ನಾವು ಸಂಘಜೀವಿಗಳು ಹಾಗಾಗಿ ಒಂದಲ್ಲೊಂದು ಕಾರಣಕ್ಕೆ ಬೇರೆಯವರ ಒಡನಾಟದಲ್ಲಿರಬೇಕಾಗುತ್ತದೆ. ಹೀಗಿರುವಾಗ ನಾವು ಇತರರಿಗೂ ಇಷ್ಟವಾಗಿ ಬದುಕೋದು ಅನಿವಾರ್ಯವಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ತಮ್ಮ ಒಳಗಿನ ಮಾನಸಿಕ ತುಮುಲಗಳು, ನೋವುಗಳು ಏನಿದ್ದರೂ ಅವುಗಳನ್ನು ತೋರ್ಪಡಿಸದಂತೆ ಬದುಕಬೇಕಾಗುತ್ತದೆ. ಒಮ್ಮೆ ಮೈಮರೆತರೆ ಅದರಿಂದ ವ್ಯಕ್ತಿತ್ವಕ್ಕೆ ಕಪ್ಪುಚುಕ್ಕೆಯಾಗುವ ಸ್ಥಿತಿ ಹೆಚ್ಚಾಗಿರುತ್ತದೆ.
ನಮ್ಮಲ್ಲಿ ಹೆಚ್ಚಿನವರು ಮಾನಸಿಕ ಗೊಂದಲದಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ. ಅದರಲ್ಲೂ ಮಧ್ಯಮವರ್ಗದ ಹೆಚ್ಚಿನ ಮಂದಿ ಕನಸು ಕಟ್ಟುವುದರಲ್ಲಿ, ಏನೇನೋ ಯೋಚಿಸುವುದರಲ್ಲಿ ತಮ್ಮ ಬದುಕನ್ನು ಕಳೆಯುತ್ತಿರುತ್ತಾರೆ. ಜತೆಗೆ ಅದು ಈಡೇರದೆ ಹೋದಾಗ ಮಾನಸಿಕವಾಗಿಯೂ ಕುಗ್ಗಿ ಬಿಡುತ್ತಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಇದ್ದುದರಲ್ಲಿ ನೆಮ್ಮದಿಯಾಗಿ ಬದುಕಬೇಕೆಂದು ಬಯಸುವವರು ಕಡಿಮೆಯೇ. ಒಂದು ರೀತಿಯಲ್ಲಿ ನಮ್ಮದು ಅನುಕರಣೀಯ ಮತ್ತು ಅವನಿಗಿಂತ ನಾನೇನು ಕಡಿಮೆಯಾಗಬಾರದೆಂಬ ಮನೋಭಾವದಿಂದಾಗಿ ನಮಗೆ ಇದ್ದುದರಲ್ಲಿ ನೆಮ್ಮದಿಯಾಗಿ ಬದುಕೋದು ಕಷ್ಟವಾಗುತ್ತಿದೆ.
ಸದಾ ನಮ್ಮ ಬದುಕು ಏನೇನೋ ಚಿಂತಿಸುತ್ತಾ ಒತ್ತಡದಲ್ಲಿರುವುದರಿಂದ ಮೇಲ್ಮೋಟಕ್ಕೆ ಆರೋಗ್ಯವಾಗಿದ್ದರೂ ಮನಸ್ಸಿನ ತುಂಬಾ ಗೊಂದಲಗಳನ್ನು ತುಂಬಿಕೊಂಡು ಕೆಲವೊಮ್ಮೆ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತೇವೆ. ಇದರಿಂದ ನಾವು ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನವರಿಗೂ ನಾವು ಸಮಸ್ಯೆಯಾಗಿ ಬಿಡುತ್ತೇವೆ. ನಮ್ಮ ವರ್ತನೆಗಳು ಬೇರೆಯವರಿಗೆ ಕಿರಿಕಿರಿ ತರುವುದರಿಂದ ಅವರು ನಮ್ಮಿಂದ ಅಂತರ ಬಯಸುತ್ತಾರೆ. ಇದು ನಿರಂತರವಾಗಿ ಮುಂದುವರೆದರೆ ನಾವು ಒಬ್ಬಂಟಿಗಳಾಗಿ ಬಿಡುವ ಸಾಧ್ಯತೆ ಹೆಚ್ಚಾಗಿ ಬಿಡುತ್ತದೆ. ನಾವು ಸಂಘಜೀವಿಗಳು ಒಂದಲ್ಲ ಒಂದು ಕಾರಣಕ್ಕೆ ನಾವು ಬೇರೆಯವರೊಂದಿಗೆ ಬೆರೆಯಲೇ ಬೇಕು ಹೀಗಿರುವಾಗ ನಮ್ಮ ನಡತೆ ಆಕರ್ಷಣೀಯವಾಗಿರ ಬೇಕೇ ಹೊರತು, ನಮ್ಮಿಂದ ದೂರ ಹೋಗುವಂತೆ ಅಲ್ಲ. ಆದ್ದರಿಂದ ನಾವು ನಮ್ಮ ವ್ಯಕ್ತಿತ್ವದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಒಳಿತು.
ಕೆಲವೊಮ್ಮೆ ನಾವು ಮಾಡಿದ್ದೇ ಸರಿ ಎಂಬ ಹಠವೂ ನಮ್ಮನ್ನು ಇತರರಿಂದ ದೂರ ಸರಿಯುವಂತೆ ಮಾಡಿ ಬಿಡುತ್ತದೆ. ಮನೆಯಲ್ಲಿ, ಕಚೇರಿಗಳಲ್ಲಿ ಜತೆಗೂಡಿ ಕೆಲಸ ಮಾಡುವವರು ತಮ್ಮ ಬದುಕಿಗೆ ಒಂದಷ್ಟು ಶಿಸ್ತುಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು. ಬೇರೆಯವರು ನಮಗೆ ಹೊಂದಿಕೆಯಾಗುತ್ತಿಲ್ಲ ಎನ್ನುವುದಾದರೆ ಕೆಲವೊಮ್ಮೆ ನಾವೇ ಅವರಿಗೆ ಹೊಂದಿಕೊಳ್ಳುವುದು ಅನಿವಾರ್ಯ.
ಒಂದು ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕಾದರೆ ನಮ್ಮಲ್ಲಿ ನಿರ್ಮಲ ಮನಸ್ಸಿರಬೇಕು. ಅದು ಸಾಧ್ಯವಾಗಬೇಕಾದರೆ ಮನಸ್ಸಿನ ಚಂಚಲತೆಗಳನ್ನು ತಡೆಯುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಅದು ಬೆಳೆಯಬೇಕೆಂದರೆ ಇತರರು ನಮ್ಮಂತೆ ಎಂದರಿತು ಪ್ರೀತಿಸುವುದನ್ನು ರೂಢಿಸಿಕೊಳ್ಳಬೇಕು. ಅವರಿಗಿಂತ ನಾನೇನು ಕಡಿಮೆ ಎಂದು ಪೈಪೋಟಿಗೆ ಬೀಳುವ ಬದಲು ಅವರ ಬದುಕು ಅವರಿಗೆ.. ನಮ್ಮ ಬದುಕು ನಮಗೆ ಎಂಬ ತೀರ್ಮಾನಕ್ಕೆ ಬಂದು ನಮ್ಮದೇ ಬದುಕನ್ನು ಕಟ್ಟಿಕೊಳ್ಳುವುದನ್ನು ಕಲಿತು ಕೊಂಡರೆ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತದೆ.