ನಮ್ಮ ಜೀವನದಲ್ಲಿ ನಾವು ಎಲ್ಲಿ ತನಕ ತೃಪ್ತಿ ಪಟ್ಟುಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿವರೆಗೆ ಎಲ್ಲ ಇದ್ದರೂ ಏನೂ ಇಲ್ಲದವರಂತೆ ಅತೃಪ್ತ ಬದುಕನ್ನು ಸಾಗಿಸುತ್ತಿರುತ್ತೇವೆ.
ಹಿಂದಿನ ಕಾಲದವರು ಚಾಪೆ ಇದ್ದಷ್ಟೆ ಕಾಲು ಚಾಚು ಎಂಬ ಗಾದೆಯನ್ನು ರೂಢಿಗೆ ತಂದಿದ್ದಾರೆ. ಅದು ಎಷ್ಟು ಅರ್ಥಗರ್ಭಿತ. ನಾವು ಇರೋದರಲ್ಲಿಯೇ ತೃಪ್ತಿ ಪಡುವ ಮತ್ತು ಅದರೊಳಗೆ ಬದುಕನ್ನು ಖುಷಿಯಾಗಿ ಕಟ್ಟಿಕೊಳ್ಳುವ ನಿರ್ಧಾರ ಮಾಡಬೇಕು. ಆಗ ಇರುವುದರಲ್ಲಿ ಸಂತೋಷದಿಂದ ಬಾಳಲು ಸಾಧ್ಯವಾಗುತ್ತದೆ.
ನಮ್ಮ ನಿಮ್ಮ ನಡುವೆ ಎಲ್ಲರೂ ಒಂದೇ ರೀತಿಯಲ್ಲಿ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಮನೋಭಾವ. ಕೆಲವರು ಇದ್ದುದರಲ್ಲಿ ಖುಷಿಯಾಗಿ ಕಾಲ ಕಳೆಯುತ್ತಿರುತ್ತಾರೆ. ಇನ್ನು ಕೆಲವರಿಗೆ ಭವಿಷ್ಯದ ಭಯ. ಜತೆಗೆ ಕೂಡಿಡುವ, ಮನೆ ಕಟ್ಟಿಸುವ, ಹೆಂಡತಿ ಮಕ್ಕಳಿಗೆ ಒಡವೆ ಮಾಡಿಸುವ ಹೀಗೆ ಹತ್ತಾರು ಚಿಂತೆಗಳು..
ಇಂತಹ ಹತ್ತಾರು ಅರ್ಥವಿಲ್ಲದ ಚಿಂತೆಗಳು ನಮ್ಮನ್ನು ನೆಮ್ಮದಿಯಿಂದ, ತೃಪ್ತರಾಗಿ ಬದುಕಲು ಬಿಡುತ್ತಿಲ್ಲ. ಹೀಗಾಗಿಯೇ ನಾವು ಸಂತೋಷವಾಗಿ ಇರಬಹುದಾದರೂ ಸಂತೋಷವಾಗಿ ಬದುಕುತ್ತಿಲ್ಲ. ಸದಾ ಏನೋ ಕಳೆದುಕೊಂಡ ಸ್ಥಿತಿಯಲ್ಲಿ ಕಾಲಕಳೆಯುತ್ತಿರುತ್ತೇವೆ.
ಇವತ್ತಿನ ಪರಿಸ್ಥಿತಿಯಲ್ಲಿ ನ್ಯಾಯ ಮಾರ್ಗದಲ್ಲಿ ಎಷ್ಟೇ ದುಡಿದರೂ ಅಂದುಕೊಂಡದ್ದನ್ನು ಮಾಡುವುದು ಅಸಾಧ್ಯವೇ ಹೀಗಾಗಿಯೇ ಕೆಲವರು ಅನ್ಯಾಯದ ಹಾದಿಯಲ್ಲಿ ಸಾಗಿ ಒಂದಷ್ಟು ಸಂಪಾದನೆ ಮಾಡಿ ನಾನು ಸತ್ತ ಮೇಲೂ ಮಕ್ಕಳು ಮೊಕ್ಕಳು ಸುಖವಾಗಿ ಇರಲಿ ಎಂದು ಬಯಸುತ್ತಾರೆ. ಸಿರಿತನ ಇರುವುದು ಸಂಪಾದಿಸುವ ಹಣದಲ್ಲಿ. ಮಾಡಿಡುವ ಆಸ್ತಿಯಲ್ಲಿ ಎಂಬ ದಡ್ಡತನ ನಮ್ಮ ಸುಖವನ್ನು ಕಿತ್ತುಕೊಂಡು ನೆಮ್ಮದಿಯಲ್ಲದ ಬದುಕಿಗೆ ದೂಡುತ್ತದೆ.
ನಮ್ಮ ಮಕ್ಕಳಿಗೆ ಸಂಪಾದನೆಯ ಹಾದಿಯನ್ನು ಹೇಳಿಕೊಡುತ್ತಿದ್ದೇವೆ. ಸಂಪಾದನೆ ಮಾಡಿ ಒಂದಷ್ಟು ಹಣ ಕೂಡಿಟ್ಟುಕೊಂಡರೆ ನೆಮ್ಮದಿಯಾಗಿ ಬದುಕಬಹುದು ಎಂಬುದು ನಮ್ಮ ಕಲ್ಪನೆ. ಹಾಗಾಗಿಯೇ ಏನು ಓದಿದರೆ ಯಾವ ಕೆಲಸ ಸಿಗುತ್ತೆ? ಎಷ್ಟು ಸಂಪಾದಿಸಬಹುದು ಎಂಬ ಲೆಕ್ಕಚಾರದಲ್ಲಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಕ್ಕಳನ್ನು ಓದಿಸುತ್ತಿದ್ದೇವೆ.
ಓದು ಮುಗಿದ ತಕ್ಷಣ ಅವರು ಸಂಪಾದನೆಯ ದಾರಿ ಹಿಡಿದು ಕೈತುಂಬಾ ಹಣವನ್ನು ಸಂಪಾದಿಸುತ್ತಾರೆ. ಹಣ ಹೆಚ್ಚಾದಂತೆ ಅದನ್ನು ಖರ್ಚು ಮಾಡುವ ಮಾರ್ಗ ಹುಡುಕುತ್ತಾರೆ.
ಇವತ್ತು ನಾವು ನಮ್ಮನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದ್ದೇನೆಂದರೆ ನಾವು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಸುಸಂಸ್ಕೃತ ಬದುಕಿಗೆ ಬೇಕಾದ ಗುಣಗಳನ್ನು ಕಲಿಸುತ್ತಿದ್ದೇವೆಯೇ? ಅವರಿಗೆ ಇರೋದ್ರಲ್ಲಿ ನೆಮ್ಮದಿಯಾಗಿ ಬದುಕೋದನ್ನು ಹೇಳಿ ಕೊಡುತ್ತಿದ್ದೇವೆಯೇ?
ಬಹಳಷ್ಟು ಹೆತ್ತವರಿಗೆ ನಮ್ಮ ಮಕ್ಕಳು ಯಾರಿಗಿಂತಲೂ ಕಡಿಮೆ ಇಲ್ಲದಂತೆ ಬದುಕಬೇಕೆಂಬ ಹುಚ್ಚು ಬಯಕೆಯಿದೆ. ಹಾಗಾಗಿ ಅವರು ಮಕ್ಕಳು ಕೇಳಿದ್ದನ್ನೆಲ್ಲಾ ಕೊಡುತ್ತಾ ಹೋಗುತ್ತಾರೆ. ನಾವಂತೂ ಏನೂ ಮಾಡಿಲ್ಲ ಮಕ್ಕಳಾದರೂ ಮಾಡಲಿ ಎಂಬ ಮನೋಭಾವ ಅವರದ್ದಾಗಿರುತ್ತದೆ. ಆದರೆ ಅದು ಮುಂದೊಂದು ದಿನ ಮುಳುವಾಗಿಯೂ ಪರಿಣಮಿಸಬಹುದು ಎಂಬುದು ಗೊತ್ತೇ ಆಗುವುದಿಲ್ಲ.
ಇವತ್ತು ವಿದ್ಯಾವಂತರೇ ಕಳ್ಳತನ, ವಂಚನೆ, ಸುಲಿಗೆ, ದರೋಡೆ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಜೈಲ್ ಸೇರುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ನಾವು ಎಲ್ಲಿ ತನಕ ಇರೋದ್ರಲ್ಲಿ ಖುಷಿಯಾಗಿ ಬದುಕೋದನ್ನು ಕಲಿಯುವುದಿಲ್ಲವೋ? ಹಾಗೆಯೇ ಮಕ್ಕಳಿಗೆ ಅದನ್ನು ಕಲಿಸುವುದಿಲ್ಲವೋ ಅಲ್ಲಿ ತನಕ ನಾವು ಏನೇ ತಂದು ಗುಡ್ಡೆ ಹಾಕಿಕೊಂಡರೂ ಸುಖವಾಗಿ ದಿನ ಕಳೆಯಲು ಸಾಧ್ಯವಾಗುವುದಿಲ್ಲ ಎಂಬುದು ನೆನಪಿರಲಿ…