚೆಯದು ಮತ್ತು ಎಂದೂ ದೈಹಿಕ, ಮಾನಸಿಕ ಸ್ತರಗಳಲ್ಲಿ ಪ್ರತ್ಯೇಕಿಸಲಾರದಂತಹದ್ದಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು