ಪ್ರಕೃತಿ, ಪ್ರಾಣಿ, ಪಕ್ಷಿಗಳೆಲ್ಲವೂ ಅವುಗಳ ಕೆಲಸ ಕಾರ್ಯವನ್ನು ಚಾಚೂ ತಪ್ಪದೆ ಮಾಡುತ್ತವೆ. ಅವುಗಳಲ್ಲೊಂದು ಶಿಸ್ತಿದೆ. ಅದನ್ನು ನಾವು ಪ್ರಕೃತಿ ನಿಯಮ ಎನ್ನುತ್ತೇವೆ. ಅದು ನಿಲ್ಲುವುದಿಲ್ಲ. ಅಷ್ಟೇ ಅಲ್ಲ ಯಾರನ್ನೂ ಕಾಯುವುದಿಲ್ಲ.
ಪಕ್ಷಿಗಳು, ಚಳಿಯಿರಲಿ, ಮಳೆಯಿರಲಿ ಅವುಗಳ ಸಮಯಕ್ಕೆ ಸರಿಯಾಗಿ ಗೂಡು ಬಿಟ್ಟು ಆಹಾರ ಅರಸಿ ಹಾರಿ ಹೋಗುತ್ತವೆ. ಪ್ರಾಣಿಗಳು ಕೂಡ ಅವುಗಳ ದೈನಂದಿನ ಕೆಲಸ ಏನಿದೆಯೋ ಅದನ್ನು ಚಾಚು ತಪ್ಪದೆ ಮಾಡುತ್ತವೆ. ಹೊಟ್ಟೆ ತುಂಬಲು ಏನು ಬೇಕೋ ಅದನ್ನು ಅವುಗಳಿಗೆ ತೋಚಿದಂತೆ ಮಾಡಿ ಮುಗಿಸುತ್ತವೆ.
ಅವುಗಳಿಗೆಲ್ಲ ಹೋಲಿಸಿದರೆ ಮನುಷ್ಯರಾದ ನಾವು ಬುದ್ದಿವಂತರು, ವಿವೇಚನಾಶೀಲರು. ಆದರೆ ನಾವು ಕೆಲವೊಮ್ಮೆ ಅವುಗಳಿಗಿಂತ ಕೀಳಾಗಿ ನಡೆದುಕೊಳ್ಳುತ್ತೇವೆ. ಚಳಿಯಿದ್ದರೆ ಚಳಿ.. ಬಿಸಿಲಿದ್ದರೆ ಅಯ್ಯೋ ಬಿಸಿಲು.. ಮಳೆ ಬಂದರೆ ಅಬ್ಬಾ ಮಳೆ.. ಹೀಗೆ ಗೊಣಗುತ್ತಾ ಅವುಗಳಿಗೆ ಹೆದರಿ ನಮ್ಮ ಕರ್ತವ್ಯ ಮರೆತು ಮುಸುಕು ಹಾಕಿ ಮಲಗಿ ಬಿಡುತ್ತೇವೆ. ಬಹಳಷ್ಟು ಸಂದರ್ಭಗಳಲ್ಲಿ ನಮ್ಮಲ್ಲಿಲ್ಲದ ಶಿಸ್ತುಗಳಿಂದಲೇ ನಮ್ಮ ಬದುಕು ಮೂರಾಬಟ್ಟೆ ಆಗಿರುವುದು ಗಮನಕ್ಕೆ ಬಂದಿರುತ್ತದೆ. ನಾವೇನು ಮಾಡಬೇಕೆಂದುಕೊಂಡಿದ್ದೇವೆಯೋ ಅದನ್ನು ಮಾಡಿ ಮುಗಿಸಬೇಕು. ಆದರೆ ನಮ್ಮಲ್ಲಿ ಹೆಚ್ಚಿನ ಜನ ಹೇಳಿದ ಸಮಯಕ್ಕೆ ಮಾಡುವುದಿಲ್ಲ. ಅಯ್ಯೋ ಮತ್ತೆ ಮಾಡಿದರಾಯಿತು ಎಂಬ ಉಡಾಫೆಯ ಮನೋಭಾವ ಹಲವು ಬಾರಿ ಅವಕಾಶದಿಂದ ವಂಚಿತವನ್ನಾಗಿ ಮಾಡಿ ಬಿಟ್ಟಿರುತ್ತದೆ.
ಆಮೇಲೆ ಮಾಡೋಣ.. ಹೇಗೋ ನಡೆಯುತ್ತೆ.. ಮುಂತಾದ ಅಸಡ್ಡೆಯ ಮಾತುಗಳು ಕೂಡ ನಮ್ಮನ್ನು ಇನ್ನಷ್ಟು ಸೋಮಾರಿಗಳನ್ನಾಗಿ ಮಾಡಿ ಬಿಡುತ್ತದೆ. ಪ್ರತಿದಿನ ಒಂದು ನಿರ್ದಿಷ್ಟ ಸಮಯದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಅದೇ ಸಮಯಕ್ಕೆ ಮಳೆಯೋ, ಚಳಿಯೋ ಇದ್ದರೆ ಬೆಚ್ಚಗೆ ಹೊದ್ದು ಮಲಗಿಬಿಡೋಣ ಎನಿಸಿ ಬಿಡುತ್ತದೆ. ಈಗ ಎದ್ದು ಮಾಡೋ ಕೆಲಸವನ್ನು ಮತ್ತೆ ಮಾಡಿದರಾಯಿತು ಎಂಬ ತೀರ್ಮಾನಕ್ಕೂ ಬಂದು ಬಿಡುತ್ತೇವೆ.
ಹಿರಿಯರು ಹೇಳುತ್ತಾರೆ ಸಮಯಕ್ಕೆ ಸರಿಯಾಗಿ ಏಳುವುದು, ಯುದ್ಧ ಮಾಡಲು ಸದಾ ಸನ್ನದ್ಧರಾಗಿರುವುದು, ಬಂಧುಗಳಿಗೆ ಅವರ ಪಾಲನ್ನು ಕೊಡುವುದು, ಸ್ವಯಂ ಅಕ್ರಮಣ ಮಾಡುತ್ತಾ ಊಟ ಮಾಡುವುದು. ಈ ನಾಲ್ಕು ಗುಣಗಳನ್ನು ಮನುಷ್ಯ ಕೋಳಿ ಹುಂಜದಿಂದ ಕಲಿಯ ಬೇಕಂತೆ. ಮಳೆಯಿರಲಿ, ಚಳಿಯಿರಲಿ ಹುಂಜ ಬೆಳಗಾಗುತ್ತಿದ್ದಂತೆಯೇ ಕೂಗಿ ಮಲಗಿದವರಿಗೆ ಬೆಳಗಾಯಿತು ಎಂಬ ಸಂದೇಶವನ್ನು ರವಾನಿಸುತ್ತದೆ. ಅದು ಅಪ್ಪಿ ತಪ್ಪಿಯೂ ಮತ್ತೆ ಕೂಗಿದರಾಯಿತು ಎಂದು ತೆಪ್ಪಗಿರುವುದಿಲ್ಲ. ಪ್ರಾಣಿಗಳನ್ನು ಗಮನಿಸಿದರೆ ದೈನಂದಿನ ಕ್ರಿಯೆ ಏನಿದೆಯೋ ಅದನ್ನು ಅವು ಚಾಚೂ ತಪ್ಪದೆ ಮಾಡುತ್ತಿರುತ್ತವೆ.
ನಾವು ಮನುಷ್ಯರು ಹಾಗಲ್ಲ. ನಮಗೆ ಮತ್ತೆ ಮಾಡಿದರಾಯಿತು.. ನಾಳೆ ಮಾಡಿದರಾಯಿತು.. ಎಂಬ ಕೆಲವು ಆಪ್ಷನ್ ಗಳಿವೆ. ಅದಕ್ಕೆ ಜೋತು ಬಿದ್ದು ನಮ್ಮನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಪ್ರಕೃತಿಯಲ್ಲಿ ಎಲ್ಲವೂ ಆಯಾಯ ಕಾಲಕ್ಕೆ ತಕ್ಕಂತೆ ಬದಲಾವಣೆ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪರಿಣಾಮವನ್ನು ಮನುಷ್ಯರಾದ ನಾವೇ ಎದುರಿಸಬೇಕಾಗುತ್ತದೆ.
ನೆರಳಿಗಾಗಿ ಮತ್ತು ಹಣ್ಣಿಗಾಗಿ ಮರವನ್ನು ಆಶ್ರಯಿಸುತ್ತೇವೆ. ಅದು ಕೆಲವೊಮ್ಮೆ ರುಚಿಯಾದ ಹಣ್ಣನ್ನು ಕೊಡದಿದ್ದರೂ ನೆರಳನ್ನಂತು ನೀಡಿಯೇ ನೀಡುತ್ತದೆ. ಮರ, ಗಿಡ, ಪ್ರಾಣಿ, ಪಕ್ಷಿಗಳಲ್ಲಿ ಒಂದೊಂದು ರೀತಿಯ ಉಪಕಾರದ ಗುಣವಿರುವಾಗ ಮನುಷ್ಯರಾದ ನಾವು ಮತ್ತೊಬ್ಬರಿಗೆ ಆಸರೆಯಾಗಿ ಬದುಕದೆ ಕೇವಲ ನಮಗಾಗಿ ನಾವು ಬದುಕುವುದರಲ್ಲಿ ಏನಿದೆ ಪ್ರಯೋಜನ?