ನಾವು ಏನೇ ಮಾಡಬೇಕೆಂದರೂ ಕೆಲವೊಮ್ಮೆ ಏಕಾಗ್ರತೆ ಕೈಕೊಟ್ಟು ಬಿಡುತ್ತದೆ. ಏಕಾಗ್ರತೆ ಇಲ್ಲದೆ ಹೋದರೆ ಅದರಿಂದ ನಿರೀಕ್ಷಿತ ಫಲ ನಿರೀಕ್ಷಿಸಲಾಗುವುದಿಲ್ಲ. ನಾವು ಮಾಡುವ ಕೆಲಸ ಓದು ಯಾವುದೇ ಕಾರ್ಯವಾಗಿರಲಿ ಅದನ್ನು ಮಾಡುವಾಗ ಅದರತ್ತ ಚಿತ್ತಹರಿಸಬೇಕು ಅದಿಲ್ಲದೆ ಹೋದರೆ ನಾವು ಯಾಂತ್ರಿಕವಾಗಿ ಕೆಲಸ ಮಾಡುತ್ತೇವೆ. ಆದರೆ ಇನ್ನೆಲ್ಲೊ ಚಿತ್ತ ಹರಿಯುತ್ತಿರುತ್ತದೆ. ಇದರಿಂದ ಒಮ್ಮೊಮ್ಮೆ ನಾವೇನು ಮಾಡುತ್ತಿದ್ದೇವೆ ಎಂಬುದು ತಿಳಿಯದೆ ಹಲವು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ.
ಹಿಂದಿನ ಕಾಲದಲ್ಲಿ ತಮ್ಮಲ್ಲಿ ಏಕಾಗ್ರತೆ ಮೂಡಿಸಲು ಸಾಧಕರು ಹಲವು ತಂತ್ರಗಳನ್ನು ಕಂಡುಕೊಂಡಿದ್ದರಲ್ಲದೆ ಅದನ್ನು ಅನುಸರಿಸುತ್ತಿದ್ದರು. ಇನ್ನು ದೇವರಲ್ಲಿ ಅನುರುಕ್ತರಾಗುತ್ತಿದ್ದ ಅವರು ಮಂತ್ರಗಳನ್ನು ಜಪಿಸುತ್ತಿದ್ದರು. ಈ ಓಂಕಾರಯುಕ್ತ ಅಷ್ಟಾಕ್ಷರಮಂತ್ರವು ಗೋಪನಿಯ ವಸ್ತುಗಳಲ್ಲಿ ಅತ್ಯಂತ ಪವಿತ್ರವಾಗಿದೆ ಎಂದು ಹೇಳಲಾಗಿದೆ. ಇದನ್ನು ಜಪಿಸುವ ವ್ಯಕ್ತಿ ಆಯುಷ್ಯ, ಸಂಪತ್ತು, ಪಶು, ವಿದ್ಯೆ, ಯಶಸ್ಸು, ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಪಡೆದುಕೊಳ್ಳುತ್ತಾನಂತೆ. ಮಂತ್ರಗಳ ಬಗ್ಗೆ ವೇದಗಳಲ್ಲಿ ಧರ್ಮಸಮ್ಮತ ಹಾಗೂ ಸತ್ಯವೂ ಆಗಿದೆ ಎಂದು ಹೇಳಿದೆ. ಮಂತ್ರ ಸ್ವರೂಪನಾದ ಶ್ರೀಮನ್ನಾರಾಯಣನು ಮನುಷ್ಯರಿಗೆ ಸಿದ್ದಿಯನ್ನು ಅನುಗ್ರಹಿಸುತ್ತಾನೆ. ಋಷಿಗಳು, ಪಿತೃಗಣಗಳು, ದೇವತೆಗಳು, ಸಿದ್ದರು, ಅಸುರರು ಮಂತ್ರವನ್ನು ಜಪಿಸಿ ಸಿದ್ದಿಯನ್ನು ಪಡೆದ ಬಗ್ಗೆ ಪೌರಾಣಿಕ ಕಥೆಗಳಲ್ಲಿ ಕಾಣಬಹುದು. ಯಾರು ಜ್ಯೋತಿಷ್ಯ ಹಾಗೂ ಇತರೆ ಶಾಸ್ತ್ರಗಳಿಂದ ತಮ್ಮ ಅಂತ್ಯಕಾಲವನ್ನು ತಿಳಿದು ಮಂತ್ರವನ್ನು ಜಪಿಸುವರೋ ಅವರುಗಳು ಪರಮಸಿದ್ದಿಯಾದ ಮಹಾವಿಷ್ಣುವಿನ ಪರಮಪದದ ಗತಿಯನ್ನು ಪಡೆಯುವರು ಎಂದು ಆಧ್ಯಾತ್ಮದಲ್ಲಿ ವಿವರಿಸಲಾಗಿದೆ.
ಇದರ ಬಗ್ಗೆ ಮಾಹಿತಿ ನೀಡುತ್ತಾ 1 ಲಕ್ಷ ಜಪಿಸಿದರೆ-ಚಿತ್ತಶುದ್ದಿಯಾಗುತ್ತದೆ, 2 ಲಕ್ಷ ಜಪಿಸಿದರೆ ಮಂತ್ರ ಸಿದ್ದಿಯಾಗುತ್ತದೆ, 3 ಲಕ್ಷ ಜಪಿಸಿದರೆ -ಸ್ವರ್ಗಲೋಕ ಪ್ರಾಪ್ತಿ, 4 ಲಕ್ಷ ಜಪಿಸಿದರೆ-ವಿಷ್ಣುವನ ಸಾನಿಧ್ಯ ಪ್ರಾಪ್ತಿ, 5 ಲಕ್ಷ ಜಪಿಸಿದರೆ-ನಿರ್ಮಲ ಜ್ಞಾನ ಪ್ರಾಪ್ತಿ, 6 ಲಕ್ಷ ಜಪಿಸಿದರೆ-ದೈವಸಾಕ್ಷಾತ್ಕಾರ, 7 ಲಕ್ಷ ಜಪಿಸಿದರೆ-ಭಗವದ್ ಸ್ವರೂಪದ ಜ್ಞಾನವುಂಟಾಗುತ್ತದೆ, 8 ಲಕ್ಷ ಜಪಿಸಿದರೆ-ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗಿದೆ.
ಮಂತ್ರವನ್ನು ಜಪಿಸುವ ವ್ಯಕ್ತಿಯ ಬಳಿ ದುಃಸ್ವಪ್ನ, ಅಸುರರು, ಪಿಶಾಚಿಗಳು, ಸರ್ಪಗಳು, ಬ್ರಹ್ಮರಾಕ್ಷಕರು, ಕಳ್ಳರು ಮಾನಸಿಕ ವ್ಯಾಧಿಗಳು ತಗಲುವುದಿಲ್ಲವಂತೆ.
ಆದರೆ ಇಂದಿನ ಕಲಿಯುಗದಲ್ಲಿ ಇದು ಸಾಧ್ಯವಾಗದ ಕೆಲಸ. ಆದರೂ ನಾವು ನಮ್ಮ ಮನೋ ನೆಮ್ಮದಿಗೆ, ಏಕಾಗ್ರತೆಗೆ, ಶಾಂತಿಗೆ ಅನ್ಯ ಮಾರ್ಗವಿಲ್ಲದೆ ಆಧ್ಯಾತ್ಮದತ್ತ ವಾಲುತ್ತಿದ್ದೇವೆ. ಬಹಳಷ್ಟು ಜನಕ್ಕೆ ಕೈತುಂಬಾ ಹಣ ತಂದುಕೊಡುವ ಕೆಲಸ ನೆಮ್ಮದಿಯನ್ನು ಕೊಡವುದಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಮಾನಸಿಕ ನೆಮ್ಮದಿ ಕಳೆದುಕೊಂಡು ಹೊರಳಾಡುತ್ತಿರುತ್ತಾನೆ. ಹೀಗಾಗಿ ಆಧ್ಯಾತ್ಮದತ್ತ ವಾಲಿ ಒಂದಷ್ಟು ನೆಮ್ಮದಿ ಪಡೆಯುವ ಪ್ರಯತ್ನ ಮಾಡುತ್ತಾನೆ. ಮಂತ್ರಗಳನ್ನು ಜಪಿಸುತ್ತಾ ಮನಸ್ಸಿನ ವಿಕಾರತೆಯನ್ನು ದೂರ ಮಾಡಲು ಯತ್ನಿಸುತ್ತಾನೆ.