ನಮ್ಮ ಎಲ್ಲ್ಲ ಚಟುವಟಿಕೆಗಳಿಗೂ ಮನಸ್ಸೇ ಕಾರಣ. ನಾವು ಮಾಡುವ ಎಲ್ಲ ರೀತಿಯ (ಒಳ್ಳೆಯ ಕಾರ್ಯವಿರಲಿ, ಕೆಟ್ಟ ಕಾರ್ಯವೇ ಆಗಿರಲಿ) ಕಾರ್ಯಗಳಿಗೆ ಮನಸ್ಸೇ ಚಾಲಕ ಎಂದರೆ ತಪ್ಪಾಗಲಾರದು. ನಮ್ಮ ಶರೀರವನ್ನು ಸನ್ಮಾರ್ಗದಲ್ಲಿ ಅಥವಾ ರ್ದುಮಾರ್ಗದಲ್ಲಿ ನಡೆಸುವಲ್ಲಿಯೂ ಮನಸ್ಸೆಂಬ ಚಾಲಕ ಬಹು ಮುಖ್ಯ ಪಾತ್ರ ವಹಿಸುತ್ತಾನೆ.
ಒಬ್ಬ ವ್ಯಕ್ತಿ ದುಷ್ಟನಾಗಿ ಗುರುತಿಸಿಕೊಳ್ಳುತ್ತಿದ್ದರೆ ಅದಕ್ಕೆ ಅವನ ಮನಸ್ಸೇ ಕಾರಣವಾಗಿರುತ್ತದೆ ಎಂಬುವುದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಕೆಲವೊಮ್ಮೆ ನಮ್ಮ ಶರೀರವನ್ನು ಆಕ್ರಮಿಸುವ ದುಷ್ಟ ಆಲೋಚನೆಗಳು ಮನಸ್ಸಿನ ಮೇಲೆ ಪ್ರಭಾವ ಬೀರಿ ದುಷ್ಟ ಕಾರ್ಯಗಳನ್ನು ಶರೀರದ ಮೂಲಕ ಮಾಡಿಸಿ ಬಿಡುತ್ತದೆ. ಒಂದು ಕ್ಷಣದ ಹಿಡಿತ ಕಳೆದುಕೊಂಡು ಮನಸ್ಸು ಮಾಡಿಸುವ ಕಾರ್ಯವಿದೆಯಲ್ಲ ಅದು ನಮ್ಮನ್ನು ಇರುವಷ್ಟು ದಿನವೂ ಕಾಡುತ್ತದೆ.
ಹಾಗೆ ನೋಡಿದರೆ ಮನಸ್ಸು ಎಂಬುವುದು ನಮಗೆ ಕಾಣುವಂತಹದಲ್ಲ. ಸ್ವಾಮಿ ವಿವೇಕಾನಂದರು ಮನಃಶಾಸ್ತ್ರವನ್ನು ಕುರಿತು ವ್ಯಾಖ್ಯಾನಿಸಿರುವ ಸಂಗತಿಗಳನ್ನೇ ತೆಗೆದುಕೊಂಡದ್ದೇ ಆದರೆ ಮನಸ್ಸು ಎನ್ನುವುದು ಈ ಸ್ಥೂಲ ಶರೀರದ ಒಳಗೆ ಇರುವ ಒಂದು ಸೂಕ್ಷ್ಮವಾದ ಅಂಗ. ಶರೀರವೆನ್ನುವುದು ಅದರ ಹೊರಗಿನ ಹೊದಿಕೆ ಅಥವಾ ಕವಚ ಮಾತ್ರ. ಮನಸ್ಸೆಂಬುವುದು ಶರೀರದ ಸೂಕ್ಷ್ಮತರ ಭಾಗವಾಗಿರುವುದರಿಂದ ಈ ದೇಹ ಮತ್ತು ಮನಸ್ಸುಗಳೆರಡೂ ಒಂದು ಮತ್ತೊಂದರ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಕೆಲವೊಮ್ಮೆ ಶಾರೀರಿಕ ಅಸ್ವಾಸ್ಥ್ಯ ಮನಸ್ಸಿನ ಮೇಲೆ, ಮಾನಸಿಕ ಅಸ್ವಾಸ್ಥ್ಯ ಅಥವಾ ಉದ್ವೇಗ ಶರೀರದ ಮೇಲೆ ಪರಿಣಾಮವನ್ನುಂಟು ಮಾಡುವ ಪ್ರಸಂಗಗಳು ನಡೆಯುತ್ತವೆ. ಮನಸ್ಸಿನ ಹಿಂದೆ ಆತ್ಮವಿದೆ. ಅದೇ ಮನುಷ್ಯನ ನಿಜವಾದ ಅಸ್ತಿತ್ವ, ಶರೀರ ಮತ್ತು ಮನಸ್ಸು ಅದರ ಮೂಲ ದ್ರವ್ಯಗಳು. ಆತ್ಮವೆಂಬುವುದು ಶುದ್ಧವಾದ ಒಂದು ಚೈತನ್ಯ. ಮನಸ್ಸು ಎಂಬುವುದು ಆತ್ಮ ಅಲ್ಲ. ಅದು ಆತ್ಮದಿಂದ ಬೇರೆಯೇ ಆದದ್ದು. ಮನಸ್ಸು ಎಂಬುವುದು ಆತ್ಮದ ಒಂದು ಉಪಕರಣದಂತಿದ್ದು, ಅದರ ಮೂಲಕ ಆತ್ಮವು ಬಹಿರಂಗ ಜಗತ್ತನ್ನು ಗ್ರಹಿಸುತ್ತದೆ.
ತಮಸ್ಸು ಮತ್ತು ಚಂಚಲತೆಗಳು ಮನಸ್ಸಿನ ಸಾಮಾನ್ಯ ಸ್ಥಿತಿಯಾಗಿದೆ. ತಮಸ್ಸು ಸ್ಥಿತಿಯಲ್ಲಿ ಮನುಷ್ಯನು ಜಡನೂ ನಿಸ್ತೇಜನೂ ಆಗುತ್ತಾನೆ. ಚಾಂಚಲ್ಯದ ಸಮಯಗಳಲ್ಲಿ ಆತ ಹೊಯ್ದಾಡುವ ಸ್ವಭಾವದವನಾಗುತ್ತಾನೆ. ಬಹಳಷ್ಟು ಮಂದಿ ಏಕಾಗ್ರತೆಗೊಳಿಸುವಲ್ಲಿ ಸೋಲುತ್ತಾರೆ. ಮನಸ್ಸಿನ ಹತೋಟಿ ಅಷ್ಟೊಂದು ಸುಲಭವಲ್ಲ. ಹಾಗೆಂದು ಕಷ್ಟವೂ ಅಲ್ಲ. ಯಾವ ಮನುಷ್ಯ ಮನಸ್ಸನ್ನು ಏಕಾಗ್ರತೆಗೆ ತರುತ್ತಾನೆಯೋ ಅವನು ತಮ್ಮ ಏಕಾಗ್ರ ಮನಸ್ಸಿನೊಂದಿಗೆ ಯಾವ ಕ್ಷೇತ್ರದ ವ್ಯವಹಾರಕ್ಕೆ ಇಳಿದರೂ ಅಲ್ಲಿ ಯಶಸ್ಸು ಪಡೆಯುತ್ತಾನೆ. ಒಬ್ಬ ವ್ಯಾಪಾರಿ ಏಕಾಗ್ರ ಮನಸ್ಸಿನಿಂದ ತನ್ನ ವ್ಯಾಪಾರದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದುತ್ತಾನೆ. ಏಕಾಗ್ರ ಮನಸ್ಸಿನ ಸಂಗೀತಗಾರ ಮಹಾನ್ ಸಂಗೀತಗಾರನಾಗುತ್ತಾನೆ.
ಸ್ವಾಮಿ ವಿವೇಕಾನಂದರು ಮನಸ್ಸು ಹತೋಟಿಗೆ ತರುವ ಬಗ್ಗೆ ಹೀಗೆಯೇ ಹೇಳಿದ್ದಾರೆ. ಎಲ್ಲೆಲ್ಲೋ ಅಂಡಲೆಯುವ ಮನಸ್ಸನ್ನು ಹಿಡಿದು ಎಳೆದು ತಂದು ಒಂದು ವಿಚಾರದ ಗೂಟಕ್ಕೆ ಮೊದಲು ಕಟ್ಟಿ ಹಾಕಬೇಕು. ಈ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕು. ನಮ್ಮ ಸಂಕಲ್ಪ ಶಕ್ತಿಯಿಂದ ಮನಸ್ಸನ್ನು ದೃಢವಾಗಿ ನಿಲ್ಲಿಸಿ ಭಗವಂತನ ಮಹಿಮೆಗಳನ್ನು ಕುರಿತು ಧ್ಯಾನಿಸಬೇಕು. ಒಮ್ಮೆ ಮನಸ್ಸನ್ನು ಗೆದ್ದೆನೆಂದರೆ ಆತ ಅತ್ಯುನ್ನತ ಸ್ಥಿತಿಯನ್ನು ತಲಪುವುದರಲ್ಲಿ ಸಂಶಯವಿಲ್ಲ.