ಕಲುಷಿತ ಮನಸ್ಸು ನಮ್ಮದಾದರೆ ಅದರ ಪರಿಣಾಮ ಶರೀರದ ಮೇಲೆ ನೇರವಾಗಿ ಬೀರುತ್ತದೆ. ಆರೋಗ್ಯಕರ ಮನಸ್ಸನ್ನು ಹೊಂದದೆ ಹೋದರೆ ಸದಾ ವ್ಯಸನಿಯಾಗಿಯೋ ಅಥವಾ ಮಾನಸಿಕ ರೋಗಿಯಾಗಿಯೋ ಬಳಲಬೇಕಾದ ಅಪಾಯವಂತು ಇದ್ದೇ ಇದೆ.
ನಮ್ಮ ತಪ್ಪುಗಳು ನಮಗೆ ಅರಿವಾದರೆ ಖಂಡಿತಾ ನಾವು ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ತಪ್ಪುಗಳನ್ನು ಸತ್ಯ ಮಾಡುವ ಅಥವಾ ನಾವು ಮಾಡಿದ್ದೇ ಸರಿ ಎಂಬ ಮನೋಭಾವ ಬೆಳೆದಿದ್ದೇ ಆದರೆ ಖಂಡಿತಾ ನಾವು ಆರೋಗ್ಯಕಾರಿ ಬದುಕು ಕಂಡು ಕೊಳ್ಳಲು ಸಾಧ್ಯವಿದೆ.
ನಮ್ಮಲ್ಲಿ ಎಷ್ಟೇ ಸಂಪತ್ತು, ಅಧಿಕಾರವಿದ್ದರೂ ಮಾನವೀಯ ಗುಣವಿಲ್ಲದಿದ್ದರೆ ಬದುಕೇ ನಗಣ್ಯ. ಆದ್ದರಿಂದ ಮಾನವೀಯ, ಗುಣ, ಸಂಬಂಧಗಳ ಬಗ್ಗೆಯೂ ಗಮನಹರಿಸಬೇಕು. ಮೂರು ದಿನಗಳ ಬದುಕಿನಲ್ಲಿ ಕೇವಲ ನಮಗಾಗಿ ಬದುಕದೆ, ಇನ್ನೊಬ್ಬರ ಬದುಕಿಗಾಗಿ ಒಂದಷ್ಟು ಸಮಯಗಳನ್ನು ಮೀಸಲಿಡುವ, ಕಷ್ಟಸುಖಗಳಲ್ಲಿ ಭಾಗಿಯಾಗುವ ಅಷ್ಟೇ ಅಲ್ಲದೆ ನಮ್ಮಿಂದಾದ ತಪ್ಪಿಗೆ ಕ್ಷಮೆ ಕೇಳುವ ಮನೋಗುಣವನ್ನು ಬೆಳೆಸಿಕೊಳ್ಳಬೇಕು. ಒಂದು ವೇಳೆ ನಮ್ಮ ತಪ್ಪು ಅರಿವಿಗೆ ಬಂದರೂ ನಾನೇಕೆ ಅವನೊಂದಿಗೆ ಕ್ಷಮೆ ಕೇಳಬೇಕು? ನನ್ನ ಅಂತಸ್ತಿಗೆ ಇದು ಹೊಂದುವಂತದ್ದಲ್ಲ ಎಂಬ ಮನೋಭಾವದಿಂದ ತಪ್ಪನ್ನು ಸಮರ್ಥಿಸಿಕೊಂಡು ಮುನ್ನಡೆದರೆ ನಮಗರಿವಿಲ್ಲದೆಯೇ ಮತ್ತಷ್ಟು ತಪ್ಪನ್ನು ನಾವು ಮಾಡಬೇಕಾಗುತ್ತದೆ.
ಕ್ಷಮಾ ಗುಣ ಬೆಳೆಸಿಕೊಂಡರೆ ಮನಸ್ಸು ಆರೋಗ್ಯವಾಗಿದ್ದರೆ ದೇಹ ಆರೋಗ್ಯದಿಂದ ಇದ್ದು ಲವಲವಿಕೆಯಿಂದ ಕೂಡಿರಲು ಸಾಧ್ಯ. ಇದಕ್ಕೊಂದು ನಿದರ್ಶನ ಇಲ್ಲಿದೆ. ಹಲವು ವರ್ಷಗಳ ಹಿಂದೆ ಪ್ರಸಿದ್ಧ ಮನಶಾಸ್ತ್ರಜ್ಞರಾದ ಡಾ.ಯೂಂಗ್ ಅವರು ಮನೋವಿಜ್ಞಾನಿಗಳು ಮತ್ತು ಪಾದ್ರಿಗಳ ಜತೆ ಸೇರಿ ಮನುಷ್ಯರ ದುಃಖಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕೆಂದು ಸಲಹೆ ನೀಡಿದರು. ಅಲ್ಲದೆ ಮನುಷ್ಯರ ಭಗ್ನ ಹೃದಯಗಳನ್ನು ಸರಿಪಡಿಸಿ ಅವರ ನುಚ್ಚು ನೂರಾದ ಶ್ರದ್ಧೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಅಪೂರ್ವವಾದ ಚಿಕಿತ್ಸಾಲಯವೊಂದನ್ನು ತೆರೆದರು.
ಒಂದು ದಿನ ಈ ಚಿಕಿತ್ಸಾಲಯಕ್ಕೆ ಮೂವತ್ತನಾಲ್ಕು ವಯಸ್ಸಿನ ಮಹಿಳೆಯೊಬ್ಬಳು ಚಿಕಿತ್ಸೆಗೆಂದು ಬಂದಳು. ಅವಳನ್ನು ನೋಡಿದರೆ ಐವತ್ತು ವಯಸ್ಸಿನವಳಂತೆ ಕಾಣುತ್ತಿದ್ದಳು ಆಕೆ ಅನೇಕ ತಿಂಗಳ ಕಾಲ ನಿದ್ರಾಹೀನತೆ, ನರಗಳ ದೌರ್ಬಲ್ಯ ಮತ್ತು ಸುದೀರ್ಘ ಬಳಲಿಕೆಗಳಿಂದ ನರಳಿದ್ದಳು. ಆಕೆ ಚಿಕಿತ್ಸೆಗಾಗಿ ಹಲವು ವೈದ್ಯರ ಬಳಿ ಹೋಗಿ ಬಂದಿದ್ದಳು. ಆದರೆ ಅವಳಿಗೆ ತಕ್ಕ ಚಿಕಿತ್ಸೆ ದೊರೆಯದೆ ಕಂಗಾಲಾಗಿದ್ದಳು. ಕೊನೆಗೆ ದೇವರ ಧ್ಯಾನದಿಂದಲಾದರೂ ನೆಮ್ಮದಿ ಸಿಕ್ಕಬಹುದೆಂದು ಅದನ್ನು ಮಾಡಿದ್ದಳಾದರೂ ಅದು ಕೈಹಿಡಿಯಲಿಲ್ಲ.
ಕೊನೆಗೆ ಬೇರೆ ಯಾವ ದಾರಿಯೂ ಕಾಣದೆ ಹತಾಶಳಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದ ಮಾರ್ಗ ಎಂಬ ನಿರ್ಧಾರಕ್ಕೆ ಬಂದಿದ್ದಳು. ಆದರೂ ಕಟ್ಟಕಡೆಯ ಪ್ರಯತ್ನ ಎಂಬಂತೆ ಅವಳು ಆ ಚಿಕಿತ್ಸಾಲಯಕ್ಕೆ ಬಂದಿದ್ದಳು. ಅವಳೊಂದಿಗೆ ಸಮಾಲೋಚನೆ ನಡೆಸಿದ ವೈದ್ಯರು ಅವಳ ಮನೋರೋಗದ ನಿಜವಾದ ಕಾರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ತಾನು ಮದುವೆ ಮಾಡಿಕೊಳ್ಳಬೇಕೆಂದು ಆಶಿಸಿದ್ದ ಹುಡುಗನನ್ನು ತನ್ನ ತಂಗಿಯೇ ಮದುವೆ ಮಾಡಿಕೊಂಡುಬಿಟ್ಟಳು. ಇದರಿಂದಾಗಿ ತನ್ನ ತಂಗಿಯ ಬಗ್ಗೆ ಆಕೆಗೆ ಒಳಗೊಳಗೆ ತೀವ್ರವಾದ ಅಸಮಾಧಾನ ಬೆಳೆಯಿತು. ಮೇಲೆ ನೋಡಲು ಮಾತ್ರ ತನ್ನ ತಂಗಿಯ ಬಗ್ಗೆ ದಯಾಳುವಂತಳಂತೆ ತೋರ್ಪಡಿಸಿಕೊಂಡರೂ ಅವಳ ಸುಪ್ತ ಪ್ರಜ್ಞೆಯಲ್ಲಿ ತಂಗಿ ಬಗ್ಗೆ ವಿಪರೀತ ದ್ವೇಷ ಮನೆಮಾಡಿತ್ತು. ಇದು ಅವಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹಾಳುಗೆಡವಿತ್ತು.
ಆ ಮಹಿಳೆಯ ಕಾಯಿಲೆಗೆ ಕಾರಣವೇನೆಂದು ಪತ್ತೆ ಹಚ್ಚಿದ ವೈದ್ಯರು ಇದು ಔಷಧಿಯಿಂದ ಗುಣ ಮಾಡುವಂತಹದ್ದಲ್ಲ ಎಂಬುದನ್ನು ಅರಿತು ಅವಳನ್ನು ಪಾದ್ರಿ ಹತ್ತಿರ ಕಳುಹಿಸಿದರು. ಪಾದ್ರಿ ಅವಳನ್ನು ಹತ್ತಿರ ಕುಳ್ಳಿರಿಸಿ ನೋಡಮ್ಮ ಯಾರನ್ನಾದರೂ ದ್ವೇಷಿಸುವುದಿದೆಯಲ್ಲ ಅದು ಮಹಾಪಾಪಕರವಾದದ್ದು ನೀನು ನಿನ್ನ ತಂಗಿಯನ್ನು ಹೃದಯಪೂರ್ವಕವಾಗಿ ಕ್ಷಮಿಸುವಂತಹ ಮನಸ್ಥಿತಿಯನ್ನು ನಿನಗೆ ಕರುಣಿಸುವಂತೆ ದೇವರಲ್ಲಿ ಬೇಡಿಕೋ ಆಗ ನಿನ್ನ ಮನಸ್ಸಿಗೆ ಶಾಂತಿ ಲಭಿಸುತ್ತದೆ.
ಪಾದ್ರಿಯ ಬುದ್ದಿಮಾತನ್ನು ಕೇಳಿದ ಆ ಮಹಿಳೆಗೆ ಜ್ಞಾನೋದಯವಾಯಿತು. ದೇವರಲ್ಲಿ ಶ್ರದ್ಧೆಯಿಂದ ಪ್ರಾರ್ಥನೆ ಮಾಡುತ್ತಾ ತಂಗಿ ತಪ್ಪನ್ನು ಕ್ಷಮಿಸುವತ್ತ ಚಿತ್ತ ಹರಿಸಿದಳು. ಇದರಿಂದ ಅವಳಲ್ಲಿದ್ದ ದ್ವೇಷ ಕ್ರಮೇಣ ಕಡಿಮೆಯಾಗಿ ಪ್ರೀತಿ ಬೆಳೆಯಿತು. ಇದು ಅವಳಲ್ಲಿ ಉತ್ಸಾಹ ತುಂಬಿತು. ಇದರಿಂದ ನಿದ್ರಾಹೀನತೆ ಕಡಿಮೆಯಾಗಿ ಆರೋಗ್ಯವಂತ ಸುಖೀ ಜೀವನ ನಡೆಸಲು ಸಾಧ್ಯವಾಯಿತು.
ಕೆಲವೊಮ್ಮೆ ನಮ್ಮಲ್ಲಿ ಕ್ಷಮಾಗುಣವಿಲ್ಲದೆ, ದ್ವೇಷ, ಅಸೂಯೆ ತುಂಬಿಕೊಂಡರೆ ಏನಾಗುತ್ತೆ ಎಂಬುದಕ್ಕೆ ಈ ನಿದರ್ಶನ ಸಾಕ್ಷಿಯಾಗುತ್ತದೆ…