ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ನಾಲ್ಕು ಹೆಜ್ಜೆ ಹಾಕಿ ನಡೆಯುವಂತಿಲ್ಲ, ಕಠಿಣ ಶ್ರಮದ ಕೆಲಸ ಮಾಡುವಂತಿಲ್ಲ, ನೀರು ಕುಡಿದಷ್ಟು ಸಾಕಾಗುತ್ತಿಲ್ಲ, ತಲೆನೋವು, ಸುಸ್ತು ಹೀಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇದೆ.
ಸೆಖೆಯಿಂದಾಗಿ ಮೈಯೆಲ್ಲ ಕೆರೆದುಕೊಳ್ಳುವ ಪರಿಸ್ಥಿತಿ. ಬೀಸುವ ಗಾಳಿಯಲ್ಲೂ ತಂಪು ಕಾಣುತ್ತಿಲ್ಲ. ಹೀಗಾದರೆ ಹೇಗಪ್ಪಾ ಎಂಬುದು ಎಲ್ಲರ ಪ್ರಶ್ನೆ. ಹೊಟ್ಟೆಪಾಡಿಗಾಗಿ ರಣಬಿಸಿಲಲ್ಲಿ ಕುಳಿತು ವ್ಯಾಪಾರ ಮಾಡುವವರು, ಕೂಲಿ ಕಾರ್ಮಿಕರು ಹೀಗೆ ಹಲವು ಕಠಿಣ ಶ್ರಮದ ಕೆಲಸ ಮಾಡುವವರು ಬಿಸಲೆಂದು ಕೈಕಟ್ಟಿ ಕೂರಲಾಗುವುದಿಲ್ಲ. ತಮ್ಮ ನಿತ್ಯದ ಕೆಲಸವನ್ನು ಮಾಡಲೇ ಬೇಕು. ಆದರೆ ಬೇಸಿಗೆಯಲ್ಲಿ ಯಾರೇ ಆಗಲಿ ಒಂದಷ್ಟು ಕಾಳಜಿ ವಹಿಸುವುದು ಒಳ್ಳೆಯದು.
ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಏನು ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದೋ ಅದನ್ನು ಮಾಡಿಕೊಳ್ಳುವುದು ಒಳ್ಳೆಯದು. ಆರೋಗ್ಯವಾಗಿದ್ದರೆ ಮಾತ್ರ ದುಡಿಯಲು ಸಾಧ್ಯ. ದುಡಿಯಬೇಕಾದರೆ ಆರೋಗ್ಯವಾಗಿರಬೇಕು. ಹೀಗಾಗಿ ತಮ್ಮ ಆರೋಗ್ಯದತ್ತ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಬಿಸಿಲಿನ ತಾಪಕ್ಕೆ ಸುಸ್ತು, ನೀರಡಿಕೆ, ತಲೆಸುತ್ತು ಮೊದಲಾದವುಗಳು ಬಾಧಿಸುವುದು ಸಾಮಾನ್ಯವಾಗಿದ್ದು, ತಲೆನೋವು ಕಾಡುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಬಿಸಿಲಿನ ಝಳಕ್ಕೆ ಸಿಕ್ಕಿ ಒದ್ದಾಡುವ ಪರಿಸ್ಥಿತಿ ಬಂದೊದಗಿದ್ದು, ಮನೆ ಒಳಗೆಯೂ ನೆಮ್ಮದಿಯಾಗಿ ಕುಳಿತುಕೊಳ್ಳದಂತಾಗಿದೆ. ಬಿಸಿಲಿನಿಂದಾಗುವ ಕೆಲವು ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.
ಬೇಸಿಗೆಯ ದಿನಗಳಲ್ಲಿ ಆದಷ್ಟು ತೆಳು ಬಣ್ಣದ ಸಡಿಲವಾದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಬೇಕು. ಆಗಾಗ್ಗೆ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರು, ಹಣ್ಣಿನ ರಸ ಪಾನಕ ಸೇವಿಸಬೇಕು. ಕಾಫಿ ಟೀ ಸೇವನೆ ಕಡಿಮೆ ಮಾಡಬೇಕು. ಕಾರ್ಬೋನೇಟೆಡ್ ಪಾನೀಯಗಳನ್ನು ತ್ಯಜಿಸಬೇಕು. ನೀರು, ಮಜ್ಜಿಗೆ, ಎಳನೀರು ಕುಡಿಯಬೇಕು. ಬೆಚ್ಚಗಿನ ಮಸಾಲೆರಹಿತ ಶುದ್ದ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಬೇಕು.
ಹೆಚ್ಚು ಉಷ್ಣಾಂಶ ಇರುವ ಬೇಸಿಗೆ ಸಂದರ್ಭದಲ್ಲಿ ವ್ಯಕ್ತಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. ಹಣೆ, ಕತ್ತು, ಪಾದ, ತೊಡೆಗಳನ್ನು ಒದ್ದೆ ಬಟ್ಟೆಯಿಂದ ಒರೆಸಬೇಕು. (ತಂಪಾದ ಅಥವಾ ಐಸ್ ನೀರನ್ನು ಒರೆಸಲು ಬಳಸಬಾರದು) ಉಪ್ಪು, ಸಕ್ಕರೆ ಬೆರೆತ ನೀರನ್ನು ಕುಡಿಸಬೇಕು. ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು.
ಬಿಸಿಲಿನ ಆಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆಯಾಗಿ ಮೊದಲಿಗೆ ಬಟ್ಟೆ, ಪಾದರಕ್ಷೆ ಸಡಿಲಿಸಿ ತೆಗೆಯಬೇಕು. ತಣ್ಣಗಿನ ನೀರನ್ನು ವ್ಯಕ್ತಿಯ ಮೇಲೆ ಸಿಂಪಡಿಸಬೇಕು. ತಂಪಾದ ನೆರಳಿನ ಜಾಗಕ್ಕೆ ಸ್ಥಳಾಂತರಿಸಿ ಗಾಳಿ ಬೀಸಬೇಕು. ದೇಹವನ್ನು ಅತಿಯಾಗಿ ತಕ್ಷಣವೇ ತಂಪು ಮಾಡಬಾರದು. ಯಾವುದೇ ಔಷಧ ನೀಡಬಾರದು. ಪ್ರಜ್ಞೆ ಬಂದ ನಂತರ ನಿಧಾನವಾಗಿ ಶುದ್ಧವಾದ ನೀರನ್ನು ಸ್ಪಲ್ಪ ಸ್ವಲ್ಪವಾಗಿ ನೀಡಬೇಕು.
ಈ ಮೊದಲೇ ಯಾವುದಾದರು ಕಾಯಿಲೆಯಿಂದ ಬಳಲುವವರು ಎಚ್ಚರಿಕೆ ವಹಿಸಬೇಕು. ಪ್ರಯಾಣ ಮಾಡುವವರು ತಮ್ಮೊಂದಿಗೆ ನೀರನ್ನು ಒಯ್ಯಬೇಕು. ಬಾಯಾರಿಕೆಯಾಗುತ್ತಿದ್ದಂತೆ ನೀರನ್ನು ಸೇವಿಸಬೇಕು. ನೀರು ಸೇವಿಸಲು ತಡ ಮಾಡಿದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ಬಸ್ ನಲ್ಲಿ ಪ್ರಯಾಣ ಮಾಡುವವರು ಅಗತ್ಯವಾಗಿ ತಮ್ಮೊಂದಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದು ಒಳ್ಳೆಯದು. ಬಿಸಿಲಿನಲ್ಲಿ ಮಕ್ಕಳು. ವಯಸ್ಸಾದವರು ನಡೆಯುವಾಗ ಕಪ್ಪು ಬಣ್ಣವಲ್ಲದ ಛತ್ರಿ ಬಳಸುವುದು ಒಳ್ಳೆಯದು. ಸಿಕ್ಕ ಸಿಕ್ಕಲ್ಲಿ ಆಹಾರ ಪದಾರ್ಥಗಳನ್ನು ಸೇವಿಸದೆ ಶುಚಿತ್ವಕ್ಕೆ ಒತ್ತು ನೀಡಬೇಕು. ಮನೆಗೆ ಸರಬರಾಜಾಗಾಗುವ ನೀರನ್ನು ನೇರವಾಗಿ ಉಪಯೋಗಿಸದೆ ಕುದಿಸಿ ಆರಿಸಿ ಮಣ್ಣಿನ ಮಡಕೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಸೇವನೆ ಮಾಡುವುದು ಅನುಕೂಲ.