ಬೇಸಿಗೆ ಬಂತೆಂದರೆ ರೋಗಗಳು ಕೂಡ ನಮ್ಮನ್ನರಸಿ ಬರುತ್ತವೆ. ಅದರಲ್ಲೂ ಬೇಸಿಗೆ ಕಾಲ ಎಂದರೆ ಸಾಂಕ್ರಾಮಿಕ ರೋಗ ಹರಡುವುದಕ್ಕೊಂದು ಪ್ರಸಕ್ತ ಕಾಲ ಎಂದರೆ ತಪ್ಪಾಗಲಾರದು. ಹೀಗಾಗಿ ನಾವೆಷ್ಟು ಜಾಗರೂಕತೆಯಿಂದ ಇರುತ್ತೇವೆಯೋ ಅಷ್ಟೇ ಒಳ್ಳೆಯದು ಎಂಬುವುದರಲ್ಲಿ ಎರಡು ಮಾತಿಲ್ಲ.
ಬೇಸಿಗೆಯಲ್ಲಿ ನೀರಿಗೆ ತೊಂದರೆ ಹೀಗಾಗಿ ಶುಚಿತ್ವ ಕಾಪಾಡುವುದು ಕಷ್ಟವೇ. ಚರಂಡಿಯಲ್ಲಿ ತುಂಬಿಕೊಂಡ ತ್ಯಾಜ್ಯಗಳು, ಹರಿಯದೆ ನಿಂತ ನೀರು, ಶುಚಿತ್ವ ಕಾಣದ ಸಾರ್ವಜನಿಕ ಸ್ಥಳಗಳೆಲ್ಲವೂ ರೋಗ ಹರಡುವ ತಾಣಗಳಾಗಿ ಮಾರ್ಪಾಡಾಗಿ ಬಿಡುತ್ತವೆ. ಸೊಳ್ಳೆ, ನೊಣಗಳ ಸಂಖ್ಯೆ ಹೆಚ್ಚಾಗಿ ಇವು ಸಾಂಕ್ರಾಮಿಕ ರೋಗಗಳನ್ನು ಹರಡುವಲ್ಲಿಯೂ ತಮ್ಮ ಪಾತ್ರ ವಹಿಸುತ್ತವೆ. ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ತಿನ್ನುವುದು, ಕುಡಿಯುವುದು ಕೂಡ ಅಪಾಯವೇ. ಯಾವಾಗ ಏನಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ. ಅದರಲ್ಲೂ ಸಾಂಕ್ರಾಮಿಕ ರೋಗಗಳು ಬಂದರಂತು ಅವು ಇಡೀ ಮನೆಯವರಿಗೆ ಹರಡಿ ಎಲ್ಲರನ್ನೂ ರೋಗಿಗಳನ್ನಾಗಿ ಮಾಡಿ ಬಿಡುತ್ತದೆ.
ಶುಚಿತ್ವದ ಕೊರತೆ, ಕಲುಷಿತ ನೀರು ಸೇರಿದಂತೆ ಹಲವು ಕಾರಣಗಳಿಂದಾಗಿ ಹಲವೆಡೆ, ಜಾಂಡೀಸ್, ಚಿಕೂನ್ ಗುನ್ಯಾ, ಹೆಚ್1ಎನ್1, ಟೈಪಾಯಿಡ್, ಮಲೇರಿಯಾ ಮೊದಲಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು, ಜನರನ್ನು ಬೇಸ್ತು ಬೀಳಿಸಿದೆ. ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲಿ ಹಣ್ಣು, ತಿಂಡಿ, ಉಪಹಾರ ಕ್ಯಾಂಟೀನ್ ಗಳು ಇರುವುದರಿಂದ ಅವರು ಸ್ವಚ್ಛತೆ ವಹಿಸದೆ ಹೋದರೆ ರೋಗಗಳಿಗೆ ಆಹ್ವಾನ ನೀಡಿದಂತೆಯೇ. ಹೀಗಾಗಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಗಳು ಈ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.
ಈಗಾಗಲೇ ಮೈಸೂರು ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಪೌರ ನಿಗಮ ಕಾಯ್ದೆ 1976 ಸೆಕ್ಷನ್ 343 ರಂತೆ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹೋಟೆಲ್, ಕ್ಯಾಂಟಿನ್, ದರ್ಶಿನಿ, ಫಾಸ್ಟ್ ಫುಡ್ ಉದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು, ತಟ್ಟೆ ಮತ್ತು ಲೋಟಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆದು ಶುಚಿಗೊಳಿಸಬೇಕು, ನೆಲ ಮತ್ತು ಟೇಬಲ್ಗಳನ್ನು ಕ್ರಿಮಿನಾಶಕ ಉಪಯೋಗಿಸಿ, ಶುಚಿಗೊಳಿಸಬೇಕು. ಅಡುಗೆ ಮನೆ ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳ ತಯಾರಿಕೆಗೆ ಉಪಯೋಗಿಸುವ ದಿನಸಿ ಪದಾರ್ಥ ಉತ್ತಮ ಗುಣಮಟ್ಟದ್ದಾಗಿರಬೇಕು. ಹೋಟೆಲ್ನ ಸುತ್ತಮುತ್ತಲ ಆವರಣ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು. ಸಪ್ಲೆಯರ್ಸ್ ಆರೋಗ್ಯವಂತರಾಗಿರಬೇಕು ಹಾಗೂ ಗ್ರಾಹಕರಿಗೆ ಊಟ ತಿಂಡಿ ಸರಬರಾಜು ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಎಪ್ರಾನ್ ಮತ್ತು ಗ್ಲೌಸ್ ಹಾಕಿ ಕೊಂಡಿರಬೇಕು. ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ನೀರಿನ ಸೌಲಭ್ಯವಿರಬೇಕು ಹಾಗೂ ಆಗಿಂದಾಗ್ಯೆ ಶುಚಿಗೊಳಿಸಬೇಕು. ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್ ಒಳಗಡೆ ಇಡಬೇಕು. ಫುಟ್ಪಾತ್ ನಲ್ಲಿ ತಿಂಡಿ ಪದಾರ್ಥ ಮಾರಾಟ ಮಾಡುವವರು, ಕೊಯ್ದು ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಹಾಗೂ ಧೂಳು ಬೀಳದಂತೆ ಗಾಜಿನ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಇಟ್ಟು ಮಾರಾಟ ಮಾಡುವಂತೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ರೀತಿ ಎಲ್ಲೆಡೆಯೂ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ಬೇಸಿಗೆಯಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗುತ್ತದೆ. ಜತೆಗೆ ನಮ್ಮ ಮನೆ ಸುತ್ತಮುತ್ತಲೂ ಸ್ವಚ್ಛತೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಕೂಡ ಅಗತ್ಯವಾಗಿದೆ. ನಾವೆಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೆಯೋ ಅಷ್ಟೇ ರೋಗಗಳಿಂದ ದೂರವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಈ ಬಾರಿಗೆ ಕುಡಿಯುವ ನೀರಿಗೆ ಸಮಸ್ಯೆಯುಂಟಾಗಿರುವುದರಿಂದ ನೀರನ್ನು ಉಪಯೋಗಿಸುವಾಗಲೂ ಎಚ್ಚರಿಕೆ ಅಗತ್ಯ. ಶುದ್ದೀಕರಣಗೊಂಡ ನೀರನ್ನು ಬಳಸುವುದು, ಅಥವಾ ಕುದಿಸಿ ಆರಿಸಿ ಕುಡಿಯುವುದು ಆರೋಗ್ಯದ ದೃಷ್ಠಿಯಿಂದ ಉತ್ತಮ.