ಪ್ರತಿಯೊಬ್ಬ ವ್ಯಕ್ತಿಗೂ ಆತನದೇ ಆದ ಗುಣವಿರುತ್ತದೆ. ಅದು ಕೆಲವೊಮ್ಮೆ ಪಕ್ಕನೆ ಗೊತ್ತಾಗುವುದಿಲ್ಲವಾದರೂ ಒಡನಾಟದಲ್ಲಿದ್ದವರಿಗೆ ಮಾತ್ರ ತಿಳಿಯುತ್ತದೆ. ಈ ಗುಣಗಳನ್ನು ಕೆಟ್ಟದು ಮತ್ತು ಒಳ್ಳೆಯದು ಎಂದು ವಿಂಗಡಿಸಿ ಹೇಳಬಹುದು.
ಸಾಮಾನ್ಯವಾಗಿ ನಾವು ಒಬ್ಬರನ್ನು ಪರಿಚಯಿಸುವಾಗ ಅವರು ಮಾಡುವ ಕೆಲಸ, ಕುಟುಂಬದ ಹಿನ್ನಲೆ ಎಲ್ಲವನ್ನೂ ಹೇಳಿದ ಬಳಿಕ ಕೊನೆಯಲ್ಲಿ ಗುಣದ ಬಗ್ಗೆಯೂ ಹೇಳಲು ಮರೆಯುವುದಿಲ್ಲ. ನಾವು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಒಳ್ಳೆಗುಣ ಇಲ್ಲದೆ ಹೋದರೆ ಆ ಸ್ಥಾನಕ್ಕೆ ಘನತೆ ತಂದುಕೊಡಲು ಸಾಧ್ಯವಿಲ್ಲ. ಹೀಗಾಗಿಯೇ ತಮ್ಮೊಡನೆ ಬಂದ ಕೆಟ್ಟಗುಣಗಳನ್ನು ಕಟ್ಟಿಕೊಂಡು ಮುನ್ನಡೆಯುವ ಕೆಲವು ವ್ಯಕ್ತಿಗಳು ಘನತೆ ಗೌರವದ ಸ್ಥಾನಕ್ಕೇರಿದರೂ ಕೆಲವೊಮ್ಮೆ ಕುಂದು ತಂದುಕೊಂಡು ಬಿಡುತ್ತಾರೆ. ಇದಕ್ಕೆ ಪೂರಕವಾಗಿ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ.
ಗುಣದ ವಿಚಾರಕ್ಕೆ ಬಂದಾಗಲೆಲ್ಲಾ ನಾಯಿ ಬಾಲ ಡೊಂಕು, ತಿಪ್ಪೆಯಲ್ಲಿದ್ದ ನೊಣವನ್ನು ಉಪ್ಪರಿಕೆಯಲ್ಲಿ ಕೂರಿಸಿದರೂ ತಿಪ್ಪೆ ಕಂಡಲ್ಲಿ ಹಾರುತ್ತೆ ಎಂಬಂತಹ ಮಾತುಗಳಿವೆ. ಇದೆಲ್ಲ ಏಕೆ ನಮ್ಮ ನಡುವೆ ಇದೆ ಎಂದರೆ ಹುಟ್ಟುಗುಣ ಎನ್ನುವುದು ನಮ್ಮಿಂದ ಅಷ್ಟು ಸುಲಭದಲ್ಲಿ ಹೋಗುವಂತದಲ್ಲ ಎಂಬುದರ ಬಗ್ಗೆ ಅರಿವು ಮೂಡಿಲಷ್ಟೆ.
ಸುಭಾಷಿತವೊಂದರಲ್ಲಿ ಮನುಷ್ಯನು ಗುಣಗಳಿಂದಲೇ ಉನ್ನತಿಯನ್ನು ಹೊಂದುತ್ತಾನೆ ಹೊರತು ಉನ್ನತ ಸ್ಥಾನದಿಂದಲ್ಲ. ಕಾಗೆ ಭವ್ಯಭವನದ ಶಿಖರದ ತುದಿಯಲ್ಲಿ ಕುಳಿತ ಮಾತ್ರಕ್ಕೆ ಅದು ಗರುಡನಾಗುವುದಿಲ್ಲ ಎಂದು ಹೇಳಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವರು ತಮಗೆ ಯೋಗ್ಯತೆಯಿಲ್ಲದ ಸ್ಥಾನಗಳನ್ನು ವಾಮಮಾರ್ಗದಲ್ಲಿ ಪಡೆದು ನಂತರ ಆ ಸ್ಥಾನದ ಘನತೆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳದೆ ಚ್ಯುತಿ ತಂದುಕೊಳ್ಳುತ್ತಾರೆ.
ನಾವು ಪ್ರತಿಯೊಬ್ಬರಲ್ಲೂ ಸದ್ಗುಣಗಳನ್ನು ಹುಡುಕುತ್ತೇವೆ. ಅಂಥವರ ಸಂಘವನ್ನು ಮಾಡುತ್ತೇವೆ. ನಮಗೆ ನಮ್ಮ ಒಡನಾಟದಲ್ಲಿರುವಾತನ ದುರ್ಗುಣ ತಿಳಿದ ತಕ್ಷಣ ದೂರ ಸರಿದು ಬಿಡುತ್ತೇವೆ. ಇದಕ್ಕಾಗಿಯೇ ಸಜ್ಜನರ ಸಂಗ ಜೇನು ಸವಿದಂತೆ. ದುರ್ಜನರ ಸಂಘ ಜೇನು ಕಡಿದಂತೆ ಎಂದು ಹೇಳಲಾಗಿದೆ. ನಾವು ದುರ್ಜನರಿಂದ ದೂರವಿದ್ದಷ್ಟು ಒಳಿತು.
ಇವತ್ತು ನಮ್ಮಲ್ಲಿ ಹುಟ್ಟಿ ಬದುಕಿ ಕಾಲವಾದ ಹಲವು ಗಣ್ಯರನ್ನು ಸ್ಮರಿಸುತ್ತೇವೆ. ಸಂದರ್ಭ ಬಂದಾಗಲೆಲ್ಲಾ ಅವರು ಮಾಡಿದ ಕಾರ್ಯಗಳೊಂದಿಗೆ ಗುಣಗಾನ ಮಾಡುತ್ತೇವೆ. ಅವರಲ್ಲೊಂದು ಒಳ್ಳೆಗುಣ ಇಲ್ಲದೆ ಹೋಗಿದ್ದರೆ ನಾವ್ಯಾರು ಸ್ಮರಿಸುತ್ತಲೇ ಇರಲಿಲ್ಲ.
ಪ್ರತಿಯೊಬ್ಬರಲ್ಲೂ ಒಂದೊಂದು ಗುಣವಿರುತ್ತದೆ. ಆ ಗುಣದಿಂದಲೇ ನಾವು ಅವರ ವ್ಯಕ್ತಿತ್ವವನ್ನು ಗುರುತಿಸಲು ಸಾಧ್ಯವಾಗುತ್ತದೆ. ಸದ್ಗುಣವಂತನನ್ನು ಫಲಬಿಟ್ಟ ಗಿಡ, ಬಳ್ಳಿಗೆ ಹೋಲಿಸಲಾಗಿದೆ. ಏಕೆಂದರೆ ಫಲಬಿಟ್ಟ ಗಿಡ, ಬಳ್ಳಿ ಭೂಮಿಯತ್ತ ಬಾಗುತ್ತಲೇ ಹೋಗುತ್ತದೆ. ಹಾಗೆಯೇ ಸದ್ಗುಣಿಯು ಕೂಡ ತನ್ನಲ್ಲಿರುವ ಅಹಂ ತ್ಯಜಿಸಿ ತಲೆಬಾಗುತ್ತಲೇ ಹೋಗುತ್ತಾನೆ. ನಮ್ಮೆಲ್ಲ ಸದ್ಗುಣಗಳೊಂದಿಗೆ ಪರೋಪಕಾರದ ಗುಣವೂ ಸೇರಿದರೆ ಆತ ತುಂಬಿದ ಕೊಡವಾಗುತ್ತಾನೆ.