News Kannada
Friday, December 09 2022

ಆರೋಗ್ಯ

ಕೆಮ್ಮು-ಸೀನಿಂದಲೂ ಹೆಚ್1ಎನ್1 ಹರಡಬಹುದು ಎಚ್ಚರ!

Photo Credit :

ಕೆಮ್ಮು-ಸೀನಿಂದಲೂ ಹೆಚ್1ಎನ್1 ಹರಡಬಹುದು ಎಚ್ಚರ!

ಕೆಮ್ಮುವಾಗ ಮತ್ತು ಸೀನುವಾಗ ಎಲ್ಲರೂ ಎಚ್ಚರವಾಗಿರಬೇಕು. ನಿಮ್ಮ ಪಕ್ಕದಲ್ಲಿರುವ ವ್ಯಕ್ತಿ ಸೀನುತ್ತಿದ್ದರೆ, ಕೆಮ್ಮುತ್ತಿದ್ದರೆ ಎಚ್ಚರವಾಗಿರಿ ಕಾರಣ ಆತನಲ್ಲಿರುವ ಹೆಚ್1ಎನ್1 ಸೋಂಕು ನಿಮಗೂ ಹರಡುವ ಸಾಧ್ಯತೆ ಬಹಳವಾಗಿದೆ.

ಈಗಾಗಲೇ ಹೆಚ್1ಎನ್1 ಎಲ್ಲೆಡೆ ಹರಡಿದ್ದು, ಇದಕ್ಕೆ ಬಲಿಯಾದವರೂ ಇದ್ದಾರೆ. ಇದಕ್ಕೆ ಕಾರಣ ಸೋಂಕು ತಗುಲಿದ ತಕ್ಷಣ ವೈದ್ಯರ ಬಳಿಗೆ ತೆರಳಿ ಚಿಕಿತ್ಸೆ ನೀಡದಿರುವುದಾಗಿದೆ. ಕೊನೆ ಘಳಿಗೆಯಲ್ಲಿ ಕಾಯಿಲೆ ಪತ್ತೆಯಾದರೂ ಕೆಲವೊಮ್ಮೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಕಾಯಿಲೆಯತ್ತ ಜಾಗ್ರತೆಯಿಂದ ಇರುವುದು ಒಳಿತು. ಎಲ್ಲ ಕಡೆಗಳಲ್ಲಿಯೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಚ್1ಎನ್1 ರೋಗದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಬಹಳಷ್ಟು ಮಂದಿ ಹೆಚ್1ಎನ್1 ರೋಗವು ಇನ್ಫ್ಲೂಯೆಂಜಾ ಎ ಎಂಬ ವೈರಸ್ ಸೋಂಕಿನಿಂದ ಹರಡುವ ಕಾಯಿಲೆ ಎಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡು ಚಳಿಯ ಜತೆ ದೇಹ ಬಳಲುತ್ತಾ.. ಕೆಲವೊಮ್ಮೆ ವಾಂತಿ ಬೇಧಿ ಆಗುವುದು. ಉಸಿರಾಟದಲ್ಲಿ ತೊಂದರೆ ಕಾಣಿಸಿದರೂ ಇದು ಮಾಮೂಲಿ ಜ್ವರ ಎಂಬಂತೆ ಯಾವುದಾರೊಂದು ಮಾತ್ರೆ ತೆಗೆದುಕೊಂಡು ತೆಪ್ಪಗಾಗುತ್ತಾರೆ.

ಆದರೆ ಕಾಯಿಲೆ ಕಡಿಮೆಯಾಗದೆ ಇದ್ದಾಗ ವೈದ್ಯರ ಬಳಿ ತೆರಳುತ್ತಾರೆ. ವೈದ್ಯರು ಪರೀಕ್ಷೆ ನಡೆಸಿ ಹೆಚ್1ಎನ್1 ಎಂದು ತಿಳಿಸಿದಾಗ ಗಾಬರಿಯಾಗುತ್ತಾರೆ. ಆರಂಭಿಕ ಹಂತವಾದರೆ ಚಿಕಿತ್ಸೆ ಫಲಕಾರಿಯಾಗಿ ರೋಗಿ ಉಳಿಯಬಹುದು. ಆದರೆ ಉಲ್ಭಣಗೊಂಡಿದ್ದರೆ ಕೆಲವೊಮ್ಮೆ ಸಾವೀಗೀಡಾಗುವ ಸಂದರ್ಭವೂ ಇದೆ. ಆದ್ದರಿಂದ ಮೇಲೆ ಹೇಳಿರುವ ಕೆಲವು ಲಕ್ಷಣಗಳು ಕಂಡು ಬಂದರೆ ವೈದ್ಯರ ಬಳಿಗೆ ತೆರಳುವುದು ಒಳ್ಳೆಯದು. ಹೆಚ್1ಎನ್1 ಕಾಣಿಸಿಕೊಂಡರೆ ಭಯಗೊಳ್ಳುವ ಅಗತ್ಯವಿಲ್ಲ. ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿ ಲಭ್ಯವಿದ್ದು ಒಸೆಲ್ಟಮಿವರ್ (ಟ್ಯಾಮಿಫ್ಲೂ) ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಪಡೆಯಬಹುದು.

ಹೆಚ್1ಎನ್1 ರೋಗಕ್ಕೆ ಒಳಗಾದವರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವ ಟಿಶ್ಯೂ ಪೇಪರ್ ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆಯಬೇಕು. ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರುವುದು ಉತ್ತಮ. ಸೂಕ್ಷ್ಮ ಹಾಗೂ ಚಿಕ್ಕಮಕ್ಕಳಿಂದ ದೂರವಿರಬೇಕು. ವಿಶ್ರಾಂತಿ ಪಡೆಯಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

ಹೆಚ್1ಎನ್1 ಸೋಂಕಿತರ ಬಳಿ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಮಾಡಬಾರದು. ವೈದ್ಯರ ಸಲಹೆ ಪಡೆಯದೆ ಔಷಧಿ ಸೇವನೆ ಮಾಡಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೆ ಕೆಮ್ಮುವುದು ಹಾಗೂ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಮುಟ್ಟಬಾರದು ಹಾಗೂ ಎಲ್ಲೆಂದರಲ್ಲಿ ಉಗುಳಬಾರದು. ಮಕ್ಕಳಲ್ಲಿ ತೀವ್ರ ಉಸಿರಾಟ, ಮೈ ನೀಲಿಯಾಗುವುದು, ಸಾಕಷ್ಟು ದ್ರವ ಪದಾರ್ಥ ಸೇವನೆಗೆ ತೊಂದರೆ, ಎಚ್ಚರ ತಪ್ಪುವಿಕೆ, ಅತಿಯಾದ ಕಿರಿಕಿರಿ, ತೀವ್ರತರ ಜ್ವರ ಮತ್ತು ಕೆಮ್ಮು, ಜ್ವರದ ಜತೆ ಮೇಮೇಲೆ ಗಂಧೆಗಳು ಏಳುವುದು ಅಪಾಯದ ಚಿಹ್ನೆಗಳಾಗಿವೆ.

See also  ಸಿಹಿ ಆರೋಗ್ಯಕ್ಕೆ ಕಹಿಯಾಗದಿರಲಿ..

ದೊಡ್ಡವರಲ್ಲಿ ಉಸಿರಾಟದ ತೊಂದರೆ, ಎದೆ ಹಾಗೂ ಹೊಟ್ಟೆಯಲ್ಲಿ ನೋವು ಅಥವಾ ಒತ್ತಡ, ಇದ್ದಕ್ಕಿದ್ದಂತೆ ತಲೆ ಸುತ್ತುವಿಕೆ ಹಾಗೂ ತೀವ್ರ ಅಥವಾ ನಿರಂತರ ವಾಂತಿಯಾಗುವುದು ಸೋಂಕಿತರಲ್ಲಿನ ಅಪಾಯದ ಚಿಹ್ನೆಗಳಾಗಿವೆ. ಆರೋಗ್ಯವೇ ಭಾಗ್ಯ ಹೀಗಿರುವಾಗ ಕಾಯಿಲೆ ಬಂದ ಬಳಿಕ ಹೆಣಗಾಡುವ ಬದಲು ಬರದಂತೆ ಎಚ್ಚರ ವಹಿಸುವುದು ಉತ್ತಮ. ಜತೆಗೆ ಕಾಯಿಲೆಗೆ ತುತ್ತಾದವರು ಎಚ್ಚರ ವಹಿಸುವ ಮೂಲಕ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು