ಮನಸ್ಸಿನ ನಿಗ್ರಹ ಏಕೆ ಬೇಕು? ಈ ಪ್ರಶ್ನೆಯನ್ನು ಹಲವರು ತಮ್ಮಲ್ಲೇ ತಾವು ಕೇಳಿಕೊಂಡಿರುತ್ತಾರೆ. ಮನಸ್ಸಿನ ಚಂಚಲತೆಯಿಂದ ಹಲವು ಅವಘಡಗಳನ್ನು ಅನುಭವಿಸಿದ ಹೆಚ್ಚಿನ ಜನರು ನನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕಪ್ಪ ಎಂಬ ನಿರ್ಧಾರಕ್ಕೂ ಬಂದುಬಿಡುತ್ತಾರೆ. ಆದರೆ ಅಂದುಕೊಂಡಷ್ಟು ಸುಲಭದಲ್ಲಿ ನಮ್ಮ ಮನಸ್ಸಿಲ್ಲ.
ಪ್ರತಿಯೊಬ್ಬ ಮನುಷ್ಯನೂ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳದೆ ಹೋದರೆ ಅದರಿಂದ ಉಂಟಾಗುವ ಹಲವಾರು ತೊಂದರೆಗಳಿಗೆ ಒಳಗಾಗುವುದು ನಿಶ್ಚಿತ. ಮನಸ್ಸಿನ ನಿಯಂತ್ರಣ ಅಂದರೆ ಮನೋನಿಗ್ರಹ ಇದು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದುದಲ್ಲ. ಬದಲಾಗಿ ಪ್ರತಿಯೊಬ್ಬ ಮನುಷ್ಯನೂ ಅವನ ಸಂರಕ್ಷಗೆ ಬದುಕಿನ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯವೂ ಹೌದು.
ನಮ್ಮ ಹಿಡಿತಕ್ಕೆ ಸಿಲುಕದ ಮನಸ್ಸನ್ನು ಒಂದು ಹಂತಕ್ಕೆ ತಂದು ನಿಯಂತ್ರಿಸದೆ ಹೋದರೆ ಬುದ್ದಿಭ್ರಮಣೆಯಂತಹ ಆಪತ್ತನ್ನು ಎದುರಿಸಬೇಕಾಗುವುದಂತು ನಿಶ್ಚಿತ. ಮನೋನಿಗ್ರಹದಿಂದ ಒಬ್ಬ ವ್ಯಕ್ತಿ ಪಡೆಯಬಹುದಾದ ಪರಮಸ್ಥಿತಿಯೆಂದರೆ ಆಧ್ಯಾತ್ಮ ಸಿದ್ಧಿಯೇ… ಮನೋನಿಗ್ರಹದಿಂದ ಪ್ರಾಪ್ತವಾಗುವ ಇತರ ಶ್ರೇಯಸ್ಸುಗಳೂ ಉಂಟು. ನಿಗ್ರಹಕ್ಕೆ ಬಂದ ಮನಸ್ಸನ್ನು ಸುಲಭವಾಗಿ ಏಕಾಗ್ರಗೊಳಿಸಬಹುದು. ಈ ಏಕಾಗ್ರತೆಯಿಂದ ಜ್ಞಾನೋದಯವಾಗುತ್ತದೆ. ಮನೋನಿಗ್ರಹದಿಂದ ತಾನೇ ತಾನಾಗಿ ನಿಷ್ಪನ್ನವಾಗುವ ಪರಿಣಾಮವೆಂದರೆ, ವ್ಯಕ್ತಿತ್ವಕ್ಕೆ ಒದಗುವ ಸಮಗ್ರತೆ. ಅಂಧ ದೃಢ ಮನಸ್ಕನಾದವನು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗುತ್ತಾನೆ. ಮನೋ ನಿಗ್ರಹದಿಂದ ಶಾಂತಿ, ಶಾಂತಿಯಿಂದ ಚಿತ್ತ ಸ್ವಾಸ್ಥ್ಯ, ಚಿತ್ತ ಸ್ವಾಸ್ಥ್ಯದಿಂದ ಸುಖ. ಈ ರೀತಿಯಾದ ಸುಖವನ್ನು ಪಡೆದ ವ್ಯಕ್ತಿ ಇತರರನ್ನೂ ಸುಖವಾಗಿಡಲು ಪ್ರಯತ್ನಪಡುತ್ತಾನೆ. ಅಷ್ಟೇ ಅಲ್ಲ ಈತ ಮಾಡುವ ಕಾರ್ಯಗಳು ಸಹ ಗುಣಮಟ್ಟದಿಂದ ಕೂಡಿರುವುದರೊಂದಿಗೆ ಹಲವು ವಿಚಾರಗಳಲ್ಲಿಯೂ ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತಾನೆ.ಮನೋನಿಗ್ರಹಕ್ಕೊಳಗಾದ ವ್ಯಕ್ತಿ ಮಾನಸಿಕ ತುಮುಲಗಳ ಪರಿಣಾಮವಾದ ಮಾನಸಿಕ ಹಾಗೂ ದೈಹಿಕ ಜಾಢ್ಯಗಳಿಂದ ಮುಕ್ತನಾಗಿರುತ್ತಾನೆ.
ಯಾರು ಮನಸ್ಸನ್ನು ತನ್ನ ಹತೋಟಿಗೆ ತಂದುಕೊಂಡವನಾಗುತ್ತಾನೋ, ಅವನಲ್ಲಿ ಉದಾತ್ತ ಭಾವನೆಗಳು ಸ್ಥಾಯಿಯಾಗುತ್ತವೆ. ಆತನ ಸುಪ್ತ ಶಕ್ತಿಗಳು ಜಾಗೃತವಾಗುತ್ತವೆ. ಅಷ್ಟೇ ಅಲ್ಲ, ಕ್ರಮೇಣ ಉದಾತ್ತ ಸ್ಥಿತಿಗೂ ಏರುತ್ತಾನೆ. ಬದುಕಿನ ಯಾವುದೇ ಕ್ಷೇತ್ರದಲ್ಲಿ ಬಹುಕಾಲ ಉಳಿಯಬಲ್ಲ ಪ್ರಗತಿಯನ್ನಾಗಲೀ, ಅಭಿವೃದ್ಧಿಯನ್ನಾಗಲೀ, ಶಾಂತಿಯನ್ನಾಗಲೀ ಸಾಧಿಸುವುದರತ್ತ ಮುನ್ನಡೆಯುತ್ತಾನೆ. ಮನೋನಿಗ್ರಹದಲ್ಲಿ ಎದುರಿಸಬೇಕಾದ ಆತಂಕಗಳೂ ಇಲ್ಲದಿಲ್ಲ. ಮನೋನಿಗ್ರಹಕ್ಕೆ ಅಗತ್ಯವಾದ ದೃಢವಾದ ಸಂಕಲ್ಪ ಅಥವಾ ಇಚ್ಛಾಶಕ್ತಿಯನ್ನು ಗಳಿಸಿಕೊಳ್ಳಬೇಕಾದರೆ ಮತ್ತೆ ಮತ್ತೆ ಮನಸ್ಸನ್ನು ಆ ದಿಕ್ಕಿನಲ್ಲಿ ಪ್ರತಿಬೋಧಿಸಬೇಕಾಗುತ್ತದೆ. ಈ ಪ್ರತಿ ಬೋಧನೆಯಿಲ್ಲದಿದ್ದರೆ ನಾವು ಏನೂ ಅಲ್ಲ. ನಮ್ಮ ಇಡೀ ಭವಿಷ್ಯತ್ತಿನ ಸ್ವರೂಪವೇ ನಾವು ಎಷ್ಟರ ಮಟ್ಟಿಗೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಿದ್ದೇವೆ ಎನ್ನುವುದನ್ನು ಅವಲಂಭಿಸಿದೆ ಎಂಬ ಸಂಗತಿಯನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಮನುಷ್ಯನಿಗೆ ಅಗತ್ಯವಾದ ಆತನ ಮೂಲಭೂತ ಲೌಕಿಕ ಅಪೇಕ್ಷೆಗಳನ್ನು ಪೂರೈಸುವುದರ ಜತೆಗೆ ಅದಕ್ಕಿಂತಲೂ ಮಹತ್ತರವಾದ ಸಂಗತಿಗಳೂ ಇವೆ ಎನ್ನುವುದನ್ನು ಒಪ್ಪಬಹುದು. ಆದರೆ ಮನಸ್ಸನ್ನು ನಿಗ್ರಹಿಸಬೇಕೆಂಬ ನಮ್ಮ ಇಚ್ಛಾಶಕ್ತಿಯು ಇನ್ನೂ ದೃಢವಾಗಿ ರೂಪುಗೊಳ್ಳುವ ಅಗತ್ಯವಿದೆ.
ಭಾರತೀಯ ಲೋಕೋಕ್ತಿಯೊಂದರಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿ ಭಗವಂತನ ಕೃಪೆಗೆ ಪಾತ್ರನಾಗಬಹುದು. ಗುರುಹಿರಿಯರ ಆಶೀರ್ವಾದವೂ ಅವನ ಮೇಲಿರಬಹುದು. ಆದರೆ ಆತ ತನ್ನ ಮನಸ್ಸಿನ ಕೃಪೆಗೆ ತಾನೇ ಪಾತ್ರನಾಗದಿದ್ದರೆ ಅವನು ನಾಶವಾದಂತೆಯೇ ಸರಿ. ಈ ಜಗತ್ತನ್ನು ಗೆಲ್ಲಬಲ್ಲರು? ಎಂಬ ಪ್ರಶ್ನೆಗೆ ಯಾರೂ ತನ್ನ ಮನಸ್ಸನ್ನು ಗೆದ್ದಿದ್ದಾರೋ ಅವರು ಮಾತ್ರ ಈ ಜಗತ್ತನ್ನು ಗೆಲ್ಲಬಲ್ಲರು ಎಂಬ ಸಂಸ್ಕೃತ ಸುಭಾಷಿತ ಅರ್ಥಪೂರ್ಣ ಎನಿಸುತ್ತದೆ.