ಮಗುವಿಗೆ ತಾಯಿಯ ಹಾಲೇ ಸರ್ವೋತ್ಕೃಷ್ಟ ಎನ್ನುವುದು ಗೊತ್ತೇ ಇದೆ. ಹೀಗಾಗಿಯೇ ಮಗುವಿಗೆ ತಾಯಿಯ ಹಾಲನ್ನು ತಪ್ಪದೆ ಕೊಡಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ತಾಯಿಯ ಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳಿರುವುದರಿಂದ ಆಗಾಗ್ಗೆ ಹಾಲುಣಿಸುವುದು ಅಗತ್ಯವಾಗಿದೆ.
ಸಾಮಾನ್ಯವಾಗಿ ಮಗುವಿಗೆ ಹಾಲುಣಿಸುವ ಹೆಚ್ಚಿನ ತಾಯಂದಿರು ಹಾಲಿನ ಸಮಸ್ಯೆಯಿಂದ ಬಳಲುತ್ತಾರೆ. ಹೆಚ್ಚಿನ ಹಾಲು ಉತ್ಪತ್ತಿಯಾಗದೆ ಮಗುವಿಗೆ ಹಾಲು ಸಿಗದೆ ತೊಂದರೆಗೊಳಗಾಗುತ್ತಾರೆ. ಹಾಲುಣಿಸುವ ತಾಯಂದಿರು ಹಾಲು ಉತ್ಪತ್ತಿಯಾಗಬೇಕಾದರೆ ಅಗತ್ಯ ಪೋಷಕಾಂಶವುಳ್ಳ ಆಹಾರ ಸೇವಿಸುವುದು ಕೂಡ ಅಗತ್ಯವಾಗಿದೆ.
ಹೆಚ್ಚಿನ ತಾಯಂದಿರು ಹೆಚ್ಚಿನ ಹಾಲು ಉತ್ಪತ್ತಿಯಾಗುತ್ತಿಲ್ಲ ಎಂಬ ಕಾರಣಕ್ಕೆ ಮಗುವಿಗೆ ಹಾಲು ಕೊಡುವುದನ್ನು ನಿಲ್ಲಿಸಿ ಬಿಡುತ್ತಾರೆ. ಅದರ ಬದಲಿಗೆ ಹಾಲು ಉತ್ಪತ್ತಿಯಾಗುವಂತಹ ಆಹಾರವನ್ನು ಸೇವಿಸುವುದು ಒಳ್ಳೆಯದು. ಜತೆಗೆ ಕೆಲವೊಂದು ನಿಯಮಗಳನ್ನು ಪಾಲಿಸುವುದು ಕೂಡ ಅಗತ್ಯ.
ವೈದ್ಯರು ಹೇಳುವ ಪ್ರಕಾರ ಮಗುವಿಗೆ ಹಾಲುಣಿಸುವಾಗ ಒಂದೇ ಸ್ತನದಿಂದ ಹಾಲುಣಿಸಬಾರದು, ಆಗಾಗ ಬದಲಾಯಿಸುತ್ತಿರಬೇಕು. ಎರಡು ಸ್ತನಗಳಿಂದಲೂ ಮಗು ಹಾಲು ಕುಡಿಯುವಂತೆ ನೋಡಿಕೊಳ್ಳಬೇಕು. ಕನಿಷ್ಟ ಎರಡರಿಂದ ಮೂರು ಬಾರಿ ಹೀಗೆ ಮಾಡುವುದು ಸೂಕ್ತ.
ಹಾಲು ಹೆಚ್ಚಾಗಲು ಮೆಂತೆ ಬೀಜದ ಕಸಾಯವೂ ಉಪಯುಕ್ತ. ಮೆಂತೆ ಬೀಜವನ್ನು ಪುಡಿಮಾಡಿ ಅದನ್ನು ಹಾಲಿಗೆ ಬೆರೆಸಿ ಕುಡಿಯುವುದರಿಂದ ಎದೆಹಾಲು ಹೆಚ್ಚಳವಾಗುತ್ತಿದೆ. ಈ ಕಸಾಯ ಬಾಯಿಗೆ ರುಚಿಯಾಗದೆ ಕಹಿಯಾದರೂ ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಬೆಳ್ಳುಳ್ಳಿ ಕೂಡ ಉತ್ತಮವೇ. ಇದನ್ನು ಹಸಿಯಾಗಿ ಸೇವಿಸದೆ ಅಡುಗೆಯಲ್ಲಿ ಹೆಚ್ಚಾಗಿ ಬಳಸಿದರೆ ಒಳ್ಳೆಯದು. ಇದರೊಂದಿಗೆ ಬೆಣ್ಣೆ, ತುಪ್ಪವನ್ನು ಸೇವಿಸುತ್ತಿರಬೇಕು. ಪಪ್ಪಾಯ ಹಣ್ಣಿನ ಮಿಲ್ಕ್ ಶೇಕ್ ಕೂಡ ಹಾಲನ್ನು ಉತ್ಪತ್ತಿ ಮಾಡುವಲ್ಲಿ ಪಾತ್ರ ವಹಿಸುತ್ತದೆ. ಜತೆಗೆ ಇದು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕುವಲ್ಲಿಯೂ ಉಪಯೋಗಕ್ಕೆ ಬರುತ್ತದೆ.
ಇನ್ನು ರಾತ್ರಿ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉತ್ತಮ. ಹೀಗೆ ಮಾಡುವುದರಿಂದ ಎದೆಹಾಲು ಉತ್ಪತ್ತಿಗೆ ಸಹಕಾರಿಯಾಗುತ್ತದೆ. ಕಾಫಿ, ಟೀ ಕುಡಿಯುವ ಅಭ್ಯಾಸ ಇರುವವರು ಅದನ್ನು ಕಡಿಮೆ ಮಾಡಿಕೊಂಡು ಬದಲಿಗೆ ಬಾದಾಮಿ ಹಾಲನ್ನು ಸೇವಿಸಬೇಕು.
ಸೋರೆಕಾಯಿ, ಹಾಗಲಕಾಯಿ, ಪಾಲಕ್, ಬೀನ್ಸ್, ಸಿಹಿಗೆಣಸು ಮೊದಲಾದ ತರಕಾರಿಗಳಲ್ಲಿ ಹಾಲನ್ನು ಉತ್ಪತ್ತಿ ಮಾಡುವ ಗುಣಗಳಿದ್ದು ಅವುಗಳನ್ನು ಯಥೇಚ್ಛವಾಗಿ ಸೇವಿಸಬೇಕು. ಇದರೊಂದಿಗೆ ಹಣ್ಣುಗಳನ್ನು ಆಗಾಗ್ಗೆ ಸೇವಿಸುತ್ತಿರಬೇಕು.
ಇಷ್ಟೇ ಅಲ್ಲದೆ ಹಾಲುಣಿಸುವ ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯಲೇ ಬೇಕಾಗುತ್ತದೆ. ಇದಲ್ಲದೆ ಉಗುರು ಬೆಚ್ಚಗಿನ ನೀರಿಗೆ ಲಿಂಬೆರಸ ಮಿಶ್ರಣ ಮಾಡಿ ಕುಡಿಯುವುದು ಕೂಡ ಉತ್ತಮವೇ. ಓಟ್ಸ್ ಸೇವನೆಯೂ ಆರೋಗ್ಯಕಾರಿಯಾಗಿದ್ದು, ಇದರಲ್ಲಿ ಪೋಷಕಾಂಶಗಳ ಗುಣಗಳು ಹೆಚ್ಚಿರುವುದರಿಂದ ಅದು ದೇಹಕ್ಕೆ ಶಕ್ತಿ ನೀಡುತ್ತದೆ.
ತುಳಸಿ ಎಲೆಯನ್ನು ಹಸಿಯಾಗಿ ಅಥವಾ ಜೇನಿನ ಜೊತೆ ಮಿಶ್ರಣ ಮಾಡಿಕೊಂಡು ಸೇವಿಸುವುದರಿಂದಲೂ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. ಹಾಲುಣಿಸುವ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಬೇಕು. ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಾಗ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ತಾಯಂದಿರು ಆರೋಗ್ಯವಾಗಿದ್ದಷ್ಟು ಮಗುವಿಗೆ ಹಾಲುಣಿಸಲು ಸಹಕಾರಿಯಾಗುತ್ತದೆ.